ಕಳಚಿದ ನಾಯಕ ಸಮುದಾಯದ ಕೊಂಡಿ

7
ಇಹಲೋಕ ತ್ಯಜಿಸಿದ ರಾಜಕೀಯ ಮುತ್ಸದಿ ಚಳ್ಳಕೆರೆ ತಿಪ್ಪೇಸ್ವಾಮಿ

ಕಳಚಿದ ನಾಯಕ ಸಮುದಾಯದ ಕೊಂಡಿ

Published:
Updated:
Deccan Herald

ಚಿತ್ರದುರ್ಗ: ಹಿರಿಯ ರಾಜಕಾರಣಿ, ಮಾಜಿ ಸಚಿವ, ವಾಲ್ಮೀಕಿ ಗುರುಪೀಠ ಸಂಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಚಳ್ಳಕೆರೆಯ ತಿಪ್ಪೇಸ್ವಾಮಿ (77) ಬೆಂಗಳೂರಿನಲ್ಲಿ ನಿಧನರಾಗಿದ್ದು, ನಾಯಕ ಸಮುದಾಯದ ಕೊಂಡಿ ಕಳಚಿದಂತಾಗಿದೆ.

ಮಿದುಳು ಪಾರ್ಶವಾಯುಗೆ ತುತ್ತಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಬುಧವಾರ ಇಹಲೋಕ ತ್ಯಜಿಸಿದ್ದಾರೆ.

ರಾಜಕೀಯ ಮನ್ನಣೆಗಾಗಿ ಹೋರಾಡಿದವರು: ನಾಲ್ಕೈದು ದಶಕಗಳ ತಮ್ಮ ರಾಜಕೀಯ ಜೀವನದಲ್ಲಿ ನಾಯಕ ಸಮುದಾಯಕ್ಕೆ ರಾಜಕೀಯ ಮನ್ನಣೆ ದೊರಕಿಸಿಕೊಡಲು ಹೋರಾಟ ನಡೆಸಿದವರು. 1970 ರ ದಶಕದಲ್ಲಿ ರಾಜಕೀಯ ಪ್ರವೇಶಿಸಲು ಉತ್ಸಾಹ ತೋರಿ ಪುರಸಭೆಗೆ ಸ್ಪರ್ಧಿಸಿ 1980ರಲ್ಲಿ ಅಧ್ಯಕ್ಷರಾದರು.

1985ರಲ್ಲಿ ರಲ್ಲಿ ಪ್ರಥಮ ಬಾರಿಗೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ತಮ್ಮ ಅಧಿಕಾರಾವಧಿಯಲ್ಲಿ ಮುನ್ಸಿಪಲ್ ಕಾಲೇಜನ್ನು ಸರ್ಕಾರಿ ಕಾಲೇಜನ್ನಾಗಿ ಪರಿವರ್ತಿಸಿದರು. ಅಷ್ಟೇ ಅಲ್ಲದೆ, ಅದಕ್ಕೆ ಸರ್ಕಾರಿ ಅನುದಾನವನ್ನೂ ಕೊಡಿಸಿದರು.

ಚಳ್ಳಕೆರೆ ಪಟ್ಟಣವಾಗಿದ್ದ ಸಂದರ್ಭದಲ್ಲಿ ರಾಜ್ಯಮಟ್ಟದ ನಾಯಕ ಸಮುದಾಯದ ಬೃಹತ್ ಸಮಾವೇಶ ಆಯೋಜಿಸಿ ಅಂದಿನ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರನ್ನು ಕರೆಸಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡುವಂತೆ ಸಭೆಯಲ್ಲಿ ಒತ್ತಾಯಿಸಿದ್ದರು.

ಎಚ್.ಡಿ. ದೇವೇಗೌಡರ ನೇತೃತ್ವದ ಸರ್ಕಾರದಲ್ಲಿ ಅಬಕಾರಿ ಹಾಗೂ ಜೆ.ಎಚ್. ಪಟೇಲ್ ಆಡಳಿತದಲ್ಲಿ ಸಣ್ಣ ನೀರಾವರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ವಾಲ್ಮೀಕಿ ಸಮುದಾಯದ ಗುರು ಪುಣ್ಯಾನಂದಪುರಿ ಸ್ವಾಮೀಜಿಯೊಂದಿಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ನಾಯಕ ಸಮುದಾಯವನ್ನು ಸಂಘಟಿಸಿದರು. ಎಲ್ಲರ ಸಹಕಾರ ಪಡೆದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ 'ಶ್ರೀ ವಾಲ್ಮೀಕಿ ಗುರುಪೀಠ' ಸ್ಥಾಪಿಸಲು ಶ್ರಮಿಸಿದ್ದಾರೆ.

ನಾಯಕ ಸಮುದಾಯ ಸಂಘಟನೆ: ಹಿಂದುಳಿದ ವರ್ಗಗಳ ಗುಂಪಿನಲ್ಲಿದ್ದ ನಾಯಕ, ವಾಲ್ಮೀಕಿ, ಬೇಡ ಹಾಗೂ ಇತರೆ ಪರ್ಯಾಯ ಪದ ಹೊಂದಿರುವ ಈ ಸಮುದಾಯವನ್ನು ಪರಿಶಿಷ್ಟ ಪಂಗಡದ (ಎಸ್ಟಿ) ಜನಾಂಗಕ್ಕೆ ಸೇರಿಸಲು ಶ್ರಮಿಸಿದ್ದಾರೆ. ಅಬಕಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಈ ಜನಾಂಗದ ಸರ್ವತೋಮುಖ ಅಭಿವೃದ್ಧಿಗಾಗಿ ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯವನ್ನು ಮಾಡಲು ಕಾರಣಕರ್ತರಾಗಿದ್ದಾರೆ. ರಾಮಕೃಷ್ಣ ಹೆಗಡೆ ಅವರ ಆಡಳಿತದಲ್ಲಿ ನಾಯಕ ಸಮುದಾಯದಿಂದ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೇರ ನೇಮಕಾತಿ ಮೂಲಕ ಗೆಜೆಟೆಡ್ ಹುದ್ದೆ ದೊರೆಯುವಂತೆ ಮಾಡಿದರು.

ಚಳ್ಳಕೆರೆ ತಾಲ್ಲೂಕಿಗೆ ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಶ್ರಮಿಸಿದ್ದಾರೆ. ಅಲ್ಲದೆ, ಪರಿಶಿಷ್ಟ ಪಂಗಡದವರೆ ಹೆಚ್ಚಾಗಿರುವ ಚಳ್ಳಕೆರೆ ತಾಲ್ಲೂಕು ದೇವರಮರಿಕುಂಟೆ ಗ್ರಾಮದಲ್ಲಿ ವಾಲ್ಮೀಕಿ ಪ್ರೌಢಶಾಲೆ ಹಾಗೂ ಕಾಟಪ್ಪನಹಟ್ಟಿಯಲ್ಲಿ ಕಾಟಮಲಿಂಗೇಶ್ವರ ಪ್ರೌಢಶಾಲೆ ಸ್ಥಾಪಿಸಿದ್ದಾರೆ. ಚಳ್ಳಕೆರೆ ನಗರದಲ್ಲಿ ನಾಯಕರ ವಸತಿ ನಿಲಯ ಮತ್ತು ವಾಲ್ಮೀಕಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಪ್ರಧಾನ ಪಾತ್ರ ವಹಿಸಿದರು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಾಯಕ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಿಸಿದರು.

ವಾಲ್ಮೀಕಿ ಜಯಂತಿಗೆ ಕಾರಣೀಭೂತ: ಸರ್ಕಾರದಿಂದಲೇ ವಾಲ್ಮೀಕಿ ಜಯಂತಿ ಆಚರಿಸುವಂತೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರ ಮನ ಒಲಿಸಿದವರಲ್ಲಿ ತಿಪ್ಪೇಸ್ವಾಮಿ ಪ್ರಮುಖರು. ಚಿತ್ರದುರ್ಗ ಜಿಲ್ಲೆಯಲ್ಲಿ ವಾಲ್ಮೀಕಿ ಬ್ಯಾಂಕ್, ವೀರ ಮದಕರಿನಾಯಕ ಕಂಚಿನ ಪ್ರತಿಮೆ ಸ್ಥಾಪನೆ, ಮದಕರಿ ವೃತ್ತ ನಿರ್ಮಾಣದ ರೂವಾರಿಯೂ ಆದರು.

 

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !