ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರಿಡಾರ್ ಭೂ ಪರಿಹಾರಕ್ಕೆ ಆಗ್ರಹಿಸಿ ಧರಣಿ: 65ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ

ಹಿರಿಯೂರಿನಿಂದ ಪಿ.ಡಿ.ಕೋಟೆವರೆಗೆ ವಿದ್ಯುತ್ ಮಾರ್ಗದ ಕಾಮಗಾರಿ
Last Updated 26 ಜನವರಿ 2023, 5:21 IST
ಅಕ್ಷರ ಗಾತ್ರ

ಧರ್ಮಪುರ: ಹಿರಿಯೂರಿನಿಂದ ಪಿ.ಡಿ.ಕೋಟೆವರೆಗೂ 220/66/11 ಕೆ.ವಿ. ವಿದ್ಯುತ್ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ರೈತ ಫಲಾನುಭವಿಗಳಿಗೆ ಪರಿಹಾರ ನೀಡದೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ದೂರಿ ರೈತರು ನಡೆಸುತ್ತಿರುವ ಹೋರಾಟ ಬುಧವಾರ 65ನೇ ದಿನಕ್ಕೆ ಕಾಲಿಟ್ಟಿದೆ.

ಹಿರಿಯೂರಿನಿಂದ, ಹರಿಯಬ್ಬೆ ಮತ್ತು ಪಿ.ಡಿ.ಕೋಟೆಯವರೆಗೆ ಒಟ್ಟು 41 ಕಿ.ಮೀ.ವ್ಯಾಪ್ತಿಯಲ್ಲಿ ವಿದ್ಯುತ್ ಮಾರ್ಗದ ಕೆಲಸ ನಡೆಯುತ್ತಿದೆ. ಇದರಲ್ಲಿ ಗೋಪುರ ಮತ್ತು ಕಾರಿಡಾರ್ ಭೂಮಿಗೆ ರೈತರಿಗೆ ಪರಿಹಾರ ನೀಡಬೇಕಿದೆ. ಗೋಪುರ ನಿರ್ಮಾಣದ ಜಾಗಕ್ಕೆ ಮಾತ್ರ ಪರಿಹಾರ ನೀಡಲು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಆದರೆ, ಕಾರಿಡಾರ್ ಸ್ಥಳದ ಭೂ ಪರಿಹಾರಕ್ಕೆ ಆದೇಶ ನೀಡಿಲ್ಲ. ಅಧಿಕಾರಿಗಳು ರೈತರಿಗೆ ಮಾಹಿತಿ ನೀಡದೆ ಏಕಾಏಕಿ ಕಾಮಗಾರಿ ಕೈಗೊಂಡು ವಂಚಿಸುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಚ್. ವೆಂಕಟೇಶಪ್ಪ ಆರೋಪಿಸಿದರು.

‘ವಿದ್ಯುತ್ ಮಾರ್ಗ ಕಾಮಗಾರಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳು ಸೋಲಾರ್ ಕಂಪನಿಯವರೊಂದಿಗೆ ಒಡಂಬಡಿಕೆ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿದ್ದಾರೆ. ಅಲ್ಪ ಸ್ವಲ್ಪ ಜಮೀನಿರುವ ರೈತರು ಈಗ ಪೂರ್ಣವಾಗಿ ಭೂಮಿಯನ್ನು ಕಳೆದುಕೊಳ್ಳುತ್ತಿದ್ದು, ಇತ್ತ ಸರಿಯಾದ ಪರಿಹಾರವಿಲ್ಲದೆ ಬೀದಿಗೆ ಬೀಳುವಂತಾಗಿದೆ. 65 ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಯಾರೊಬ್ಬ ಅಧಿಕಾರಿಗಳೂ ಸೌಜನ್ಯಕ್ಕಾದರೂ ಧರಣಿ ಸ್ಥಳಕ್ಕೆ ಭೇಟಿ ನೀಡಿಲ್ಲ’ ಎಂದು ರೈತ ಮುಂಗುಸುವಳ್ಳಿ ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಹರಿಯಬ್ಬೆಯಿಂದ ಪಿ.ಡಿ.ಕೋಟೆವರೆಗೆ 12 ಕಿ.ಮೀ. ಕಾಮಗಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೆಲವೊಂದು ರೈತರಿಗೆ ಪರಿಹಾರದ ಮೊತ್ತವಾಗಿ ಚೆಕ್ ನೀಡಿದ್ದು, ಈಗ ಬೌನ್ಸ್ ಆಗಿರುವ ಪ್ರಕರಣಗಳು ಕಂಡು ಬಂದಿವೆ. ಜತೆಗೆ ಗುತ್ತಿಗೆದಾರರು ಕಾಮಗಾರಿ ಮಾಡಲು ಬರುತ್ತಿದ್ದು, ನಮಗೆ ಪರಿಹಾರದ ಮೊತ್ತ ಬರುವವರೆಗೂ ಅವರಿಗೆ ಕೆಲಸ ಮಾಡಲು ಬಿಡುವುದಿಲ್ಲ’ ಎಂದು ರೈತ ಹರಿಯಬ್ಬೆ ಶಶಿಧರ ಹೇಳಿದರು.

ಈ ಬಗ್ಗೆ ಮಾಹಿತಿ ಪಡೆಯಲು ಪತ್ರಿಕೆಯಿಂದ ಅಧಿಕಾರಿಗಳಿಗೆ ಕರೆ ಮಾಡಿದರೆ ಯಾರೊಬ್ಬರೂ ಕರೆ ಸ್ವೀಕರಿಸಲಿಲ್ಲ.

ಪ್ರತಿಭಟನೆಯಲ್ಲಿ ಚಂದ್ರಪ್ಪ, ಗುಂಡಪ್ಪ, ಹನುಮಂತರಾಯ, ರಂಗನಾಥ್, ಲೋಕೇಶ್, ತಿಪ್ಪೇಸ್ವಾಮಿ, ಮಾರುತಿ, ವೀಣಾ, ರಾಮಣ್ಣ, ತಿಮ್ಮಜ್ಜ, ಶೇಖರಪ್ಪ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT