ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಜಾಜೂರು: ಸಮರ್ಪಕ ವಿದ್ಯುತ್‌ ಪೂರೈಕೆಗೆ ರೈತರ ಒತ್ತಾಯ

Last Updated 28 ಡಿಸೆಂಬರ್ 2021, 4:15 IST
ಅಕ್ಷರ ಗಾತ್ರ

ಚಿಕ್ಕಜಾಜೂರು: ಸಮರ್ಪಕ ವಿದ್ಯುತ್‌ ಪೂರೈಸುವಂತೆ ಆಗ್ರಹಿಸಿ ಚಿಕ್ಕಎಮ್ಮಿಗನೂರು ಹಾಗೂ ಚಿಕ್ಕಜಾಜೂರಿನ ರೈತರು ಚಿಕ್ಕಜಾಜೂರು ಸಮೀಪದ ಗುಂಜಿಗನೂರು ಗೇಟ್‌ ಬಳಿ ಇರುವ ವಿದ್ಯುತ್ ಪ್ರಸರಣ ಕೇಂದ್ರದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ದಿನದಲ್ಲಿ ಹಗಲಿನಲ್ಲಿ ಎರಡು ಗಂಟೆ ಮತ್ತು ರಾತ್ರಿ ವೇಳೆ ಮೂರು ಗಂಟೆ ಪಾಳಿ ಮೇಲೆ ವಿದ್ಯುತ್‌ ನೀಡುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದರು. ಆದರೆ, ಇದುವರೆಗೂ ದಿನದಲ್ಲಿ ಸರಿಯಾಗಿ ಒಂದು ಗಂಟೆಯೂ ವಿದ್ಯುತ್‌ ನೀಡಿಲ್ಲ. ಬೇಸಿಗೆ ಆರಂಭವಾಗಿದ್ದು, ಅಡಿಕೆ ಹೊಂಬಾಳೆ ಒಣಗುತ್ತಿದೆ. ತೆಂಗಿನ ಈಚುಗಳು ಉದುರುತ್ತಿವೆ. ನೀರು ಬಿಡಬೇಕಿದೆ. ಲೈನ್‌ಮನ್‌ ಅವರು ರೈತರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ವಿದ್ಯುತ್‌ ಯಾವಾಗ ಬರುತ್ತದೆ ಎಂದು ಕೇಳಿದರೆ, ಬೇಜವಾಬ್ದಾರಿ ಹಾಗೂ ಉದ್ಧಟತನದ ಉತ್ತರ ನೀಡುತ್ತಾರೆ ಎಂದು ಚಿಕ್ಕಎಮ್ಮಿಗನೂರು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಐದು ದಿನಗಳಲ್ಲಿ ಪರಿಹಾರ: ರೈತರು ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ನಾಗರಾಜ್‌ ಮಾತನಾಡಿ, ‘ಚಿಕ್ಕಎಮ್ಮಿಗನೂರು ಮಾರ್ಗದಲ್ಲಿ ಕೆಲವು ವಿದ್ಯುತ್‌ ಕಂಬಗಳು ಶಿಥಿಲವಾಗಿದ್ದು, ಕಾಮಗಾರಿ ನಡೆಯುತ್ತಿದೆ. ನಾಲ್ಕೈದು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಈ ಅವಧಿಯಲ್ಲಿ ಬದಲಿ ವ್ಯವಸ್ಥೆ ಮಾಡಿ ವಿದ್ಯುತ್‌ ಪೂರೈಕೆ ಮಾಡಲಾಗುವುದು’ ಎಂದು ರೈತ‌ರಿಗೆ ಭರವಸೆ ನೀಡಿದರು.

ಎಲ್‌ಟಿ ಲೈನ್‌ ಹಾಕಲು ಸೂಚನೆ: ಚಿಕ್ಕಜಾಜೂರಿನಿಂದ ಕಡೂರು ಮಾರ್ಗದಲ್ಲಿ ಈ ಹಿಂದೆ ರೈಲ್ವೆ ಇಲಾಖೆಯವರು ರೈಲ್ವೆ ಮೇಲುಸೇತುವೆಯನ್ನು ನಿರ್ಮಿಸುವಾಗ ರಸ್ತೆ ಬದಿಯಲ್ಲಿದ್ದ ಎಲ್‌ಟಿ ಲೈನ್‌ ಅನ್ನು ತೆಗೆದು, ಕೇಬಲ್‌ ಲೈನ್‌ ಹಾಕಿದ್ದರು. ಆದರೆ, ಈ ಕೇಬಲ್‌ ಕಳಪೆ ಗುಣಮಟ್ಟದ್ದಾಗಿದ್ದು, ಕಳೆದ ಜೂನ್‌ ತಿಂಗಳಲ್ಲಿ ನಾಲ್ಕೈದು ಕಡೆಗಳಲ್ಲಿ ಕೇಬಲ್‌ ಸುಟ್ಟು ಹೋಗಿದೆ. ಇದರಿಂದಾಗಿ, ಅಲ್ಲಿನ ವಿದ್ಯುತ್‌ ಪರಿವರ್ತಕವು ಸುಟ್ಟುಹೋಗಿದ್ದು, 18ಕ್ಕೂ ಹೆಚ್ಚು ಕೊಳವೆಬಾವಿಗಳು ಸ್ಥಗಿತವಾಗಿವೆ. ಬೇಸಿಗೆ ಆರಂಭವಾಗಿರುವುದರಿಂದ, ಕೇಬಲ್‌ ತೆಗೆದು, ಮೊದಲಿನಂತೆ ಎಲ್‌ಟಿ ಲೈನ್‌ ಹಾಕುವಂತೆ ರೈತರು ಒತ್ತಾಯಿಸಿದರು. ಚಿಕ್ಕಎಮ್ಮಿಗನೂರಿನ ಎ. ಚಂದ್ರಪ್ಪ, ವಕೀಲ ಉಮಾಪತಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರಿಧರ, ವೀರಭಧ್ರಪ್ಪ, ಕೋಟೆಹಾಳ್‌ ವೆಂಕಟೇಶ್‌, ಎಸ್‌. ಈಶ್ವರಪ್ಪ, ವಿರುಪಾಕ್ಷಪ್ಪ, ರಾಜಶೇಖರ್‌, ಸುರೇಶ್‌, ಚಿಕ್ಕಜಾಜೂರಿನ ಗ್ರಾಮ ಪಂಚಾಯಿತಿ ಸದಸ್ಯ ಕೆ.ಎಸ್‌. ಸಿದ್ದೇಶ್‌, ಬಿ.ವಿ. ರಾಜು, ಬಸವರಾಜ್‌, ಸಂದೀಪ್‌ ಮೊದಲಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT