ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಗಿ ಕೊಯ್ಲಿಗಾಗಿ ಯಂತ್ರಗಳ ಮೊರೆ

ಮಳೆಯ ಆತಂಕ, ಕಾರ್ಮಿಕರ ಕೊರತೆ: ತ್ವರಿತ ಒಕ್ಕಣೆಗೆ ರೈತರ ಆಸಕ್ತಿ
Last Updated 22 ನವೆಂಬರ್ 2022, 7:27 IST
ಅಕ್ಷರ ಗಾತ್ರ

ಹೊಸದುರ್ಗ: ಮೋಡ ಕವಿದ ವಾತಾವರಣ ಇರುವ ಕಾರಣ ಅನಿರೀಕ್ಷಿತ ಮಳೆಯಾಗಬಹುದು ಎಂದು ಆತಂಕಗೊಂಡಿರುವ ತಾಲ್ಲೂಕಿನ ರೈತರು ರಾಗಿ ಕೊಯ್ಲಿಗೆ ಮುಂದಾಗಿದ್ದು, ಇದಕ್ಕಾಗಿ ರಾಗಿ ಕೊಯ್ಯುವ ಯಂತ್ರಗಳ ಮೊರೆ ಹೋಗಿದ್ದಾರೆ.

ಕಳೆದ ಬಾರಿ ರಾಗಿಯ ಉತ್ತಮ ಫಸಲು ಬಂದಿದ್ದರೂ ಅಕಾಲಿಕ ಮಳೆಯಿಂದಾಗಿ ಬೆಳೆ ಕೈ ಸೇರದಂತಾಗಿತ್ತು. ಈ ಬಾರಿಯಾದರೂ ನಷ್ಟಕ್ಕೆ ಗುರಿಯಾಗಬಾರದು ಎಂದು ರೈತರು ತರಾತುರಿಯಲ್ಲಿ ರಾಗಿ ಕೊಯ್ಲಿಗೆ ಮುಂದಾಗಿದ್ದು, ತಾಲ್ಲೂಕಿನ ಹಲವೆಡೆ ರಾಗಿ ಕೊಯ್ಯುವ ಯಂತ್ರಗಳು ಸಾಲುಗಟ್ಟಿ ನಿಂತಿವೆ.

ಕೂಲಿ ಕಾರ್ಮಿಕರ ಅಭಾವ: ಮುಸುಕಿನ ಜೋಳ, ರಾಗಿ, ತರಕಾರಿ, ಔಷಧಿ ಸೌತೆಕಾಯಿ ಕೊಯ್ಲು ಒಂದೇ ಬಾರಿ ಆರಂಭ ಆಗಿರುವುದರಿಂದ ಕೂಲಿ ಕಾರ್ಮಿಕರ ಅಭಾವ ಎದುರಾಗಿದೆ. ಹಿಂದೆ ಇದೇ ಸಂದರ್ಭ ಗ್ರಾಮೀಣ ಭಾಗದಲ್ಲಿ ಒಂದಷ್ಟು ಕಾರ್ಮಿಕರ ಪಡೆಯೇ ಸಿದ್ಧವಾಗಿರುತ್ತಿತ್ತು. ಇತ್ತೀಚೆಗೆ ಕೂಲಿ ಹಣ ಹೆಚ್ಚಾಗಿದ್ದು, ಕಾರ್ಮಿಕರೂ ಸರಿಯಾದ ಸಮಯಕ್ಕೆ ದೊರೆಯುತ್ತಿಲ್ಲ.

‘ರಾಗಿ ಕೊಯ್ಯಲು 1 ಅಕ್ಕಡಿಗೆ (ಇಬ್ಬರು ಕೂಲಿ ಕಾರ್ಮಿಕರಿಗೆ) ದಿನಕ್ಕೆ ₹ 800ರಿಂದ ₹ 1,000 ಕೊಡಬೇಕು. ಸುಗ್ಗಿ ಮಾಡಲು ಹೆಚ್ಚಿನ ಕಾರ್ಮಿಕರು ಬೇಕು. ಅವರಿಗೆ ಒಂದೆರಡು ದಿನ ಮುಂಚಿತವಾಗಿಯೇ ಹೇಳಬೇಕು. ಇದೆಲ್ಲಾ ತಾಪತ್ರಯವೇಕೆ ಎಂದು ಯಂತ್ರದ ಮೊರೆ ಹೋಗುತ್ತಿದ್ದೇವೆ. ಯಂತ್ರದ ಮೂಲಕ ಗಂಟೆಗೆ ಮುಕ್ಕಾಲು ಎಕರೆ ರಾಗಿ ಕೊಯ್ಯುಬಹುದು.
₹ 3,000ದಲ್ಲಿ ರಾಗಿ ಕಟಾವು ಮತ್ತು ಒಕ್ಕಣೆ ಮುಗಿಯುತ್ತದೆ. ನಮ್ಮ ಶ್ರಮವೂ ತಗ್ಗುತ್ತದೆ’ ಎನ್ನುತ್ತಾರೆ ರೈತ ಕೆ.ಸಿ. ಮಹೇಶ್ವರಪ್ಪ.

‘ಯಂತ್ರಗಳು ಬಳ್ಳಾರಿ, ಶಿವಮೊಗ್ಗ, ಹೊಸಪೇಟೆ, ಚಿತ್ರದುರ್ಗ ಸೇರಿ ಹಲವು ಕಡೆಯಿಂದ ಬಂದಿವೆ. ಇದಕ್ಕೂ ದಲ್ಲಾಳಿಗಳಿದ್ದಾರೆ. ರೈತನ ಜಮೀನಲ್ಲಿ ಕೊಯ್ಲು ಮತ್ತು ಹಣ ವಸೂಲಿ ಮಾಡುವುದು ದಲ್ಲಾಳಿಗಳ ಕೆಲಸ. ಇದಕ್ಕಾಗಿ ರೈತರಿಂದ ₹ 200ಕ್ಕೂ ಹೆಚ್ಚು ಹಣ ಪಡೆಯುತ್ತಾರೆ. ರಾಗಿ ಬೆಳೆ ಕೊಯ್ಯುವ ಯಂತ್ರಕ್ಕೆ ಎಲ್ಲಾ ಕಡೆ ಒಂದೇ ದರ ನಿಗದಿಪಡಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಮನವಿ ಮಾಡುತ್ತಾರೆ ಕೊರಟಿಕೆರೆ ರೈತ ಮಹಿಳೆ ಕಮಲಮ್ಮ.

ಯಂತ್ರದಿಂದ ಸಮಯ, ಹಣ ಉಳಿತಾಯ

ತಾಲ್ಲೂಕಿನಲ್ಲಿ ಈ ಬಾರಿ 27,600 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಶೇ 70ರಷ್ಟು ರಾಗಿ ಉತ್ತಮವಾಗಿ ಬೆಳೆದಿದ್ದು, ಕೊಯ್ಲಿಗೆ ಬಂದಿದೆ. ರೈತರು ಕೃಷಿ ಯಂತ್ರಗಳನ್ನು ಬಳಸಿದರೆ ಸಮಯ ಮತ್ತು ಹಣ ಉಳಿತಾಯವಾಗುತ್ತದೆ. ಹವಾಮಾನ ವೈಪರಿತ್ಯದಿಂದಾಗುವ ನಷ್ಟವನ್ನೂ ತಪ್ಪಿಸುತ್ತದೆ. ತಾಲ್ಲೂಕಿನ 4 ಹೋಬಳಿಗಳಲ್ಲಿನ ಕೃಷಿ ಯಂತ್ರಧಾರೆಯಲ್ಲಿ ಒಂದೊಂದು ಸಂಯುಕ್ತ ಒಕ್ಕಣೆ ಮತ್ತು ಕಟಾವು ಯಂತ್ರವಿದ್ದು, ರೈತರಿಗೆ ಗಂಟೆಗೆ ₹ 2,800 ರಂತೆ ನೀಡಲಾಗುತ್ತದೆ. ಆದರೆ, ಎಲ್ಲಾ ರೈತರಿಗೂ ಒಮ್ಮೆಲೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ

ಯಂತ್ರಗಳ ಮೂಲಕ ಕಟಾವು ಮಾಡಿ‌ಸುವುದರಿಂದ ಸ್ವಲ್ಪ ರಾಗಿ ಕಾಳುಗಳು ಉದುರಿ ಭೂಮಿಗೆ ಬೀಳುತ್ತವೆ. ಹುಲ್ಲು ಸಹ ದೊರೆಯುವುದಿಲ್ಲ. ಆದರೂ ಯಂತ್ರದ ಮೊರೆ ಹೋಗುವುದು ಅನಿವಾರ್ಯವಾಗಿದೆ.

- ಕರಿಸಿದ್ದಯ್ಯ, ತಾರೀಕೆರೆ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT