ಸೋಮವಾರ, ಸೆಪ್ಟೆಂಬರ್ 16, 2019
27 °C
ಮೂರು ಜಲಾಶಯಗಳಲ್ಲಿ ಡೆಡ್‌ ಸ್ಟೋರೇಜ್‌ ದಾಟದ ನೀರಿನ ಮಟ್ಟ

ಕೋಟೆನಾಡಿನ ಜಲಾಶಯಗಳೆಲ್ಲಾ ಖಾಲಿ

Published:
Updated:
Prajavani

ಚಿತ್ರದುರ್ಗ: ಧಾರಾಕಾರ ಮಳೆಗೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಆದರೆ, ವಾಣಿವಿಲಾಸ ಸಾಗರ ಸೇರಿ ಜಿಲ್ಲೆಯ ಮೂರು ಜಲಾಶಯಗಳ ನೀರಿನ ಮಟ್ಟ ಮಾತ್ರ ಡೆಡ್‌ಸ್ಟೋರೇಜ್‌ ದಾಟಿಲ್ಲ. ಉತ್ತರ ಕರ್ನಾಟಕದ ನದಿಪಾತ್ರದ ಗ್ರಾಮಗಳು ಅತಿವೃಷ್ಟಿಗೆ ನಲುಗಿದರೆ, ಕೋಟೆನಾಡು ಮಳೆಗಾಗಿ ಪ್ರಾರ್ಥಿಸುತ್ತಿದೆ.

ಹಿರಿಯೂರು ತಾಲ್ಲೂಕಿನ ವಿ.ವಿ.ಸಾಗರ ಜಲಾಶಯ, ಗಾಯತ್ರಿ ಜಲಾಶಯ ಹಾಗೂ ಮೊಳಕಾಲ್ಮುರು ಸಮೀಪದ ರಂಗಯ್ಯನದುರ್ಗ ಜಲಾಶಯ ಬರಿದಾಗಿವೆ. ವೇದಾವತಿ ನದಿಯಲ್ಲಿ ಅಲ್ಪಪ್ರಮಾಣದ ನೀರು ಹರಿದಿದ್ದರಿಂದ ವಿ.ವಿ.ಸಾಗರಕ್ಕೆ ಎರಡೂವರೆ ಅಡಿ ನೀರು ಬಂದಿದೆ.

ಬರದ ನಾಡಿಗೆ ಆಸರೆಯಾಗಿದ್ದ ವಿ.ವಿ.ಸಾಗರ ಜಲಾಶಯ ದಶಕಗಳಿಂದ ಭರ್ತಿಯಾಗಿಲ್ಲ. ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಮಳೆಯನ್ನು ಕಂಡು ವೇದಾವತಿ ನದಿ ಹರಿದು ಜಲಾಶಯ ಸೇರಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಉದ್ಭವಿಸುವ ವೇದಾವತಿ ನದಿಗೆ ತರೀಕೆರೆ ಹಾಗೂ ಬೇಲೂರು ತಾಲ್ಲೂಕಿನ ಹಳ್ಳಗಳು ಸೇರುತ್ತವೆ. ಅಯ್ಯನ ಕೆರೆ, ಮದಗದ ಕೆರೆ ತುಂಬಿದ ಬಳಿಕ ಇದು ನದಿಯ ಸ್ವರೂಪ ಪಡೆಯುತ್ತದೆ. ಕಾಫಿನಾಡಿನಲ್ಲಿ 55 ಕಿ.ಮೀ ಹರಿದು ಹೊಸದುರ್ಗ ತಾಲ್ಲೂಕಿನ ಭಾಗಶೆಟ್ಟಿಹಳ್ಳಿ ಸಮೀಪ ಚಿತ್ರದುರ್ಗ ಪ್ರವೇಶಿಸುತ್ತದೆ. ಪಶ್ಚಿಮಘಟ್ಟದಲ್ಲಿ ತಿಂಗಳ ಕಾಲ ಸುರಿದ ಮಳೆಗೆ ನದಿಯಲ್ಲಿ ನಾಲ್ಕಾರು ದಿನ ಮಾತ್ರ ನೀರು ಹರಿದಿದೆ.

ನದಿಯ ಉಗಮಸ್ಥಾನದಿಂದ ವಿ.ವಿ.ಸಾಗರದವರೆಗೆ ಹಲವು ಕೃತಕ ಜಲಮೂಲಗಳನ್ನು ನಿರ್ಮಿಸಲಾಗಿದೆ. ಕೆರೆ, ಚೆಕ್‌ಡ್ಯಾಂ ಹಾಗೂ ಬ್ಯಾರೇಜ್‌ಗಳು ಭರ್ತಿಯಾಗಿ ಜಲಾಶಯಕ್ಕೆ ನೀರು ಹರಿದುಬರುವುದು ಹತ್ತು ವರ್ಷಗಳಿಂದ ಕಡಿಮೆಯಾಗಿದೆ.ಹೊಸದುರ್ಗ ಸಮೀಪದ ಬ್ಯಾರೇಜ್‌ ಸುಮಾರು ಒಂದು ಟಿಎಂಸಿ ಅಡಿ ನೀರಿನ ಸಾಮರ್ಥ್ಯ ಹೊಂದಿದೆ. 130 ಅಡಿ ಎತ್ತರದ ಜಲಾಶಯ ಇದೇ ಮೊದಲ ಬಾರಿಗೆ ಡೆಡ್‌ ಸ್ಟೋರೇಜ್‌ ತಲುಪಿತ್ತು. 2010ನೇ ಸಾಲಿನಲ್ಲಿ ಮಾತ್ರ 121 ಅಡಿ ನೀರು ಹರಿದುಬಂದಿತ್ತು.

ಸುವರ್ಣಮುಖಿ ನದಿಗೆ ಗಾಯತ್ರಿ ಜಲಾಶಯ ನಿರ್ಮಿಸಲಾಗಿದೆ. ಸುಮಾರು ಒಂದು ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯ ಇನ್ನೂ ಭರ್ತಿಯಾಗಿಲ್ಲ. ಅರ್ಧ ಟಿಎಂಸಿ ಅಡಿ ಸಾಮರ್ಥ್ಯದ ರಂಗಯ್ಯನ ದುರ್ಗ ಜಲಾಶಯ ಕೂಡ ಬರಿದಾಗಿದೆ.

Post Comments (+)