ಶಿಕ್ಷಕರನ್ನು ಮತ್ತೆ ಕಾಡುತ್ತಿರುವ ಹೆಚ್ಚುವರಿ ಗುಮ್ಮ !

7
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಗಳ ಶಿಕ್ಷಕರ ಎತ್ತಂಗಡಿಗೆ ಸಿದ್ಧತೆ

ಶಿಕ್ಷಕರನ್ನು ಮತ್ತೆ ಕಾಡುತ್ತಿರುವ ಹೆಚ್ಚುವರಿ ಗುಮ್ಮ !

Published:
Updated:
Deccan Herald

ಹೊಳಲ್ಕೆರೆ: ಶಿಕ್ಷಕರ ವರ್ಗಾವಣೆಗೂ ಮೊದಲು ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆಗೆ ಸಿದ್ಧತೆ ನಡೆಯುತ್ತಿದ್ದು, ಶಿಕ್ಷಕರಲ್ಲಿ ಆತಂಕ ಸೃಷ್ಠಿಯಾಗಿದೆ.

ಹಿಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಾಗಿದೆ. ರಾಜ್ಯದಲ್ಲಿ 10,686 ಶಿಕ್ಷಕರನ್ನು ಹೆಚ್ಚುವರಿ ಎಂದು ಆಯ್ಕೆ ಮಾಡಿದ್ದು, ತಾಲ್ಲೂಕಿನಲ್ಲಿ 66 ಶಿಕ್ಷಕರನ್ನು ಗುರುತಿಸಲಾಗಿದೆ. ಅವರನ್ನು ಕೌನ್ಸೆಲಿಂಗ್ ಮೂಲಕ ಅಗತ್ಯ ಇರುವ ಶಾಲೆಗಳಿಗೆ ಮರು ಹೊಂದಾಣಿಕೆ ಮಾಡಲು ಸಿದ್ಧತೆ ನಡೆದಿದೆ.

ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನಿಯೋಜಿಸುತ್ತಿದೆ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ವಿದ್ಯಾರ್ಥಿಗಳ ಸಂಖ್ಯೆ 10ರ ಒಳಗೆ ಇದ್ದರೆ ಓರ್ವ ಶಿಕ್ಷಕ, 11ರಿಂದ 60ರವರೆಗೆ ಇಬ್ಬರು ಶಿಕ್ಷಕರು, 61ಕ್ಕಿಂತ ಹೆಚ್ಚಿದ್ದರೆ ಮೂವರು ಶಿಕ್ಷಕರನ್ನು ನಿಗದಿ ಮಾಡಲಾಗಿದೆ. 6 ಮತ್ತು 7ನೇ ತರಗತಿಯಲ್ಲಿ 10 ವಿದ್ಯಾರ್ಥಿಗಳವರೆಗೆ ಓರ್ವ ಶಿಕ್ಷಕ, 11ರಿಂದ 70 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರು, 70ರ ನಂತರ ಮೂವರು ಶಿಕ್ಷಕರನ್ನು ನಿಗದಿಪಡಿಸಲಾಗಿದೆ. ಇದು ಅವೈಜ್ಞಾನಿಕ ಪದ್ಧತಿ ಎಂಬ ಮಾತುಗಳು ಶಿಕ್ಷಕ ವಲಯದಲ್ಲಿ ಕೇಳಿಬರುತ್ತಿದೆ.

ವಿದ್ಯಾರ್ಥಿಗಳ ಕೊರತೆಗೆ ಶಿಕ್ಷಕರು ಹೊಣೆಯೇ?

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿದೆ’ ಎಂಬುದು ಕೆಲವರ ವಾದ.

ಆದರೆ ಸಾಮಾನ್ಯವಾಗಿ ಎಲ್ಲಾ ಸರ್ಕಾರಿ ಶಾಲೆಗಳಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ಎಲ್ಲಾ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆ? ಎಂದು ಕೆಲವು ಶಿಕ್ಷಕರು ಪ್ರಶ್ನಿಸುತ್ತಾರೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿರುವುದಕ್ಕೆ ನಾನಾ ಕಾರಣಗಳಿವೆ. ಶಾಲೆಗಳಲ್ಲಿ ಮೂಲ ಸೌಕರ್ಯಗಳಿಲ್ಲದಿರುವುದು, ವಿಷಯವಾರು ಶಿಕ್ಷಕರ ಕೊರತೆ, ಪೋಷಕರ ಮನೋಭಾವವೂ ಇದಕ್ಕೆ ಕಾರಣ. ಸರ್ಕಾರ ಮಿತಿಯಿಲ್ಲದೆ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡುತ್ತಿರುವುದೂ ಸರ್ಕಾರಿ ಶಾಲೆಗಳ ಅವನತಿಗೆ ಕಾರಣ ಎಂಬುದು ಶಿಕ್ಷಕ ವಲಯದಲ್ಲಿ ಕೇಳಿಬರುತ್ತಿವೆ.

ಶಿಕ್ಷಕರಲ್ಲಿ ಗೊಂದಲ:

ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿರುವ ಶಾಲೆಗಳಲ್ಲಿ ಹೆಚ್ಚು ವರ್ಷ ಸೇವೆ ಸಲ್ಲಿಸಿರುವ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರೆಂದು ಗುರುತಿಸಲಾಗುತ್ತದೆ. ಆದರೆ ಈ ಶಿಕ್ಷಕರು ಈಗಾಗಲೇ ಒಂದು ಪ್ರದೇಶಕ್ಕೆ ಹೊಂದಿಕೊಂಡಿದ್ದಾರೆ. ಕೆಲವರು ನಿವೃತ್ತಿಯ ಅಂಚಿನಲ್ಲಿದ್ದರೆ, ಮತ್ತೆ ಕೆಲವರು ಅನಾರೋಗ್ಯಕ್ಕೂ ತುತ್ತಾಗಿದ್ದಾರೆ. ಒಂದು ಪ್ರದೇಶದಲ್ಲಿ ಮನೆಕಟ್ಟಿಕೊಂಡು ಸಮೀಪದ ಶಾಲೆಯಲ್ಲಿ ನೆಮ್ಮದಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂತಹ ಶಿಕ್ಷಕರನ್ನು ಬೇರೆಡೆಗೆ ನಿಯೋಜಿಸಿದರೆ ಮಾನಸಿಕವಾಗಿ ಕುಗ್ಗುತ್ತಾರೆ. ಇವರು ಬೋಧನೆಯಲ್ಲೂ ಆಸಕ್ತಿ ಕಳೆದುಕೊಳ್ಳುತ್ತಾರೆ’ ಎನ್ನುತ್ತಾರೆ ಹಿರಿಯ ಶಿಕ್ಷಕರೊಬ್ಬರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !