ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ನಲ್ಲಿ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲು ಆಯುಕ್ತರಿಗೆ ಮನವಿ

Last Updated 11 ಜನವರಿ 2019, 12:06 IST
ಅಕ್ಷರ ಗಾತ್ರ

ಚಳ್ಳಕೆರೆ: ನಗರಸಭೆ ಬಜೆಟ್‌ನಲ್ಲಿ ನಗರದ ಸ್ವಚ್ಛತೆ ಹಾಗೂ ಜನರ ಶುದ್ಧ ಕುಡಿಯುವ ನೀರು ಪೂರೈಕೆಗೆ ಹೆಚ್ಚು ಹಣ ಮೀಸಲಿರಿಸಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ. ಭೂತಯ್ಯ ಆಯುಕ್ತರಲ್ಲಿ ಮನವಿ ಮಾಡಿದರು.

ನಗರಸಭೆಯಲ್ಲಿ ಶುಕ್ರವಾರ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಪಾವಗಡ ರಸ್ತೆಯಲ್ಲಿ ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಾಣ, ಬಳ್ಳಾರಿ, ಬೆಂಗಳೂರು ರಸ್ತೆಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕು. ಗುತ್ತಿಗೆದಾರರು ಮನಬಂದಂತೆ ರೈತರಿಂದ ಹೆಚ್ಚು ತೆರಿಗೆ ವಸೂಲಿ ಮಾಡದಂತೆ, ನಗರಸಭೆಯಿಂದಲೇ ತರಕಾರಿಗಳಿಗೆ ಸುಂಕ ನಿಗದಿಪಡಿಸಿ ರೈತರಿಗೆ ಅನುಕೂಲವಾಗಲು ದರಪಟ್ಟಿ ಬೋರ್ಡ್‍ಗಳನ್ನು ಸಂತೆ ಮೈದಾನದಲ್ಲಿ ಹಾಕಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖ ರಸ್ತೆಗಳಲ್ಲಿ ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾಗಳು ಕೆಟ್ಟಿವೆ. ಇದರಿಂದ ನಗರದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಅವುಗಳನ್ನು ದುರಸ್ತಿ ಮಾಡಿಸಬೇಕು. ತ್ಯಾಗರಾಜ ನಗರದಲ್ಲಿ ಕೋತಿಗಳ ಹಾವಳಿಯಿಂದ ಜನ ಭಯಗೊಂಡಿದ್ದಾರೆ. ಕೋತಿಗಳನ್ನು ನಿಯಂತ್ರಿಸಬೇಕು. ಗಾಂಧಿನಗರ, ಅಂಬೇಡ್ಕರ್ ನಗರ, ಜನತಾ ಕಾಲೊನಿ, ಜಗಜೀವನರಾಂ ನಗರ ಮುಂತಾದ ಕೊಳೆಗೇರಿ ಪ್ರದೇಶದಲ್ಲಿ ಕೆಲವರು, ರಸ್ತೆ ಒತ್ತುವರಿ ಮಾಡಿ ಅಕ್ರಮ ಚರಂಡಿ, ಶೌಚಾಲಯ ನಿರ್ಮಾಣ ಮಾಡಿಕೊಂಡಿರುವುದನ್ನು ಕೂಡಲೇ ತೆರವುಗೊಳಿಸಬೇಕು ಎಂದು ನಗರಸಭೆ ಸದಸ್ಯರಾದ ಜಯಣ್ಣ, ರಾಜಣ್ಣ, ಪ್ರಗತಿಪರ ರೈತ ಆರ್.ಎ.ದಯಾನಂದ ಆಗ್ರಹಿಸಿದರು.

ವಿವಿಧ ವಾರ್ಡ್‍ಗಳಲ್ಲಿ ನೀರು ಸಾಕಷ್ಟು ಪೋಲಾಗುತ್ತಿದೆ. ಇದರಿಂದ ನೀರಿನ ಅಭಾವವನ್ನು ಎದುರಿಸಬೇಕಾಗುತ್ತದೆ. ನಲ್ಲಿಗಳಿಗೆ ಮೀಟರ್ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಮುಖ್ಯ ರಸ್ತೆಗಳಲ್ಲಿನ ಫ್ಲೆಕ್ಸ್, ನೀರು ಮತ್ತು ಮನೆಗಳಿಂದ ತಪ್ಪದೇ ಸುಂಕ ವಸೂಲಿ ಮಾಡಬೇಕು. ಇದರಿಂದ ನಗರಸಭೆ ಆದಾಯ ಹೆಚ್ಚುತ್ತದೆ ಎಂದು ನಗರಸಭೆ ಸದಸ್ಯ ವಿಶುಕುಮಾರ್, ನಾಗರಿಕ ರಮೇಶ, ಪ್ರಶಾಂತ್ ಹೇಳಿದರು.

ನಗರಸಭೆ ಪೌರಾಯುಕ್ತ ಜೆ.ಟಿ. ಹನುಮಂತರಾಜ, ರೈಲ್ವೆ ಹಳಿಗೆ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕು. ಫ್ಲೆಕ್ಸ್, ನಲ್ಲಿ ತೆರಿಗೆ ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ನಗರಸಭೆ ಸದಸ್ಯೆ ಕವಿತಾ, ವ್ಯವಸ್ಥಾಪಕ ನಾಸಿರ್‍ಭಾಷಾ, ಎಂಜಿನಿಯರ್‍ ಲೋಕೇಶ್, ವಿನಯ್, ಪರಿಸರ ಎಂಜಿನಿಯರ್ ನರೇಂದ್ರಬಾಬು, ವಿಮಲಾ, ಗಣೇಶ್, ಲೆಕ್ಕ ಅಧೀಕ್ಷಕಿ ಪಾರ್ವತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT