ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಆಸರೆಯಾದ ಕೃಷಿ ಯಂತ್ರಧಾರೆ

ಆಧುನಿಕ ಯಂತ್ರೋಪಕರಣಗಳಿಂದ ಬೆವರಿನ ಶ್ರಮ ಕಡಿಮೆ l ವರ್ಷಕ್ಕೆ 25 ಸಾವಿರಕ್ಕೂ ಹೆಚ್ಚು ರೈತರಿಗೆ ಉಪಯೋಗ
Last Updated 27 ಸೆಪ್ಟೆಂಬರ್ 2021, 6:46 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಧುನಿಕ ಕೃಷಿ ಪದ್ಧತಿಗೆ ಒಡ್ಡಿಕೊಂಡಿರುವ ಜಿಲ್ಲೆಯ ಸಾವಿರಾರು ಅನ್ನದಾತರು ‘ಕೃಷಿ ಯಂತ್ರಧಾರೆ’ಗೆ ಮೊರೆ ಹೋಗುತ್ತಿದ್ದಾರೆ. ಬೆವರಿನ ಶ್ರಮವನ್ನು ಕಡಿಮೆ ಮಾಡುತ್ತಿರುವ ಈ ಯಂತ್ರೋಪಕರಣಗಳಿಂದ 2020ರಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ರೈತರಿಗೆ ಉಪಯೋಗ ಆಗಿದೆ.

ಸರ್ಕಾರದಿಂದ 2014ರಲ್ಲಿ ಆರಂಭವಾದ ಈ ಯೋಜನೆಯ ಲಾಭವನ್ನು ಮೊದಲೆರಡು ವರ್ಷಗಳಲ್ಲಿ ಜಿಲ್ಲೆಯ ಹೆಚ್ಚಿನ ರೈತರು ಮಾಹಿತಿ ಕೊರತೆಯಿಂದ ಪಡೆಯಲಿಲ್ಲ. ಆದರೆ, 2017ರಿಂದ ಈಚೆಗೆ ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಹಿಂದಿನ ವರ್ಷ ಕೋವಿಡ್ ಕಾರಣಕ್ಕೆ ಒಂದಷ್ಟು ರೈತರು ಇದರ ಪ್ರಯೋಜನ ಪಡೆಯದಿದ್ದರೂ ಈ ವರ್ಷ ಮತ್ತೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಚ್ಚು ಹಣ ಕೊಟ್ಟರು ಕೂಲಿ ಕಾರ್ಮಿಕರು ಸಿಗದಂಥ ಕಾಲಘಟ್ಟದಲ್ಲಿ ಆ ಕೊರತೆಯನ್ನೂ ನೀಗಿಸುವಲ್ಲಿ ಯಂತ್ರಗಳು ಮಹತ್ತರ ಪಾತ್ರ ವಹಿಸುತ್ತಿವೆ.

ಕೃಷಿ ಯಂತ್ರೋಪಕರಣಗಳನ್ನು ಖರೀದಿಸಲು ಸಾಧ್ಯವಾಗದ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ರೈತರಿಗೆ ಇದರಿಂದ ಅನುಕೂಲವಾಗುತ್ತಿದೆ. ಮುಂಗಾರು–ಹಿಂಗಾರು ಮಳೆ ಆರಂಭವಾಗುವ ಅವಧಿಯಲ್ಲಿ, ಕಟಾವು ಸಮಯದಲ್ಲಿ ಅನೇಕ ರೈತರ ಜಮೀನುಗಳಲ್ಲಿ ಯಂತ್ರಗಳ ಸದ್ದು ಜೋರಾಗಿರುತ್ತದೆ.

ಹೋಬಳಿಗೆ ತಲಾ ಒಂದರಂತೆ ಜಿಲ್ಲೆಯ 22 ಹೋಬಳಿ ಕೇಂದ್ರಗಳಲ್ಲೂ ಯಂತ್ರಧಾರೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅವುಗಳನ್ನು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆರಾಧ್ಯ ಏಜೆನ್ಸೀಸ್ ಹಾಗೂ ವರ್ಷಾ ಅಸೋಸಿಯೇಟ್‌ ಸಂಸ್ಥೆಗಳು ನಿರ್ವಹಣೆ ಮಾಡುತ್ತಿವೆ. 70:30ರ ಅನುಪಾತದಲ್ಲಿ ಸರ್ಕಾರ ಹಾಗೂ ಆಯ್ಕೆಯಾಗಿರುವ ಸಂಸ್ಥೆಗಳು ಯಂತ್ರಗಳ ಖರೀದಿ ವೆಚ್ಚವನ್ನು ಭರಿಸುತ್ತವೆ.

‘ಸ್ಥಳೀಯವಾಗಿ ಲಭ್ಯವಾಗುವ ಬಾಡಿಗೆ ದರಕ್ಕಿಂತ ಕಡಿಮೆ ದರದಲ್ಲಿ ಕೃಷಿ ಬಳಕೆಯ ಯಂತ್ರೋಪಕರಣಗಳು ರೈತರ ಕೈಗೆಟುಕಬೇಕು ಎಂಬುದು ಈ ಯೋಜನೆಯ ಮುಖ್ಯ ಉದ್ದೇಶ. ಆದ್ದರಿಂದ ಜಿಲ್ಲಾ ಪಂಚಾಯಿತಿ ಸಿಇಒ, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರು ಹಾಗೂ ಇಬ್ಬರು ಜಿಲ್ಲಾ ಪ್ರಗತಿಪರ ರೈತರನ್ನು ಒಳಗೊಂಡ ಸಮಿತಿ ಈ ಯಂತ್ರಗಳ ದರ ನಿಗದಿ ಮಾಡುತ್ತದೆ. ಆ ದರವನ್ನೇ ಪ್ರತಿ ಖಾಸಗಿ ಸಂಸ್ಥೆಗಳು ರೈತರಿಗೆ ವಿಧಿಸಬೇಕು. ಹಾಗಾಗಿ ಜಿಲ್ಲೆಯಾದ್ಯಂತ ಏಕರೂಪದ ದರದಲ್ಲಿ ಯಂತ್ರಗಳು ಬಾಡಿಗೆಗೆ ಲಭ್ಯವಾಗುತ್ತವೆ’ ಎಂದು ಕೃಷಿ ಇಲಾಖೆ ತಿಳಿಸಿದೆ.

ಪ್ರತಿ ಗ್ರಾಮಕ್ಕೂ ತಲುಪಲಿ: ‘ಟ್ರ್ಯಾಕ್ಟರ್‌, ಟಿಲ್ಲರ್‌ನಂತಹ ದೊಡ್ಡ ವಾಹನ ಖರೀದಿಸುವುದು ಸಣ್ಣ ಕೃಷಿಕರಿಗೆ ದೂರದ ಮಾತೇ ಸರಿ. ಈ ನಿಟ್ಟಿನಲ್ಲಿ ಕೃಷಿ ಯಂತ್ರಧಾರೆಯಿಂದ ಒಂದಷ್ಟು ರೈತರಿಗೆ ಅನುಕೂಲವಾಗಿದೆ. ಆದರೆ, ಜಿಲ್ಲೆಯ ಎಲ್ಲ ಗ್ರಾಮಕ್ಕೂ ಸೌಲಭ್ಯ ತಲುಪಬೇಕು. ಹೋಬಳಿಗೆ ಕನಿಷ್ಠ ಐದಾರು ಕೇಂದ್ರಗಳನ್ನಾದರೂ ತೆರೆದರೆ ಇನ್ನಷ್ಟು ರೈತರನ್ನು ತಲುಪಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಚಳ್ಳಕೆರೆಯ ರೈತ ತಿಪ್ಪೇಸ್ವಾಮಿ.

ಅಗತ್ಯಕ್ಕೆ ತಕ್ಕಷ್ಟು ಸಿಗದ ಯಂತ್ರಗಳು: ಜಿಲ್ಲೆಯಲ್ಲಿ ಶೇಂಗಾ, ರಾಗಿ, ಮೆಕ್ಕೆಜೋಳ, ತೊಗರಿ, ಹತ್ತಿಯನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಬೆಳೆ ನಾಟಿ ಹಾಗೂ ಬೆಳೆ ಕಟಾವು ಸಮಯದಲ್ಲಿ ಟ್ರ್ಯಾಕ್ಟರ್‌, ಟಿಲ್ಲರ್‌, ನಾಟಿ ಯಂತ್ರಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಒಂದೇ ಸಮಯಕ್ಕೆ ಅಗತ್ಯಕ್ಕೆ ತಕ್ಕಷ್ಟು ಯಂತ್ರಗಳನ್ನು ಯಂತ್ರಧಾರೆ ಕೇಂದ್ರಗಳು ಪೂರೈಸಲು ಸಫಲವಾಗಿಲ್ಲ. ಇದಕ್ಕೆ ರೈತರಿಂದ ಅಸಮಾಧಾನವೂ ವ್ಯಕ್ತವಾಗಿದೆ. ಕೆಲವೆಡೆಗಳಲ್ಲಿ ರೈತರು ಕೇಂದ್ರಗಳ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆ.

‘ಕೇಂದ್ರದಲ್ಲಿ ಇರುವಷ್ಟು ಯಂತ್ರಗಳನ್ನು ಪೂರೈಕೆ ಮಾಡುತ್ತೇವೆ. ಮೊದಲು ಹೆಸರು ನೋಂದಾಯಿಸಿಕೊಂಡವರಿಗೆ ಆದ್ಯತೆ ಮೇರೆಗೆ ಯಂತ್ರಗಳನ್ನು ನೀಡುತ್ತೇವೆ. ವರ್ಷದಿಂದ ವರ್ಷಕ್ಕೆ ಯಂತ್ರೋಪಕರಣಗಳ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ, ಒಮ್ಮೊಮ್ಮೆ ಅಗತ್ಯಕ್ಕೆ ತಕ್ಕಷ್ಟು ಯಂತ್ರಗಳನ್ನು ಪೂರೈಸಲು ಆಗುವುದಿಲ್ಲ. ಒಂದೇ ಸಮಯಕ್ಕೆ ಒಂದೇ ರೀತಿಯ ಯಂತ್ರಗಳಿಗೆ ಬೇಡಿಕೆ ಬರುವುದರಿಂದ ಪೂರೈಕೆ ಕಷ್ಟವಾಗುತ್ತದೆ’ ಎನ್ನುತ್ತಾರೆ ನಿರ್ವಹಣೆ ವಹಿಸಿರುವ ಸಂಸ್ಥೆಗಳ ಸಿಬ್ಬಂದಿ.

ಎಲ್ಲೆಲ್ಲಿವೆ ಕೇಂದ್ರಗಳು:

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕೇಂದ್ರಗಳು ಪರಶುರಾಂಪುರ, ಭರಮಸಾಗರ, ಹಿರೇಗುಂಟನೂರು, ಐಮಂಗಲ, ಸಾಣೇಹಳ್ಳಿ, ಮತ್ತೋಡು, ರಾಂಪುರದಲ್ಲಿ ಇವೆ. ಬೆಂಗಳೂರಿನ ವಿಎಸ್‌ಟಿ ಟಿಲ್ಲರ್ ಆ್ಯಂಡ್‌ ಟ್ರ್ಯಾಕ್ಟರ್ಸ್‌ನ ಅಂಗ ಸಂಸ್ಥೆಯಾದ ಆರಾಧ್ಯ ಏಜೆನ್ಸೀಸ್‌ ಕೇಂದ್ರಗಳು ನಾಯಕನಹಟ್ಟಿ, ತಳಕು, ತುರುವನೂರು, ಜವನಗೊಂಡನಹಳ್ಳಿ, ರಾಮಗಿರಿ, ಚಿಕ್ಕಜಾಜೂರು, ಶ್ರೀರಾಂಪುರ, ಮಾಡದಕೆರೆ ಸಮೀಪದ ಕಂಠಾಪುರ, ಮೊಳಕಾಲ್ಮುರಿನಲ್ಲಿ ಇವೆ. ವರ್ಷಾ ಅಸೋಸಿಯೇಟ್‌ ಸಂಸ್ಥೆಯ ಕೇಂದ್ರಗಳು ಚಳ್ಳಕೆರೆ ಕಸಬಾ, ಗೋನೂರು, ಬಬ್ಬೂರು, ಶಿವಪುರ, ಹೊಸದುರ್ಗದಲ್ಲಿ ಇವೆ.

ಮಧ್ಯಮ ವರ್ಗದ ರೈತರಿಗೆ ಅನುಕೂಲ

ಹೊಳಲ್ಕೆರೆ: ತಾಲ್ಲೂಕಿನಲ್ಲಿ ಹೋಬಳಿಗೆ ಒಂದರಂತೆ 4 ಕೃಷಿಯಂತ್ರಧಾರೆ ಕೇಂದ್ರಗಳಿದ್ದು, ಪ್ರತಿ ವರ್ಷ ಸುಮಾರು 500 ರೈತರು ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಶಿವಗಂಗಾ, ವರ್ಷಾ ಅಸೋಸಿಯೇಷನ್ ಸಹಯೋಗದಲ್ಲಿ ಶಿವಪುರ ಹಾಗೂ ಆರಾಧ್ಯ ಏಜೆನ್ಸಿ ಸಹಯೋಗದಲ್ಲಿ ಬಿ. ದುರ್ಗ, ರಾಮಗಿರಿಯಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳು ನಡೆಯುತ್ತಿವೆ.
ಪ್ರತಿ ಕೇಂದ್ರದಿಂದ 100ರಿಂದ 130 ರೈತರು ಯಂತ್ರಗಳ ಸೌಲಭ್ಯ ಪಡೆಯುತ್ತಿದ್ದಾರೆ.

ಟ್ರ್ಯಾಕ್ಟರ್, ನೀರಿನ ಟ್ಯಾಂಕರ್, ಬಿತ್ತನೆ ಯಂತ್ರ, ಕಲ್ಟಿವೇಟರ್, ಸ್ಪ್ರೇಯರ್, ಬಲರಾಮ ನೇಗಿಲು, ಕಟಾವುಯಂತ್ರ, ಅಡಿಕೆ ಸಸಿ ನೆಡಲು ಗುಂಡಿ ತೋಡುವ ತಂತ್ರ, ಹುಲ್ಲು ತುಳಿಸುವ ಯಂತ್ರ, ಹುಲ್ಲು ಕಟಾವು ಮಾಡುವ ಯಂತ್ರ, ಕೂರಿಗೆ ಸೇರಿದಂತೆ ರೈತರಿಗೆ ಉಪಯೋಗ ಆಗುವ ವಿವಿಧ ಪರಿಕರಗಳನ್ನು ಇಡಲಾಗಿದೆ.

‘ರೈತರಿಗೆ ಅನುಕೂಲ ಮಾಡಿಕೊಡಲು ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳ ಸಹಭಾಗಿತ್ವದ ಶೇಕಡಾ 70:30 ಅನುಪಾತದಲ್ಲಿ ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಬಡ ಹಾಗೂ ಮಧ್ಯಮವರ್ಗದ ರೈತರು ದುಬಾರಿ ಬೆಲೆಯ ದೊಡ್ಡ ವಾಹನಗಳನ್ನು ಖರೀದಿ ಮಾಡಲು ಆಗುವುದಿಲ್ಲ. ಇಂತಹ ರೈತರು ಬಾಡಿಗೆ ನೀಡಿ ಯಂತ್ರಗಳನ್ನು ಪಡೆಯಬಹುದು’ ಎನ್ನುತ್ತಾರೆ
ಸಹಾಯಕ ಕೃಷಿ ನಿರ್ದೇಶಕ ಎನ್.ವಿ. ಪ್ರಕಾಶ್.

ಅತ್ಯಾಧುನಿಕ ಯಂತ್ರೋಪಕರಣಗಳಿಂದ ನೆರವು

ಚಳ್ಳಕೆರೆ: ಕೂಲಿ ಕಾರ್ಮಿಕರು ಹಾಗೂ ಕೃಷಿ ಉಪಕರಣಗಳ ಸಮಸ್ಯೆಯಿಂದ ಕುಂಠಿತಗೊಂಡಿದ್ದ ಕೃಷಿ ಚಟುವಟಿಕೆ, ಸರ್ಕಾರ ಒದಗಿಸಿದ ಅತ್ಯಾಧುನಿಕ ಕೃಷಿ ಯಂತ್ರಗಳು ಅವುಗಳ ಬಳಕೆಯಿಂದ ರೈತರು ಕೃಷಿ ಬೇಸಾಯ ಚಟುವಟಿಕೆಯಲ್ಲಿ ಉತ್ಸುಕತೆಯಿಂದ ತೊಡಗಿಸಿಕೊಂಡಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದ ಯೋಜನೆಯಡಿಯಲ್ಲಿ ಕೃಷಿ ಇಲಾಖೆ, ಕಬ್ಬಿಣದ ಕುಂಟೆ, ಐದು ಬಾಳಿನ ಕೂರಿಗೆ, ಒಂಬತ್ತು, ಬಾಳಿನ ಕೂರಿಗೆ, ಎಚ್‌ಪಿಪಿ ಪವರ್ ಪ್ಲೇ ಪವರ್ ಎಂ.ಡಿ.ನೇಗಿಲು ಮುಂತಾದ ಉಪಕರಣಗಳನ್ನು ತಾಲ್ಲೂಕಿನಲ್ಲಿ 200 ಜನ ರೈತರಿಗೆ ವಿತರಿಸಿದೆ. ಹೀಗಾಗಿಒಣ ಭೂಮಿ ಹಾಗೂ ನೀರಾವರಿ ಪ್ರದೇಶದ ಉಳುಮೆ ಮತ್ತು ಬೀಜ ಬಿತ್ತನೆ ಕಾರ್ಯ ಅತಿ ಸುಲಭವಾಗಿದೆ. ತಾಲ್ಲೂಕಿನಲ್ಲಿ ಕೃಷಿ ಚಟುವಟಿಕೆಯ ಪ್ರದೇಶ ವಿಸ್ತಾರಗೊಂಡಿದೆ.

‘ಕೂರಿಗೆ ಮೂಲಕ ಬಿದಿರಿನ ಕೊಳವೆ (ಶೆಡ್ಡೆ)ಯಿಂದ ಮಡಲಿಗೆ ಕಟ್ಟಿಕೊಂಡ ಬೀಜವನ್ನು ಕೈಯಲ್ಲಿ ತೆಗೆದು ಬಿತ್ತನೆ ಮಾಡುವಾಗ ಕುಂಟು ಸಾಲುಗಳು ಹೆಚ್ಚು ಆಗುತ್ತಿದ್ದವು. ಸಾಂಪ್ರದಾಯಿಕ ಮರ–ಮುಟ್ಟು ಕೃಷಿ ಉಪಕರಣಗಳಿಂದ ಉಳುಮೆ ಹಾಗೂ ಬಿತ್ತನೆ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿರಲಿಲ್ಲ. ಈಗ ಸುಲಭವಾಗಿದೆ’ ಎನ್ನುತ್ತಾರೆ ದೇವರಮರಿಕುಂಟೆ ಗ್ರಾಮದ ರೈತ ವೀರಭದ್ರಪ್ಪ.

‘ಬಿತ್ತನೆ ಕೂರಿಗೆ ಮತ್ತು ಕುಂಟೆ ಬೇಸಾಯಕ್ಕೆ ಎರಡು ಜತೆ ಜೋಡೆತ್ತುಗಳು ಸೇರಿದಂತೆ 7–8 ಜನ ಕೂಲಿ ಕಾರ್ಮಿಕರು ಬೇಕು. ಎತ್ತಿನ ಬೇಸಾಯದಲ್ಲಿ ಪ್ರತಿ ದಿನ 2–3 ಎಕರೆ ಮಾತ್ರ ಬಿತ್ತನೆ ಮಾಡಬಹುದು. ಇದರಿಂದ ಶ್ರಮ ಮತ್ತು ದುಬಾರಿ ಕೂಲಿ ಆಗುತ್ತಿತ್ತು. ಆದರೆ, ಸರ್ಕಾರ ಒದಗಿಸಿದ ಯಂತ್ರೋಪಕರಣದಿಂದ ಈಗ ಬಿತ್ತನೆ ಕಾರ್ಯ ತುಂಬಾ ಸುಲಭವಾಗಿದೆ’ ಎನ್ನುತ್ತಾರೆ ಬೆಳಗೆರೆ ಗ್ರಾಮದ ರೈತ ದಂಡಪ್ಪ.

‘ಕಬ್ಬಿಣದ ಕೂರಿಗೆಯಿಂದ ಟ್ರ್ಯಾಕ್ಟರ್ ಮೂಲಕ ಬೀಜ ಮತ್ತು ಗೊಬ್ಬರವನ್ನು ಒಟ್ಟಿಗೆ ಬಿತ್ತನೆ ಮಾಡುವುದರಿಂದ ಅಕ್ಕಡಿ ಮತ್ತು ಅಂಟು ಸಾಲುಗಳು ಆಗುವುದಿಲ್ಲ. ಇಂಚು ಇಂಚಿಗೂ ಸಮ ಅಳತೆ ಪ್ರಮಾಣದಲ್ಲಿ ನೆಲಕ್ಕೆ ಬೀಜಗಳು ಬೀಳುತ್ತವೆ. ಕುಂಟು ಸಾಲು ನಿವಾರಣೆ ಮಾಡುತ್ತವೆ. ಎಲ್ಲ ಬೀಜಗಳು ತುಂಬು ಹಸಿಗೆ ಬೀಳುತ್ತವೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ಮಾಡಬಹುದು’ ಎಂಬುದು ಕೆಲ ರೈತರ ಅಭಿಪ್ರಾಯ.

‘ಯಂತ್ರ ಹಾಗೂ ಟ್ರ್ಯಾಕ್ಟರ್‌ನಲ್ಲಿ ಪ್ರತಿ ದಿನ ಕನಿಷ್ಠ 10ರಿಂದ 12 ಎಕರೆ ಬಿತ್ತನೆ ಮಾಡಬಹುದು. ಇದರಿಂದ ಬೇಸಾಯ ಹಾಗೂ ಕೂಲಿ ಕಾರ್ಮಿಕರ ಸಮಸ್ಯೆ ನಿವಾರಣೆಯಾಗುತ್ತದೆ. ಕಳೆ ಕೀಳಲು (ಎಡೆಕುಂಟೆ) ಆಟೊ ಫಾರಂ ಪವರ್ ವೀಡಾರ್ ಹೀಗೆ.. ಸುಧಾರಿತ ಕೃಷಿ ಯಂತ್ರಗಳು ರೈತರಿಗೆ ತುಂಬಾ ಉಪಯುಕ್ತವಾಗಿವೆ’ ಎಂದು ಕೃಷಿ ತಾಂತ್ರಿಕ ಅಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT