ಚಿತ್ರದುರ್ಗ: ಸಂತೆ ಸ್ಥಳ ಬದಲಾವಣೆಯದ್ದೇ ಚಿಂತೆ

ಚಿತ್ರದುರ್ಗ: ಕೋವಿಡ್ ಪ್ರಕರಣ ಇಳಿಮುಖವಾದ ಬೆನ್ನಲ್ಲೇ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದೆ. ಇದರಿಂದಾಗಿ ಜಿಲ್ಲೆಯಲ್ಲೂ ಆರ್ಥಿಕ ಚಟುವಟಿಕೆಗಳು ಗರಿಗೆದರಿವೆ. ಸಂತೆ ಮಾರುಕಟ್ಟೆಗಳು ಸಹಜತೆಗೆ ಮರಳಿವೆ. ಆದರೆ, ಹಿಂದಿನಷ್ಟು ಜನಸಂದಣಿ ಮಾತ್ರ ಈಗ ಕಂಡುಬರುತ್ತಿಲ್ಲ.
ಸಂಪೂರ್ಣ ಸಡಿಲಿಕೆಯಿಂದಾಗಿ ವ್ಯಾಪಾರಸ್ಥರು ತರಕಾರಿ ಮಾರಾಟ ಮಾಡಲು ಮುಂದಾಗಿದ್ದಾರೆ. ಬೆಲೆಗಳು ಇಳಿಕೆ ಆಗದಿರುವುದು ಗ್ರಾಹಕರನ್ನು ಚಿಂತೆಗೆ ನೂಕಿದೆ. ಈ ನಡುವೆಯೂ ಅನೇಕ ತರಕಾರಿ ವ್ಯಾಪಾರಸ್ಥರಿಗೆ ಹೆಚ್ಚು ನಷ್ಟ ಉಂಟಾಗಿಲ್ಲ. ಆದರೆ, ಸ್ಥಳ ಬದಲಾವಣೆಯ ಚಿಂತೆ ಕಾಡುತ್ತಿದೆ.
ಕೋವಿಡ್ ಎರಡನೇ ಅಲೆಯ ಅಬ್ಬರದ ವೇಳೆ ಜನಜಂಗುಳಿ ತಪ್ಪಿಸಲು ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಖಾಸಗಿ ಬಸ್ ನಿಲ್ದಾಣದ ತರಕಾರಿ ಮಾರುಕಟ್ಟೆಯನ್ನು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನಕ್ಕೆ ಹಾಗೂ ಸಂತೆ ಹೊಂಡದ ಮುಂಭಾಗವಿದ್ದ ಮಾರುಕಟ್ಟೆಯನ್ನು ಹಳೆ ಮಾಧ್ಯಮಿಕ ಶಾಲಾ ಮೈದಾನಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಈಗಲೂ ಇಲ್ಲಿಯೇ ಸಂತೆಗಳು ಮುಂದುವರಿದಿವೆ. ಆದರೆ, ಮಳೆಯಾದರೆ ತರಕಾರಿಗಳು ಕೊಳೆತು ಹೋಗುವ ಆತಂಕ ವ್ಯಾಪಾರಸ್ಥರನ್ನು ಕಾಡುತ್ತಿದೆ. ಗ್ರಾಹಕರು ಕೈತಪ್ಪಬಹುದು ಎಂಬ ಆತಂಕದಿಂದ ಅರ್ಧಕ್ಕರ್ಧ ವ್ಯಾಪಾರಸ್ಥರು ಮೊದಲಿದ್ದ ಸ್ಥಳಕ್ಕೆ ಮರಳಿದ್ದಾರೆ.
ಲಾಕ್‌ಡೌನ್ ಜಾರಿಯಾದ ಮೊದಲೆರಡು ವಾರ ತರಕಾರಿಗಳ ಬೆಲೆ ಕಡಿಮೆ ಇತ್ತು. ದಿನ ಕಳೆದಂತೆ ಏರಿಕೆ ಕಂಡಿತು. ಜತೆಗೆ ತಳ್ಳುವ ಗಾಡಿಗಳ ವ್ಯಾಪಾರಸ್ಥರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಸಂತೆ ಮಾರುಕಟ್ಟೆಗಳಲ್ಲಿ ಕೊಂಚ ಕಡಿಮೆ ಬೆಲೆಗೆ ಸಿಗಬಹುದು ಎಂಬ ಕಾರಣಕ್ಕೆ ಹಾಗೂ ಬೆಳಿಗ್ಗೆ 6ರಿಂದ 10ರವರೆಗೂ ಮಾತ್ರ ಖರೀದಿಗೆ ಅವಕಾಶ ಇದ್ದಿದ್ದರಿಂದ ಆ ಎರಡು ತಿಂಗಳ ಅವಧಿಯಲ್ಲಿ ಜನ ಖರೀದಿಸಲು ಮುಗಿಬೀಳುತ್ತಿದ್ದರು. ವ್ಯಾಪಾರಸ್ಥರು ಉತ್ಸುಕರಾಗಿದ್ದರು ಬೆಳಿಗ್ಗೆ 9.30ಕ್ಕೆ ಪೊಲೀಸರು ವ್ಯಾಪಾರ ಚಟುವಟಿಕೆ ಬಂದ್ ಮಾಡಿಸುತ್ತಿದ್ದರು.
ಮೈದಾನದಲ್ಲಿ ಹಣ್ಣು, ಹೂ, ಸೊಪ್ಪು ಮಾರಾಟಕ್ಕೂ ಅವಕಾಶವಿದೆ. ಆದರೆ, ಲಾಕ್‌ಡೌನ್ ವೇಳೆ ಹೂವಿನ ದರ ಕಡಿಮೆ ಇದ್ದರೂ ಖರೀದಿಸಲು ಗ್ರಾಹಕರು ಮುಂದಾಗಲಿಲ್ಲ. ದೇಗುಲಗಳು ತೆರೆದ ನಂತರ ನಿಧಾನವಾಗಿ ಚೇತರಿಕೆ ಕಾಣಲಾರಂಭಿಸಿದೆ. ಹಣ್ಣು ವ್ಯಾಪಾರ ಮೊದಲ ಸ್ಥಿತಿಗೆ ಮರಳಿದರೂ ಸೇಬು ಸೇರಿ ಇತರೆ ಹಣ್ಣುಗಳ ದರ ಇಳಿಕೆಯಾಗದ ಕಾರಣ ಖರೀದಿ ಪ್ರಮಾಣವನ್ನು ಗ್ರಾಹಕರೇ ಕೊಂಚ ಕಡಿಮೆ ಮಾಡಿದ್ದಾರೆ.
ಅಗತ್ಯ ವಸ್ತುಗಳಾದ ದಿನಸಿ, ಮೀನು, ಮಾಂಸ ಖರೀದಿಸಲು ಲಾಕ್‌ಡೌನ್ ಅವಧಿಯಲ್ಲಿ ಜನ ಮುಗಿಬೀಳುತ್ತಿದ್ದರು. ಈಗ ರಾತ್ರಿ 9ರವರೆಗೂ ಅವಕಾಶ ಇರುವ ಕಾರಣ ಆಗಿಂದಾಗ್ಗೆ ಖರೀದಿಸಿ ಹಿಂದಿರುಗುತ್ತಿದ್ದಾರೆ. ಈ ಸ್ಥಳಗಳಲ್ಲೂ ಹೆಚ್ಚು ಜನ ಕಂಡುಬರುತ್ತಿಲ್ಲ.
ಬೀದಿ ಬದಿ ವ್ಯಾಪಾರ, ಸಿಮೆಂಟ್, ಕಬ್ಬಿಣದ ಅಂಗಡಿಗಳ ಬಳಿಯೂ ಮೊದಲಿನಂತೆ ಹೆಚ್ಚು ಗ್ರಾಹಕರಿಲ್ಲ. ಹಿಟ್ಟಿನ ಗಿರಣಿ, ಪಡಿತರ, ಬೇಕರಿ, ಸ್ವೀಟ್ಸ್ ಸ್ಟಾಲ್, ಹೋಟೆಲ್, ಮದ್ಯದಂಗಡಿ, ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರ ಸಂಖ್ಯೆ ಏರಿಕೆ ಕಾಣುತ್ತಿದೆ. ಆದರೆ, ಕೆಲವೆಡೆ ಕೋವಿಡ್ ಮಾರ್ಗಸೂಚಿ ಪಾಲನೆಯಾದರೆ, ಇನ್ನು ಹಲವೆಡೆ ಉಲ್ಲಂಘನೆ ಆಗುತ್ತಿದೆ. ಕೋವಿಡ್ ಹೋಗಿದೆ ಎಂಬಂತೆ ಶೇ 25ರಷ್ಟು ಜನ ಮಾಸ್ಕ್ ಧರಿಸುವುದನ್ನು ಬಿಟ್ಟಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮೊದಲಿನಿಂದಲೂ ಸೋಮವಾರ ಸಂತೆ ನಡೆಯುವ ಕಾರಣಕ್ಕೆ ವಾರಾಂತ್ಯದ ಲಾಕ್‌ಡೌನ್ ಮುಗಿದ ವಾರದ ಪ್ರತಿ ಸೋಮವಾರ ತರಕಾರಿ, ಸೊಪ್ಪು, ಹಣ್ಣು ಖರೀದಿಸಲು ಮೈದಾನದ ಮಾರುಕಟ್ಟೆಯಲ್ಲಿ ಜನ ಮುಗಿಬೀಳುತ್ತಿದ್ದರು. ಆದರೆ, ಕಳೆದ ಎರಡು ವಾರದಿಂದ ಸಂತೆಯಲ್ಲೂ ಹೆಚ್ಚು ಜನ ಕಂಡುಬರುತ್ತಿಲ್ಲ. ತರಕಾರಿ ವ್ಯಾಪಾರಸ್ಥರಲ್ಲಿ ಅನೇಕರು ಈಗ ಮಾಸ್ಕ್ ಧರಿಸುತ್ತಿಲ್ಲ.
ರದ್ದಾದ ಸಂತೆ
ಕೋವಿಡ್ ಆರಂಭಕ್ಕೂ ಮುನ್ನ ಹಿರಿಯೂರು ನಗರದ ವೇದಾವತಿ ಬಡಾವಣೆಯಲ್ಲಿ ಸಂತೆ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ರದ್ದಾದ ಸಂತೆ ಒಂದೂವರೆ ವರ್ಷ ಕಳೆದರೂ ಆರಂಭವಾಗಿಲ್ಲ. ಆದರೆ, ನೆಹರೂ ಮೈದಾನದಲ್ಲಿ ಬೆಳಿಗ್ಗೆ 6ರಿಂದ ಬೆಳಿಗ್ಗೆ 9.30ರವರೆಗೂ ಕೆಲ ವ್ಯಾಪಾರಿಗಳು ತರಕಾರಿ, ಸೊಪ್ಪು, ಹೂ ಮಾರಾಟ ಮಾಡುತ್ತಿದ್ದಾರೆ.
ಸಂತೆ ಇಲ್ಲದ ಕಾರಣ ತಳ್ಳುವ ಗಾಡಿಗಳು, ಆಟೊಗಳು, ಸೈಕಲ್‌ಗಳಲ್ಲಿ ಹೆಚ್ಚಾಗಿ ತರಕಾರಿ, ಸೊಪ್ಪು, ಹಣ್ಣು, ಹೂ ಮಾರಾಟ ಮಾಡುವವರ ಸಂಖ್ಯೆ ಮೊದಲಿಗಿಂತಲೂ ಅಧಿಕವಾಗಿದೆ. ಕೋವಿಡ್–ಲಾಕ್‌ಡೌನ್‌ನಿಂದಾಗಿ ಅನೇಕರು ಉದ್ಯೋಗ ಕಳೆದುಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಮನೆ ಬಾಗಿಲಲ್ಲೇ ಈ ಅಗತ್ಯ ವಸ್ತುಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ.
ಕೋವಿಡ್ ಮಾರ್ಗಸೂಚಿ ಉಲ್ಲಂಘನೆ
ಕೋವಿಡ್ ಎರಡನೇ ಅಲೆಯ ಕಾರಣಕ್ಕೆ ಚಳ್ಳಕೆರೆ ನಗರದಲ್ಲಿ ಪರಶುರಾಂಪುರ ರಸ್ತೆ ಮಾರ್ಗ, ಪ್ರವಾಸಿ ಮಂದಿರ ಮುಂಭಾಗ, ಇಂದಿರಾ ತರಕಾರಿ ಮಾರುಕಟ್ಟೆ, ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆ ಆವರಣದ ಬನ್ನಿಮರದ ಕಟ್ಟೆ.... ಹೀಗೆ ಹಲವು ಕಡೆ ತರಕಾರಿ ಮಾರುಕಟ್ಟೆ ಸ್ಥಳಾಂತರಗೊಂಡಿತು.
ಪ್ರಸ್ತುತ ಬನ್ನಿಮರದ ಕಟ್ಟೆ ಬಳಿ ನಡೆಯುತ್ತಿರುವ ಸಂತೆಯಲ್ಲಿ ವರ್ತಕರು ಹಣ್ಣು, ಸೊಪ್ಪು ಹಾಗೂ ತರಕಾರಿಯನ್ನು ದಾರಿ ಮಧ್ಯೆ ಇಟ್ಟು ಮಾರಾಟ ಮಾಡುತ್ತಿದ್ದಾರೆ. ಪ್ರಕರಣ ಇಳಿಕೆಯಾದ ನಂತರ ಬಹುತೇಕ ವ್ಯಾಪಾರಸ್ಥರು ಮಾಸ್ಕ್ ಧರಿಸುತ್ತಿಲ್ಲ. ಕೋವಿಡ್ ಮಾರ್ಗಸೂಚಿ ಪಾಲಿಸುತ್ತಿಲ್ಲ.
‘ನಿತ್ಯ ಬೆಳಿಗ್ಗೆ ತರಕಾರಿ ಖರೀದಿಸಲು ಗ್ರಾಹಕರು ದಾರಿ ಮಧ್ಯೆ ಗುಂಪು–ಗುಂಪಾಗಿ ಸೇರುತ್ತಾರೆ. ಇದರಿಂದ ಗಾಂಧಿನಗರ, ಅಂಬೇಡ್ಕರ್, ಕುಬೇರನಗರ, ಜಗಜೀವನರಾಂ ನಗರದಲ್ಲಿ ಜನಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಕೂಡಲೇ ಸಂತೆಯನ್ನು ತೆರವುಗೊಳಿಸಬೇಕು. ಸುಸಜ್ಜಿತವಾದ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಚಳ್ಳಕೆರೆಯ ಸಂತೋಷ್ ಒತ್ತಾಯಿಸಿದ್ದಾರೆ.
ಅಸಹಾಯಕ ಸ್ಥಿತಿಯಲ್ಲಿ ವ್ಯಾಪಾರಿಗಳು
ಶ್ರೀರಾಂಪುರ: ಬಹಳ ವರ್ಷಗಳಿಂದ ತರಕಾರಿ ವ್ಯಾಪಾರದಲ್ಲಿ ತೊಡಗಿದ್ದೇವೆ. ಆದರೆ, ಕೋವಿಡ್‌ನಿಂದಾಗಿ ಒಂದೂವರೆ ವರ್ಷದಿಂದ ಈ ವ್ಯಾಪಾರದಿಂದಲೇ ಕುಟುಂಬ ನಡೆಸುವುದು ಕಷ್ಟಕರವಾಗಿದೆ. ಬೇರೆ ದಾರಿ ಇಲ್ಲದೆ, ವ್ಯಾಪಾರ ಮಾಡಲೇಬೇಕಾದ ಅನಿವಾರ್ಯವಿದೆ.
ಇದು ಶ್ರೀರಾಂಪುರದ ರಸ್ತೆ ಬದಿ ತರಕಾರಿ ವ್ಯಾಪಾರದಲ್ಲಿ ತೊಡಗಿರುವ ಅನೇಕರ ಅಸಹಾಯಕ ನುಡಿಗಳು.
‘2020ರ ಮಾರ್ಚ್‌ನಲ್ಲಿ ನಿಂತ ವಾರದ ಸಂತೆ ಇನ್ನು ಆರಂಭವಾಗಿಲ್ಲ. ಶ್ರೀರಾಂಪುರ ಹೋಬಳಿ ಕೇಂದ್ರ ಸ್ಥಾನವಾದ್ದರಿಂದ ಪ್ರತಿ ಬುಧವಾರ ಇಲ್ಲಿ ನಡೆಯುವ ಸಂತೆಗೆ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಿದ್ದರು. ಇದರಿಂದ ತರಕಾರಿ, ಸೊಪ್ಪು ವ್ಯಾಪಾರಸ್ಥರಿಗೆ ಒಂದಿಷ್ಟು ಲಾಭವಾಗುತ್ತಿತ್ತು. ರೈತರೇ ನೇರವಾಗಿ ಮಾರಾಟ ಮಾಡುತ್ತಿದ್ದ ಕಾರಣ ಖರೀದಿಸುವ ಗ್ರಾಹಕರಿಗೂ ಅನುಕೂಲವಾಗಿತ್ತು. ಆ ಪರಿಸ್ಥಿತಿ ಈಗ ಕಣ್ಮರೆಯಾಗಿದೆ. ವ್ಯಾಪಾರ ಇಲ್ಲದೆ ಕಂಗಾಲಾಗಿದ್ದೇವೆ’ ಎನ್ನುತ್ತಾರೆ ವ್ಯಾಪಾರಿ ಸಿದ್ದಪ್ಪ.
ವಾರದ ಸಂತೆ ರದ್ದಾದ ನಂತರ ಕೇವಲ ವ್ಯಾಪಾರಸ್ಥರಿಗೆ ಮಾತ್ರ ನಷ್ಟವಾಗಿಲ್ಲ. ಇಲ್ಲಿಯ ಗ್ರಾಮ ಪಂಚಾಯಿತಿಗೂ ನಷ್ಟವಾಗಿದೆ. ಸಂತೆ ಮೈದಾನದ ನೆಲಬಾಡಿಗೆ ವಸೂಲಾತಿಗಾಗಿ ಪ್ರತಿ ವರ್ಷ ನಡೆಯುತ್ತಿದ್ದ ಹರಾಜು ಪ್ರಕ್ರಿಯೆ ನಿಂತಿದೆ. ಇದರಿಂದ ಪಂಚಾಯಿತಿಗೆ ಎರಡು ಆರ್ಥಿಕ ವರ್ಷಗಳಲ್ಲಿ ₹ 2 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.