ಮಂಗಳವಾರ, ಡಿಸೆಂಬರ್ 1, 2020
23 °C
ನಾಟಕೋತ್ಸವದಲ್ಲಿ ಅಮೆರಿಕ ಕನ್ನಡಪರ ಸಂಘಟನೆ ನಾವಿಕದ ಅಧ್ಯಕ್ಷ ವಲ್ಲೀಶ್ ಶಾಸ್ತ್ರಿ

ಹೊಸದುರ್ಗ: ಅಮೆರಿಕದಲ್ಲಿ ಕನ್ನಡ ಕಲಿ ಶಾಲೆ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಅಮೆರಿಕಕ್ಕೆ ಕರ್ನಾಟಕದಿಂದ ವಲಸೆ ಬಂದವರು ಮಾತ್ರ ಪೂರ್ಣ ಪ್ರಮಾಣದಲ್ಲಿ ಕನ್ನಡ ಮಾತನಾಡುವರು. ಅಮೆರಿಕದಲ್ಲೇ ಹುಟ್ಟಿ ಬೆಳೆದ ಮಕ್ಕಳಿಗೆ ಕನ್ನಡ ಕಲಿಯಲು ಈ ಕನ್ನಡ ರಂಗಭೂಮಿ ಸಹಕಾರಿ. ಅನೇಕ ಕಡೆ ‘ಕನ್ನಡ ಕಲಿ’ ಶಾಲೆಗಳು ನಡೆಯುತ್ತಿವೆ. ಇವುಗಳ ಮೂಲಕ ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ’ ಎಂದು ಅಮೆರಿಕ ಕನ್ನಡಪರ ಸಂಘಟನೆ ನಾವಿಕದ ಅಧ್ಯಕ್ಷ ವಲ್ಲೀಶ್ ಶಾಸ್ತ್ರಿ ತಿಳಿಸಿದರು.

ಸಾಣೇಹಳ್ಳಿ ತರಳಬಾಳು ಶಾಖಾ ಮಠದಿಂದ ನಡೆಯುತ್ತಿರುವ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಗುರುವಾರ ‘ಅಮೆರಿಕದಲ್ಲಿ ಕನ್ನಡ ರಂಗಭೂಮಿ’ ಕುರಿತು ಉಪನ್ಯಾಸ ನೀಡಿದರು.

‘ಅಮೆರಿಕದಲ್ಲಿ ಕನ್ನಡ ನಾಟಕ ರಂಗ ವಲಸೆ ಬಂದವರಿಗೆ ಸೀಮಿತವಾಗಿದೆ. ಕೆಲ ವಲಸಿಗರಿಗೆ ಇಲ್ಲಿ ಅವಕಾಶಗಳು ಸಿಕ್ಕು ಅದರಿಂದ ಪ್ರೋತ್ಸಾಹಗೊಂಡಿದ್ದಾರೆ. ಕೆಲವೆಡೆ ಚಿಕ್ಕ-ಚಿಕ್ಕ ರಂಗ ತಂಡಗಳು ಸಕ್ರಿಯವಾಗಿವೆ. ಇವು ತಮ್ಮದೇ ನಾಟಕಗಳನ್ನು ಪ್ರದರ್ಶಿಸುತ್ತವೆ. ಸರ್ಕಾರದಿಂದ ಅನುದಾನ ಇರುವುದಿಲ್ಲ. ನಾವಿಕ, ಅಕ್ಕ ಸಮ್ಮೇಳನಗಳಲ್ಲಿ ದೊಡ್ಡ ಪ್ರಮಾಣದ ವೇದಿಕೆಯಲ್ಲಿ ಹೆಚ್ಚು ನಾಟಕಗಳಾಗುವವು. ಕನ್ನಡ ರಂಗಭೂಮಿ ಇನ್ನೂ ಅಮೆರಿಕದಲ್ಲಿ ಜೀವಂತವಾಗಿದೆ ಎನ್ನುವುದೇ ಸಂತೋಷದ ವಿಚಾರ’ ಎಂದರು.

‘ಶರಣರ ಕೃಷಿ’ ವಿಷಯ ಕುರಿತು ಉಪನ್ಯಾಸ ನೀಡಿದ ಚಾಮರಾಜನಗರದ ಡಿವೈಎಸ್‌ಪಿ ಪ್ರಿಯದರ್ಶಿನಿ ಈಶ್ವರ ಸಾಣಿಕೊಪ್ಪ, ‘12ನೇ ಶತಮಾನದ ಶರಣರಿಗೆ ಪ್ರಮುಖ ತಳಹದಿ ಅನುಭವ ಮಂಟಪ. ಇದು ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್. ಅಲ್ಲಿ ಬಸವಣ್ಣ ಭಕ್ತಿಯ, ಚನ್ನಬಸವಣ್ಣ ಜ್ಞಾನದ, ಅಕ್ಕಮಹಾದೇವಿ ವೈರಾಗ್ಯದ, ಅಲ್ಲಮ ಆಧ್ಯಾತ್ಮಿಕ, ಸಿದ್ಧರಾಮೇಶ್ವರ ಕಾಯಕದ ಮುಖವಾಗಿದ್ದರು’ ಎಂದರು.

ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಣಿ ಮತ್ತು ಎಚ್‌.ಎಸ್.ನಾಗರಾಜ್ ವಚನಗೀತೆ, ಭಾವಗೀತೆ ಮತ್ತು ರಂಗಗೀತೆಗಳನ್ನು ಹಾಡಿದರು. ಸಾಣೇಹಳ್ಳಿ ಶಿವಸಂಚಾರದ ಕಲಾವಿದರು ‘ಮುದುಕನ ಮದುವೆ’ ನಾಟಕ ಪ್ರದರ್ಶಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.