ಹಿರಿಯೂರು: ತಾಲ್ಲೂಕಿನ ಮೇಟಿಕುರ್ಕೆ ಸಮೀಪ ನಿರ್ಮಾಣವಾಗುತ್ತಿರುವ ಕೈಗಾರಿಕಾ ಕಾರಿಡಾರ್ ಪ್ರದೇಶದಲ್ಲಿನ ಮಣ್ಣನ್ನು ರೈತರಿಗೆ ಉಚಿತವಾಗಿ ವಿತರಿಸುವಂತೆ ಒತ್ತಾಯಿಸಿ ತಾಲ್ಲೂಕು ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಅಂದಾಜು 3,500 ಎಕರೆ ಭೂಮಿಯನ್ನು ರೈತರಿಂದ ಸರ್ಕಾರ ವಶಪಡಿಸಿಕೊಂಡು ಕಾಮಗಾರಿ ಆರಂಭಿಸಿದೆ. ತಾಲ್ಲೂಕಿನ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೈಗಾರಿಕೆಗಳನ್ನು ಆರಂಭಿಸುತ್ತಿರುವುದು ಸಂತಸದ ವಿಚಾರ. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಗುತ್ತಿಗೆದಾರರು ಪ್ರದೇಶದಲ್ಲಿರುವ ಕಪ್ಪು ಮಣ್ಣನ್ನು ತೆಗೆದು ಮರಳು ಮಿಶ್ರಿತ ಮಣ್ಣು ಹಾಕಬೇಕಿದೆ. ಕಪ್ಪು ಮಣ್ಣನ್ನು ಬೇರೆಡೆಗೆ ಸಾಗಿಸಲು ಕೆಐಆರ್‌ಡಿಬಿಯವರು ಅಂದಾಜು ಪಟ್ಟಿಯಲ್ಲಿ ಅನುದಾನ ಮೀಸಲಿಟ್ಟಿದ್ದಾರೆ. ಈ ವಿಚಾರವನ್ನು ಮರೆಮಾಚುತ್ತಿರುವ ಗುತ್ತಿಗೆದಾರರು, ಒಂದು ಲೋಡ್ ಕಪ್ಪು ಮಣ್ಣಿಗೆ ₹2,000ದಿಂದ ₹3,000 ಪಡೆದು ರೈತರಿಗೆ ನೀಡುತ್ತಿದ್ದಾರೆ’ ಎಂದು ರೈತ ಸಂಘದ ಅಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ ಆರೋಪಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಮೀಸಲಿಟ್ಟಿರುವ ಜಾಗದ ಕಪ್ಪು ಮಣ್ಣು ತುಂಬಿ ಸಾಗಿಸಲು ಸರ್ಕಾರವೇ ಹಣ ಭರಿಸುವುದರಿಂದ ರೈತರಿಂದ ಹಣ ಪಡೆಯುತ್ತಿರುವುದು ಅನ್ಯಾಯ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಿಯಮ ಉಲ್ಲಂಘಿಸಿ ರೈತರಿಗೆ ಮಣ್ಣು ಮಾರುತ್ತಿರುವುದು ಯಾವುದೇ ಮಾಫಿಯಾಗೂ ಕಡಿಮೆ ಇಲ್ಲ. ಮಣ್ಣು ಮಾರಾಟ ಮಾಡುವುದಿದ್ದರೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಪರವಾನಗಿ ಪಡೆದು, ರಾಜಧನ ಪಾವತಿಸಬೇಕಿತ್ತು. ಇದ್ಯಾವುದನ್ನೂ ಗುತ್ತಿಗೆದಾರರು ಮಾಡಿಲ್ಲ. ಮಣ್ಣು ಮಾರಾಟ ಮಾಡುವುದು ತಿಳಿದಿದ್ದರೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೌನವಾಗಿರುವುದು ರೈತ ವಿರೋಧಿ ಧೋರಣೆಗೆ ಸ್ಪಷ್ಟ ನಿದರ್ಶನ. ಟಿಪ್ಪರ್‌ಗಳಲ್ಲಿ ಅಳತೆ ಮೀರಿ ಮಣ್ಣು ತುಂಬಿಸುವ ಕಾರಣ ರಸ್ತೆಗಳು ಹಾಳಾಗುತ್ತಿವೆ. ಅಕ್ರಮವಾಗಿ ಮಣ್ಣು ಸಾಗಣೆ ನಡೆಯುತ್ತಿದ್ದರೂ ಸಾರಿಗೆ ಮತ್ತು ಪೊಲೀಸ್ ಇಲಾಖೆ ಗಮನಿಸದಿರುವುದು ಸಾರ್ವಜನಿಕರಲ್ಲಿ ಸಂದೇಹ ಮೂಡಿಸಿದೆ ಎಂದು ಅವರು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಕೂಡಲೇ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಯಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬೇಕು. ರೈತರಿಗೆ ಸರ್ಕಾರದ ಖರ್ಚಿನಲ್ಲಿ ಮಣ್ಣನ್ನು ಉಚಿತವಾಗಿ ವಿತರಿಸಬೇಕು. ಇಲ್ಲವಾದಲ್ಲಿ ಕೈಗಾರಿಕಾ ಪ್ರದೇಶದ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸೇರಿಸಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಾಗುತ್ತದೆ ಎಂದು ತಿಪ್ಪೇಸ್ವಾಮಿ ಎಚ್ಚರಿಸಿದರು.
ಆಲೂರು ಸಿದ್ದರಾಮಣ್ಣ, ರಂಗಸ್ವಾಮಿ, ತಿಮ್ಮಾರೆಡ್ಡಿ, ಅರಳೀಕೆರೆ ತಿಪ್ಪೇಸ್ವಾಮಿ, ಹೊಸಕೆರೆ ಜಯಣ್ಣ, ಜಗನ್ನಾಥ್, ಶಿವಣ್ಣ, ನಾರಾಯಣಪ್ಪ, ಜಗನ್ನಾಥ್, ರಾಮಕೃಷ್ಣ, ಬಾಲಕೃಷ್ಣ, ತಿಪ್ಪೇಸ್ವಾಮಿ, ಮಂಜುನಾಥ್, ಕೆಂಚಪ್ಪ, ರಾಜಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.