ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಖಾತೆಗೆ ₹ 10 ಸಾವಿರ ನೀಡಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಖಂಡ್ರೆ ಒತ್ತಾಯ

ನಾಳೆ ಅಭಿಯಾನ
Last Updated 27 ಮೇ 2020, 13:56 IST
ಅಕ್ಷರ ಗಾತ್ರ

ದಾವಣಗೆರೆ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಜನಸಾಮಾನ್ಯರ ಬ್ಯಾಂಕ್‌ ಖಾತೆಗೆ ₹ 10 ಸಾವಿರ ಪರಿಹಾರವನ್ನು ಜಮಾ ಮಾಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

‘ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವವರಿಗೆ ₹ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಅಂಗೈಯಲ್ಲಿ ಅರೆಮನೆ ತೋರಿಸಿದ್ದಾರೆ’ ಎಂದು ಖಂಡ್ರೆ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಆರ್ಥಿಕ ಉತ್ತೇಜನ ನೀಡಲು ಬಡವರ ಖಾತೆಗೆ ನೇರವಾಗಿ ಹಣ ಜಮಾ ಮಾಡಬೇಕು ಎಂದು ಸಾಮಾಜಿಕ ಜಾಲ ತಾಣಗಳ ಮೂಲಕ ಕಾಂಗ್ರೆಸ್‌ ನಾಯಕರು ಹಕ್ಕೊತ್ತಾಯ ಮಂಡಿಸಲಿದ್ದಾರೆ’ ಎಂದು ಹೇಳಿದರು.

‘ವಲಸೆ ಕಾರ್ಮಿಕರೊಂದಿಗೆ ಸರ್ಕಾರ ನಡೆದುಕೊಂಡ ರೀತಿ ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ವಲಸೆ ಕಾರ್ಮಿಕರಿಗೆ ಊರಿಗೆ ತೆರಳು ಬಸ್‌ ಪ್ರಯಾಣ ದರವನ್ನು ಎರಡು ಪಟ್ಟು ಹೆಚ್ಚು ಮಾಡಿದಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಟೀಕಿಸಿದ್ದರಿಂದ ಸರ್ಕಾರ ದರವನ್ನು ಇಳಿಸಿತು. ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸಂಕಷ್ಟದಲ್ಲಿದ್ದ ರೈತರ ಉತ್ಪನ್ನಗಳನ್ನು ಖರೀದಿಸುವ ಮೂಲಕ ನೆರವಾಗಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿ ದಿನೇಶ ಶೆಟ್ಟಿ, ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌, ಸದಸ್ಯರಾದ ದೇವರಮನೆ ಶಿವಕುಮಾರ್‌, ಜಿಲ್ಲಾ ಪಂಚಾಯಿತಿ ಸದಸ್ಯರಾದ ಕೆ.ಎಸ್‌. ಬಸವಂತಪ್ಪ, ಕೆ.ಎಚ್‌. ಓಬಳಪ್ಪ, ಮುಖಂಡರಾದ ವೀರಭದ್ರಪ್ಪ, ಅಯೂಬ್‌ ಪೈಲ್ವಾನ್‌, ಶಿವಗಂಗಾ ಬಸವರಾಜ್‌ ಅವರೂ ಇದ್ದರು.

ಜೂನ್‌ 7ಕ್ಕೆ ಪದಗ್ರಹಣ
‘ಕೆಪಿಸಿಸಿ ಅಧ್ಯಕ್ಷರ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಬೆಂಗಳೂರಿನಲ್ಲಿ ಈ ಬಾರಿ ಜೂನ್‌ 7ರಂದು ವಿನೂತನವಾಗಿ ನಡೆಸಲಾಗುತ್ತಿದೆ. ಸಮಾರಂಭದಲ್ಲಿ ಸಂವಿಧಾನದ ಪೀಠಿಕೆಯನ್ನು ಓದಿ ಪ್ರಮಾಣ ವಚನ ಸ್ವೀಕರಿಸಲಾಗುತ್ತದೆ. 9 ಸಾವಿರ ಕೇಂದ್ರಗಳಲ್ಲಿ ಏಕಕಾಲಕ್ಕೆ ಆನ್‌ಲೈನ್‌ ಮೂಲಕ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಒಂದು ಕಡೆ ಕಾಂಗ್ರೆಸ್‌ ಧ್ವಜ ಹಾಗೂ ಇನ್ನೊಂದು ಕಡೆಗೆ ರಾಷ್ಟ್ರ ಧ್ವಜ ಇರಲಿದೆ. ಪಕ್ಷದನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಈಶ್ವರ ಖಂದ್ರೆ ಮಾಹಿತಿ ನೀಡಿದರು.

ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ಅನ್ಯಾಯ
ಕೇಂದ್ರ ಸರ್ಕಾರವು ಬರ, ನೆರೆ ಪರಿಹಾರ ವಿತರಣೆಯ ಜೊತೆಗೆ ಇದೀಗ ಕೋವಿಡ್‌ ಪರಿಹಾರ ವಿತರಣೆಯಲ್ಲೂ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

‘ಪರಿಹಾರ ವಿತರಣೆಯಲ್ಲಿ ರಾಜ್ಯಕ್ಕೆ ತಾರತಮ್ಯ ಎಸಗಿದ್ದರೂ ರಾಜ್ಯದ ಬಿಜೆಪಿಯ 25 ಸಂಸದರು ತುಟಿ ಪಿಟಕ್‌ ಅನ್ನುತ್ತಿಲ್ಲ. ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರವೂ ಜನರಿಗೆ ಸಮರ್ಪಕವಾಗಿ ತಲುಪಿಲ್ಲ. ಪರಿಹಾರ ವಿತರಿಸಲು ₹ 50 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕು’ ಎಂದು ಆಗ್ರಹಿಸಿದರು.

**

ರಾಜೀವ್‌ ಗಾಂಧಿ ವಸತಿ ಯೋಜನೆಯ ಹಗರಣದಲ್ಲಿ ನನ್ನ ವಿರುದ್ಧ ಆರೋಪ ಮಾಡಿರುವುದರ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಯೋಜನೆ ಅನುಷ್ಠಾನದಲ್ಲಿ ಶಾಸಕರ ಪಾತ್ರ ಇರುವುದಿಲ್ಲ.
– ಈಶ್ವರ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT