ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಮಿಗಳೂ ಮೂಢನಂಬಿಕೆಯಿಂದ ಹಿಂದೆ ಬಿದ್ದಿಲ್ಲ: ಸಾಣೇಹಳ್ಳಿ ಶ್ರೀ

Last Updated 22 ಜೂನ್ 2021, 6:31 IST
ಅಕ್ಷರ ಗಾತ್ರ

ಸಾಣೇಹಳ್ಳಿ (ಹೊಸದುರ್ಗ): ಕೆಲವು ಮಠದ ಸ್ವಾಮಿಗಳು ಕೂಡ ಮೂಢನಂಬಿಕೆಯಿಂದ ಹಿಂದೆ ಬಿದ್ದಿಲ್ಲ. ಮೌಢ್ಯ ಆಚರಣೆಗಳಿಂದ ಕೊರೊನಾ ಓಡಿಸಲು ಸಾಧ್ಯವಿಲ್ಲ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಮಾನವ ಬಂಧುತ್ವ ವೇದಿಕೆಯಿಂದ ಆಯೋಜಿಸಿದ್ದ 10 ದಿನಗಳ ವೆಬಿನಾರ್ ಸರಣಿಯ 9ನೇ ದಿನ ‘ಕೋವಿಡ್ ಮತ್ತು ಮೂಢನಂಬಿಕೆಗಳು’ ವಿಷಯ ಕುರಿತ ವೆಬಿನಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋಡಿ ಮಠದ ಸ್ವಾಮಿಗಳು ಕೊರೊನಾ ಹೋಗಲು 10 ವರ್ಷ ಬೇಕು ಎಂದರು. ಹಿಂದಿನ ವರ್ಷ ಜಲಪ್ರಳಯ ಆಗುತ್ತೆ. ಕೋಟ್ಯಂತರ ಜನರನ್ನು ಹೂಳಿರುವುದರಿಂದ ಅವರು ಹೊರಬರುತ್ತಾರೆ. ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ಸಾಮೂಹಿಕ ಸಾವು ನೋವುಗಳಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ. ಹೀಗೆ ಭವಿಷ್ಯ ನುಡಿಯುವವರು ಪರಿಹಾರ ಸೂಚಿಸಬಹುದಲ್ಲವೇ? ವಿಜ್ಞಾನ ಯುಗದಲ್ಲೂ ಅಜ್ಞಾನ ಪಸರಿಸುವವರಿಗೆ ಕೊರತೆ ಇಲ್ಲ. ನಂಬಿಕೆ ಜನರಲ್ಲಿದ್ದವು. ಬರಬರುತ್ತ ನಂಬಿಕೆಗಳು ಮೂಢನಂಬಿಕೆಗಳಾಗಿ ಜನರ ಬದುಕನ್ನು ಕಿತ್ತುಕೊಂಡವು. ಆದರೆ, ಇವುಗಳಿಂದ ಬಿಡುಗಡೆ ಹೊಂದುವ ವಿವೇಕ ಬರಲಿಲ್ಲ. ಇದು ವಿಜ್ಞಾನ, ತಂತ್ರಜ್ಞಾನ ಯುಗ. ಪ್ರತಿಯೊಂದನ್ನೂ ಪ್ರಶ್ನಿಸುವ ಮನೋಭಾವ ಇದೆ. ಆದರೆ, ಹಿಂದೆಂದೂ ಇರದಷ್ಟು ಮೂಢನಂಬಿಕೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವದೆಲ್ಲೆಡೆ ಕೊರೊನಾ ಕಾಟದಿಂದ ಜನ ತತ್ತರಿಸಿದ್ದರೆ, ಸೂಕ್ತ ಚುಚ್ಚುಮದ್ದು ಔಷಧ ಇಲ್ಲದೇ ಪರದಾಡುತ್ತಿದಾರೆ. ಇಂತಹ ಸಮಯದಲ್ಲಿ ಜನರನ್ನು ಮೂರ್ಖರನ್ನಾಗಿಸಲು ಹೊಟ್ಟೆಪಾಡಿಗೆ ಅನೇಕ ವಿಚಾರಗಳನ್ನು ಹೇಳುತ್ತ ಜನರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಮಂದಿರ, ಮಸೀದಿ, ಚರ್ಚ್‌ಗಳನ್ನು ಬಂದ್ ಮಾಡಿದ್ದರು. ಆಗ ದೇವರ ಆಟ ನಡೆಯಲಿಲ್ಲ. ಈಗ ಕೊರೊನಾ ವೈರಸ್ ‘ಕೊರೊನಮ್ಮ’ ಆಗಿ ಪರಿವರ್ತನೆಯಾಗಿದೆ ಎಂದು ಹೇಳಿದರು.

‘ನೋಡವ್ವಾ ತಾಯಿ ಹೀಗೆಲ್ಲ ಕಾಡಿಸ್ಬೇಡ. ನಮ್ಮ ಜೀವಾ ಸಾಕಾಗೇತಿ, ನಿನಗೆ ಹಬ್ಬ ಮಾಡಿ, ಹೋಳಿಗೆ ಎಡೆ ಇಟ್ಟಿದ್ದೇವೆ. ನೀನು ನಮ್ಮೂರು ಬಿಟ್ಟು ಹೋಗು. ನಮ್ಮನ್ನ ಕಾಡಿಸದಂತೆ ಬಿಟ್ಟುಹೋಗು’ ಎಂದು ಕೊರೊನಮ್ಮನ ಹಬ್ಬ ಆಚರಿಸಿದ್ದಾರೆ. ಹೀಗೆ ಮಾಡಿದರೆ ಕೊರೊನಾ ಹೋಗಲು ಸಾಧ್ಯವೇ? ಅದಕ್ಕೆ ಬೇಕಿರುವುದು ಹಬ್ಬವಲ್ಲ. ಸರ್ಕಾರ ನಿಗದಿಪಡಿಸಿದ ಚುಚ್ಚುಮದ್ದು ಪಡೆದುಕೊಳ್ಳುವುದು. ಅಂತರ ಕಾಪಾಡುವುದು, ಸ್ವಚ್ಛತೆ ಕಾಪಾಡುವುದರಿಂದ ಓಡಿಸಬಹುದು ಎಂದು ಸಲಹೆ ನೀಡಿದರು.

ವಿಜ್ಞಾನ ಚಿಂತಕ ಡಾ.ಎಚ್.ಎಸ್.ನಿರಂಜನಾರಾಧ್ಯ, ‘ಕೊರೊನಾದಂತಹ ವೈರಾಣುಗಳು 100 ವರ್ಷಕ್ಕೊಮ್ಮೆ ಕಾಡಿವೆ. ಈಗ ಕೊರೊನಾ ರೂಪದಲ್ಲಿ ಬಂದಿದೆ. ಜನರು ಎಚ್ಚರ ವಹಿಸಿದರೆ ಸಾಕು. ಜಗತ್ತಿನಲ್ಲಿ ಬಹುತೇಕ ಜನರಲ್ಲಿ ಮೂಢನಂಬಿಕೆ ಇರುತ್ತೆ. ತಾವು ನಂಬಿರುವುದನ್ನು ಮತ್ತೊಬ್ಬರನ್ನು ಕೊಲೆ ಮಾಡುವ ಮಟ್ಟಕ್ಕೂ ಹೋಗುತ್ತದೆ. ಆಧಾರ ರಹಿತ ಮೂಢನಂಬಿಕೆ ಇರುತ್ತದೆ. ಏಸು ಹೇಗೆ ಜನಿಸಿದರು. ನೀರಿನಿಂದ ವೈನ್ ತಯಾರಿಸುವುದು ಹೇಗೆ? ಎಂಬ ಪ್ರಶ್ನೆಗಳಿವೆ. ಆದರೆ, ಇದನ್ನು ಪ್ರಶ್ನಿಸುವವರ ಮೇಲೆ ದಾಳಿ ನಡೆಸುತ್ತಾರೆ. ಇಂತವರನ್ನು ಅಂಧಭಕ್ತರು ಎನ್ನುತ್ತೇವೆ’ ಎಂದರು.

ಆರಂಭದಲ್ಲಿ ವೆಬಿನಾರ್ ನಿರ್ವಹಿಸಿದ ಪತ್ರಕರ್ತ ಡಾ.ಪ್ರದೀಪ್ ಮಾಲ್ಗುಡಿ, ‘ಕೊರೊನಾ ಸಮಯದಲ್ಲಿ ಹೆಚ್ಚು ಸುಳ್ಳು ಸುದ್ದಿಗಳು, ಮೌಢ್ಯ ಹರಡತೊಡಗಿದೆ. ಅದರಲ್ಲೂ ಕೋವ್ಯಾಕ್ಸಿನ್ ಪಡೆದವರ ದೇಹದಲ್ಲಿ ಕರೆಂಟ್ ಉತ್ಪತ್ತಿಯಾಗುತ್ತದೆ. ಆಯಸ್ಕಾಂತ ಶಕ್ತಿ ಉಂಟಾಗಿದೆ ಎಂದು ವರದಿಗಳನ್ನು ಸುದ್ದಿ ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಇದು ನಮ್ಮ ದೇಶವನ್ನು ವೈಜ್ಞಾನಿಕವಾಗಿ ಅತ್ಯಂತ ಹಿಂದಕ್ಕೆ ಕೊಂಡೊಯ್ದಿರುವುದರ ಉದಾಹರಣೆ’ ಎಂದು ತಿಳಿಸಿದರು.

ವೆಬಿನಾರ್ ಮುನ್ನಡೆಸಿದ ಡಾ.ಲೀಲಾ ಸಂಪಿಗೆ, ‘ಮತ್ತೆ ಕಲ್ಯಾಣದಂತಹ ಕಾರ್ಯಕ್ರಮಗಳ ಮೂಲಕ ಸಾಣೇಹಳ್ಳಿ ಪಂಡಿತಾರಾಧ್ಯ ಸ್ವಾಮೀಜಿ ನಿರಂತರವಾಗಿ ಮೂಢನಂಬಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಮಾನವ ಬಂಧುತ್ವ ವೇದಿಕೆಯಿಂದ ಮೂಢನಂಬಿಕೆ ವಿರುದ್ಧ ಸತೀಶ್ ಜಾರಕಿಹೊಳಿಯವರು ಚಳವಳಿ ಮಾದರಿಯಲ್ಲಿ ಪ್ರಯತ್ನಿಸುತ್ತಿದ್ದಾರೆ’ ಎಂದರು.

ಸಾಣೇಹಳ್ಳಿ ಮಠದ ಸಂಗೀತ ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT