ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕನಹಟ್ಟಿ: ಟ್ರ್ಯಾಕ್ಟರ್‌ ಹೊಡೆಸಿ ಈರುಳ್ಳಿ ನಾಶಪಡಿಸಿದ ರೈತ

ಸತತ ಮೋಡ ಕವಿದ ವಾತಾವರಣ, ಮಳೆಯಿಂದಾಗಿ ಕೊಳೆರೋಗ
Last Updated 16 ಸೆಪ್ಟೆಂಬರ್ 2022, 4:03 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಸತತ ಮೋಡ ಕವಿದ ವಾತಾವರಣ ಮತ್ತು ಮಳೆಯಿಂದಾಗಿ 4 ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆಯು ಕೊಳೆರೋಗಕ್ಕೆ ತುತ್ತಾಗಿರುವುದರಿಂದ ಬೇಸತ್ತು ನಾಯಕನಹಟ್ಟಿ ಹೋಬಳಿಯ ರಾಮದುರ್ಗದ ರೈತರೊಬ್ಬರು ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನಾಶಪಡಿಸಿದ್ದಾರೆ.

‘ಕೆ.ಜಿ.ಗೆ ₹ 2,000ದಿಂದ ₹ 2,400ರಂತೆ ವಿವಿಧ ಕಂಪನಿಗಳ ಒಟ್ಟು 20 ಕೆ.ಜಿ. ಈರುಳ್ಳಿ ಬೀಜವನ್ನು ನಾಲ್ಕು ಎಕರೆ ಪ್ರದೇಶದಲ್ಲಿ ಚೆಲ್ಲಲಾಗಿತ್ತು. ಬೇಸಾಯ, ಕಳೆ, ಗೊಬ್ಬರ, ಔಷಧ, ಬೆಳೆ ಕಟಾವು, ಈರುಳ್ಳಿ ಖಾಲಿ ಚೀಲ, ಸಂಸ್ಕರಣೆ ಸೇರಿ ಒಂದು ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲು ಅಂದಾಜು ₹ 70,000ದಿಂದ ₹ 80,000 ವೆಚ್ಚ ತಗುಲುತ್ತದೆ. ಬೆಳೆ ಚೆನ್ನಾಗಿ ಬಂದಿತ್ತು. ಆದರೆ, ಹೋಬಳಿಯಲ್ಲಿ ತಿಂಗಳಿನಿಂದ ಸುರಿದ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಕೊಳೆ ರೋಗ ತಗುಲಿದ್ದು, ಸಂಪೂರ್ಣ ನಾಶವಾಗಿದೆ’ ಎಂದು ರೈತ ಚಿನ್ನಯ್ಯ ಬೇಸರ ವ್ಯಕ್ತಪಡಿಸಿದರು.

‘4 ಎಕರೆ ಪ್ರದೇಶದಲ್ಲಿ 60 ಕೆ.ಜಿ. ತೂಕದ 450 ಪ್ಯಾಕೆಟ್‌ಗಳಷ್ಟು ಬೆಳೆಯ ಗುರಿ ಹೊಂದಲಾಗಿತ್ತು. ಆದರೆ, ಕೊಳೆರೋಗದಿಂದ ಕೇವಲ 10 ಪ್ಯಾಕೆಟ್‌ನಷ್ಟು ಈರುಳ್ಳಿ ಕೈಸೇರಿದೆ. ಪರಿಣಾಮವಾಗಿ ₹ 5 ಲಕ್ಷ ನಷ್ಟ ಸಂಭವಿಸಿದೆ’ ಎಂದು ಅಳಲು ತೋಡಿಕೊಂಡರು.

‘ಕಳೆದ ವರ್ಷ ಮಹರಾಷ್ಟ್ರದಲ್ಲಿ ಅತಿವೃಷ್ಟಿಯಿಂದ ಈರುಳ್ಳಿ ಬೆಳೆ ನಷ್ಟವಾಗಿತ್ತು. ಇದರಿಂದ ಈ ಭಾಗದ ರೈತರು ಬ್ಯಾಂಕ್‌ಗಳು, ಲೇವಾದೇವಿಗಾರರು ಮತ್ತು ಸ್ಥಳೀಯವಾಗಿ ಕೈಸಾಲ ಮಾಡಿ ಲಕ್ಷಾಂತರ ರೂಪಾಯಿ ವ್ಯಯಿಸಿ ಈರುಳ್ಳಿ ಬೆಳೆ ಬೆಳೆದಿದ್ದರು. ಆದರೆ, ಮಳೆಯ ಕಾರಣ ಈರುಳ್ಳಿ ಗೆಡ್ಡೆ ಒಳಗಿನಿಂದಲೇ ಕೊಳೆತು ಹೋಗಿದೆ. ತೇವಾಂಶ ಹೆಚ್ಚಾಗಿ ಈರುಳ್ಳಿ ಮೇಲಿನ ಪೊರೆ ಕಳಚಿ ಗೆಡ್ಡೆಗಳು ಬಿಳಿಬಣ್ಣಕ್ಕೆ ತಿರುಗಿವೆ. ಹಾಕಿದ ಬಂಡವಾಳವೂ ವಾಪಸ್‌ ಬಾರದ ಕಾರಣ ಬೇಸತ್ತು ಟ್ರ್ಯಾಕ್ಟರ್ ಮೂಲಕ ಬೆಳೆಯನ್ನು ನಾಶ ಪಡಿಸಿದೆವು’ ಎಂದು ಸಂಕಷ್ಟ ಹೇಳಿಕೊಂಡರು.

***

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಬೆಳೆಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈರುಳ್ಳಿ ಬೆಳೆದು ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು.

-ಚಿನ್ನಯ್ಯ, ರಾಮದುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT