ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸ್ವೇಹಳ್ಳಿ ಏತ ನೀರಾವರಿಗೆ ಒತ್ತಾಯ

ಚಿತ್ರದುರ್ಗ, ಹೊಳಲ್ಕೆರೆ ತಾಲ್ಲೂಕಿನ ರೈತರ ಬೃಹತ್‌ ಪ್ರತಿಭಟನೆ
Last Updated 15 ಜುಲೈ 2019, 16:59 IST
ಅಕ್ಷರ ಗಾತ್ರ

ಚಿತ್ರದುರ್ಗ: ಚಿತ್ರದುರ್ಗ ಹಾಗೂ ಹೊಳಲ್ಕೆರೆ ತಾಲ್ಲೂಕಿನ 16 ಕೆರೆಗಳನ್ನು ತುಂಬಿಸಲು ಸಾಸ್ವೇಹಳ್ಳಿಯ 2ನೇ ಹಂತದ ಏತ ನೀರಾವರಿ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಬೇಕು ಎಂದು ಆಗ್ರಹಿಸಿ ಸಾವಿರಾರು ರೈತರು ನಗರದಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿದರು.

‘ನೀರಾವರಿ ಯೋಜನೆಯಲ್ಲಿ ಬಿಟ್ಟು ಹೋದ ಕೆರೆಗಳ ವ್ಯಾಪ್ತಿಯ ರೈತ ಬಾಂಧವರು’ ವೇದಿಕೆಯಲ್ಲಿ ಪಕ್ಷಾತೀತವಾಗಿ ಒಂದೆಡೆ ಸೇರಿದ ರೈತರು, ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಿದರು. ಒಣಭೂಮಿ ರೈತರ ಬಗೆಗಿನ ಧೋರಣೆಯನ್ನು ಬದಲಿಸಿಕೊಳ್ಳದಿದ್ದರೆ ಬೆಂಗಳೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬೃಹತ್‌ ಮೆರವಣಿಗೆ: ಎರಡು ತಾಲ್ಲೂಕಿನಿಂದ ಚಿತ್ರದುರ್ಗಕ್ಕೆ ಲಗ್ಗೆ ಇಟ್ಟ ರೈತರು ಕನಕ ವೃತ್ತದಲ್ಲಿ ಜಮಾಯಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಗಾಂಧಿ ವೃತ್ತ, ಪ್ರವಾಸಿ ಮಂದಿರ, ಬಿ.ಡಿ.ರಸ್ತೆ ಮೂಲಕ ಒನಕೆ ಓಬವ್ವ ವೃತ್ತದಲ್ಲಿ ಜಮಾಯಿಸಿದರು. ಮೆರವಣಿಗೆಯಲ್ಲಿ ಹತ್ತಾರು ಟ್ರ್ಯಾಕ್ಟರ್‌ಗಳು ಸಾಗಿದವು. ಹಸಿರು ಟವೆಲ್‌ ಹಾಗೂ ರೈತ ಸಂಘದ ಧ್ವಜಗಳು ಮೆರವಣಿಗೆಯಲ್ಲಿ ರಾರಾಜಿಸುತ್ತಿದ್ದವು.

ಒನಕೆ ಓಬವ್ವ ವೃತ್ತದಲ್ಲಿ ಸುಡುವ ಬಿಸಿಲಿನಲ್ಲೇ ಧರಣಿ ಕುಳಿತರು. ತೆರೆದ ವೇದಿಕೆಯ ಮೇಲೆ ಮಠಾಧೀಶರು ಹಾಗೂ ರೈತ ಮುಖಂಡರು ಆಸೀನರಾಗಿದ್ದರು. ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ನೀರಾವರಿ ಯೋಜನೆಯ ಅಗತ್ಯದ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.

ನೀರಿಗೆ ತತ್ವಾರ: ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿನಲ್ಲಿ ಮಳೆಯಾಶ್ರಿತ ಪ್ರದೇಶ. ಮುಂಗಾರು ಹಾಗೂ ಹಿಂಗಾರು ಮಳೆಯನ್ನು ಆಶ್ರಯಿಸಿ ಬೆಳೆ ಬೆಳೆಯಲಾಗುತ್ತಿದೆ. ರಾಗಿ, ಮೆಕ್ಕೆಜೋಳ, ಹತ್ತಿ, ಅವರೆ ಪ್ರಮುಖ ಬೆಳೆಗಳು. ಅಡಿಕೆ, ತೆಂಗು, ಬಾಳೆಯಂತಹ ತೋಟಗಾರಿಕೆ ಬೆಳೆಗಳಿಂದಲೂ ಜೀವನ ಕಟ್ಟಿಕೊಂಡಿದ್ದೆವು. ಎಂಟು ವರ್ಷಗಳಿಂದ ಮಳೆಯ ಕೊರತೆ ಉಂಟಾಗಿದ್ದು, ರೈತರು ತತ್ತರಿಸಿ ಹೋಗಿದ್ದಾರೆ. ಶೇ 70ರಷ್ಟು ತೋಟಗಳು ಒಣಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಸಕ್ತ ಮುಂಗಾರು ಮಳೆಯೂ ಕಡಿಮೆಯಾಗಿದೆ. ಶೇ 5ರಷ್ಟು ಬಿತ್ತನೆ ಆಗಿಲ್ಲ. ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲ ಮಟ್ಟ ಕುಸಿದಿದ್ದು, ರೈತರು ತೊಂದರೆಗೆ ಸಿಲುಕಿದ್ದಾರೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಜನ ಮತ್ತು ಜಾನುವಾರು ಸ್ಥಿತಿ ಶೋಚನೀಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳ ಗಡುವು: ಸಾಸ್ವೇಹಳ್ಳಿಯ 2ನೇ ಹಂತದ ಏತ ನೀರಾವರಿ ಯೋಜನೆ ಸಿದ್ಧವಾಗಿ ಹಲವು ವರ್ಷಗಳು ಕಳೆದಿವೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ವೇಹಳ್ಳಿಯಲ್ಲಿ ತುಂಗ–ಭದ್ರಾ ನದಿಯಿಂದ 0.229 ಟಿಎಂಸಿ ನೀರನ್ನು ಎತ್ತಲು ಈ ಯೋಜನೆ ರೂಪಿಸಲಾಗಿದೆ. ಶಾಂತಿಸಾಗರದ ಮೂಲಕ ಈ ನೀರನ್ನು ಹೊಳಲ್ಕೆರೆ ಹಾಗೂ ಚಿತ್ರದುರ್ಗ ತಾಲ್ಲೂಕಿಗೆ ತರಬೇಕಿದೆ. ಇದಕ್ಕೆ ₹ 210 ಕೋಟಿ ಅನುದಾನದ ಅಗತ್ಯವಿದೆ ಎಂದರು.

ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿ, ಅನುದಾನ ಬಿಡುಗಡೆ ಮಾಡಬೇಕು. ಒಂದೂವರೆ ವರ್ಷದಿಂದ ಸರ್ಕಾರ ಮೀನಮೇಷ ಎಣಿಸುತ್ತಿದೆ. ಇದರಿಂದ ಈ ಭಾಗದ ರೈತರು ಬದುಕುವ ಭರವಸೆ ಕಳೆದುಕೊಂಡಿದ್ದಾರೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಸೌಭಾಗ್ಯ ಬಸವರಾಜನ್‌, ಜಯಪ್ರತಿಭಾ ನವೀನ್‌, ಶಿವಮೂರ್ತಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಲಿಂಗರಾಜ್‌, ರೈತ ಮುಖಂಡರಾದ ನುಲೇನೂರು ಶಂಕರಪ್ಪ, ಸೋಮಗುದ್ದು ರಂಗಸ್ವಾಮಿ, ಹನುಮಾಲಿ ಷಣ್ಮುಖಪ್ಪ, ಅನಿಲ್‌ ಕುಮಾರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT