ಶುಕ್ರವಾರ, ಡಿಸೆಂಬರ್ 13, 2019
24 °C
ತಾಡಪಾಲು ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

ರೈತರಿಗೆ ತಾಡಪಾಲು ಅಗತ್ಯ ಹೆಚ್ಚಿದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ಹಿಂದೆಲ್ಲಾ ಗ್ರಾಮೀಣ ಪ್ರದೇಶಗಳಲ್ಲಿ ತಾಡಪಾಲು ಬಳಕೆ ಇರಲಿಲ್ಲ. ಆಧುನಿಕತೆ ಬೆಳೆದಂತೆ ಬದಲಾದ ಪರಿಸ್ಥಿತಿಯಲ್ಲಿ ತಾಡಪಾಲುಗಳ ಅಗತ್ಯ ರೈತ ಸಮುದಾಯಕ್ಕೆ ಹೆಚ್ಚಿದೆ’ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ಸಭಾಂಗಣದಲ್ಲಿ ಸೋಮವಾರ ಕೃಷಿ ಇಲಾಖೆಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಅಭಿಯಾನ, ಕೃಷಿ ವಿಚಾರಗೋಷ್ಠಿ, ಜಲಶಕ್ತಿ ಅಭಿಯಾನ ಹಾಗೂ ತಾಡಪಾಲು ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಸೇರಿ ಸಾಮಾನ್ಯ ವರ್ಗದ ರೈತರ ಬೆಳೆಗಳ ರಕ್ಷಣೆಗಾಗಿ ಸರ್ಕಾರದಿಂದ ರಿಯಾಯಿತಿ ದರದಲ್ಲಿ ತಾಡಪಾಲುಗಳನ್ನು ವಿತರಿಸಲಾಗುತ್ತಿದೆ. ಇದರ ಉಪಯೋಗವನ್ನು ಸದ್ಭಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಸಜ್ಜೆ, ನವಣೆ, ಅರ್ಕಾ, ಕೊರ್ಲೆ ಸೇರಿ ಸಿರಿಧಾನ್ಯ ಬೆಳೆಯಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಈ ಬೆಳೆಯನ್ನು ಬಳಕೆ ಮಾಡುವವರ ಸಂಖ್ಯೆ ಅಧಿಕವಾಗಬೇಕು. ಆದರೆ, ಉಪಯೋಗಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ರೈತರು ಬೆಳೆಯುವ ಈ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರದಿಂದ ಹಿಂದೆಲ್ಲಾ ತೋಟಗಾರಿಕೆ ಬೆಳೆಗಳ ಸಂರಕ್ಷಣೆಗಾಗಿ ಪಾಲಿಹೌಸ್‌ಗಳನ್ನು ನೀಡುತ್ತಿದ್ದರು. ಆದರೆ, ಅದರ ಪ್ರಯೋಜನವನ್ನು ಕೆಲವರು ಮಾತ್ರ ಪಡೆಯುತ್ತಿದ್ದರು. ಅರ್ಹ ಅನೇಕ ಬಡ ಫಲಾನುಭವಿಗಳಿಗೆ ಈ ಸೌಲಭ್ಯ ದೊರೆಯುತ್ತಿರಲಿಲ್ಲ. ಸರ್ಕಾರದ ಉತ್ತಮ ಯೋಜನೆಗಳು ಅರ್ಹರಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಪರಿಶೀಲಿಸಿ ಆಯ್ಕೆ ಮಾಡಿ’ ಎಂದು ಸೂಚನೆ ನೀಡಿದರು.

ಕೃಷಿ ವಿಜ್ಞಾನಿ ಓಂಕಾರಪ್ಪ, ‘ರೈತರು ಯಾವುದೇ ಬೆಳೆಗಳನ್ನು ಬೆಳೆಯುವ ಮುನ್ನ ಅಗತ್ಯ ಮಾಹಿತಿ ಪಡೆದುಕೊಂಡೇ ಬಿತ್ತನಾ ಚಟುವಟಿಕೆಯಲ್ಲಿ ತೊಡಗಬೇಕು. ರಾಸಾಯನಿಕ ಗೊಬ್ಬರ ಕೇವಲ ತಾತ್ಕಾಲಿಕ ಔಷಧಿಯಾಗಿದೆ. ಆದ್ದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬ ರೈತರು ದನ, ಎಮ್ಮೆಗಳನ್ನು ಸಾಕಿ ಕೊಟ್ಟಿಗೆ ಗೊಬ್ಬರ ಬಳಕೆ ಮಾಡಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಯು. ಭಾರತಮ್ಮ, ‘ಇಲಾಖೆಯಿಂದ ಸಿಗುವಂಥ ಸೌಲಭ್ಯಗಳ ಕುರಿತು ಮೇ ತಿಂಗಳಿಂದಲೂ ಹಳ್ಳಿ ಹಳ್ಳಿಗಳಿಗೆ ಸಂಚರಿಸುತ್ತಿರುವ ನಮ್ಮ ತಾಂತ್ರಿಕ ರಥ ರೈತರಿಗೆ ಮಾಹಿತಿ ನೀಡುವುದಷ್ಟೇ ಅಲ್ಲ. ಜತೆಗೆ ಜಾಗೃತಿಯನ್ನು ಮೂಡಿಸಿದೆ. ರೈತರು ಆದಷ್ಟೂ ಕೃಷಿ ವಿಜ್ಞಾನಿಗಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ನಂತರವೇ ಭೂಮಿಯ ಫಲವತ್ತತೆಗೆ ಅನುಗುಣವಾಗುವಂಥ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದು ಕೋರಿದರು.

‘ಇಲಾಖೆಯಿಂದ ಈಗಾಗಲೇ ₹ 10ಕ್ಕೆ ಮಣ್ಣು ಪರೀಕ್ಷೆ, ರಿಯಾಯತಿ ದರದಲ್ಲಿ ಎಲ್ಲ ರೈತರಿಗೆ ಲಘು ಪೋಷಕಾಂಶ, ಬೀಜೋಪಚಾರ, ಬಿತ್ತನೆ ಬೀಜ, ತಾಡಪಾಲುಗಳನ್ನು ವಿತರಿಸಲಾಗುತ್ತಿದೆ ಇದರ ಪ್ರಯೋಜನವನ್ನು ಅರ್ಹರು ಪಡೆದುಕೊಳ್ಳಿ’ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದ್ರಕಲಾ ಸುರೇಶ್, ಮಂಜುನಾಥ್, ಕೃಷಿ ಇಲಾಖೆ ಉಪನಿರ್ದೇಶಕ ಡಾ. ತಿಮ್ಮಯ್ಯ, ಕೃಷಿ ಅಧಿಕಾರಿ ಮಂಜುನಾಥ್ ಇದ್ದರು.

ಪ್ರತಿಕ್ರಿಯಿಸಿ (+)