ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಸಲ್ ಬಿಮಾ ತಾರತಮ್ಯ: ರೈತರ ಆಕ್ರೋಶ

Last Updated 5 ಆಗಸ್ಟ್ 2022, 2:23 IST
ಅಕ್ಷರ ಗಾತ್ರ

ಹಿರಿಯೂರು:ಫಸಲ್ ಬಿಮಾ ಯೋಜನೆಯಡಿ ಬೆಳೆ ನಷ್ಟ ಪರಿಹಾರ ನೀಡುವಲ್ಲಿ ವಿಮಾ ಕಂಪನಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ನೂರಾರು ರೈತರು, ಕಂಪನಿ ಅಧಿಕಾರಿಗಳ ವಿರುದ್ಧ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಘೋಷಣೆ ಕೂಗಿದರು.

ಬೆಳೆ ವಿಮೆ ಬಿಡುಗಡೆ ವಂಚನೆ ಸಂಬಂಧ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಗುರುವಾರ ಅಧಿಕಾರಿ
ಗಳು ಮತ್ತು ರೈತರ ಸಭೆ ಕರೆದಿದ್ದರು. ಶಾಸಕರು ಬರುವ ಮೊದಲೇ ಸ್ಥಳಕ್ಕೆ ಬಂದಿದ್ದ ಕೃಷಿ ಇಲಾಖೆ ಮತ್ತು ವಿಮಾ ಕಂಪನಿ ಅಧಿಕಾರಿಗಳ ವಿರುದ್ಧ ರೈತರು ಘೋಷಣೆ ಕೂಗಿದರು.

‘2021–22ನೇ ಸಾಲಿನ ಹಿಂಗಾರು ಹಂಗಾಮಿಗೆ ಫಸಲ್ ಬಿಮಾ ಯೋಜನೆಯಲ್ಲಿ ತಾಲ್ಲೂಕಿನ ಐಮಂಗಲ ಮತ್ತು ಕಸಬಾ ಹೋಬಳಿ ರೈತರಿಗೆ ವಿಮಾ ಕಂಪನಿಯವರು ಭಾರಿ ವಂಚನೆ ಮಾಡಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಜಿ.ಪಿ. ಯಶವಂತರಾಜ್ ಆರೋಪಿಸಿದರು.

‘ತಾಲ್ಲೂಕಿನ ಕಸಬಾ ಮತ್ತು ಐಮಂಗಲ ಹೋಬಳಿಗಳ ಇಪ್ಪತ್ತಕ್ಕೂ ಹೆಚ್ಚು ಹಳ್ಳಿಗಳ 700ಕ್ಕೂ ಹೆಚ್ಚು ಪ್ರತಿ ಎಕರೆಗೆ ₹ 180ರಂತೆ ಯೂನಿವರ್ಸಲ್ ಸಂಪೋ ಜನರಲ್ ಕಂಪನಿಗೆ ಹಣ ಸಂದಾಯ ಮಾಡಿದ್ದಾರೆ. ಒಬ್ಬ ರೈತನಿಗೆ ಗರಿಷ್ಠ ₹ 10,000 ಪರಿಹಾರ ಬಿಡುಗಡೆಯಾಗಿತ್ತು. ಆದರೆ ಯೋಜನೆಯಡಿ ವಿಮಾ ಕಂತು ಪಾವತಿಸಿದ್ದ ರೈತರಿಗೆ ಪರಿಹಾರ ನೀಡುವಲ್ಲಿ ಕಂಪನಿಯವರು ತಾರತಮ್ಯ ಮಾಡಿದ್ದಾರೆ’ ಎಂದು ದೂರಿದರು.

‘ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಎರಡೂ ಬೇರೆ. ಜಿಲ್ಲೆಯ 10,400 ರೈತರಿಗೆ ಬೆಳೆ ಪರಿಹಾರ ಬಂದಿದೆ. ವಿಮೆ ಪಾವತಿಯಲ್ಲಿ ಸ್ಥಳೀಯ ಹಾನಿ ಹಾಗೂ ಬೆಳೆ ನಷ್ಟವಾದಾಗ ರೈತರೇ ನೇರವಾಗಿ ಅರ್ಜಿ ಹಾಕಿದ ನಂತರ ವಿಮಾ ಕಂಪನಿ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಎರಡು ವಿಧಾನಗಳಿವೆ. ಜಿಲ್ಲೆಯಲ್ಲಿ 5,363 ರೈತರು ವಿಮೆ ಕಂತು ಪಾವತಿಸಿದ್ದು, ಅವರಲ್ಲಿ 2,293 ರೈತರಿಗೆ ₹ 7.30 ಕೋಟಿ ವಿಮೆ ಪರಿಹಾರ ಜಮಾ ಆಗಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರಬೇಕಿರುವ ವಿಮೆ ರಾಜ್ಯದಲ್ಲಿ ಯಾರಿಗೂ ಬಂದಿಲ್ಲ. ಶೀಘ್ರ ಬಿಡುಗಡೆ ಆಗುವ ನಿರೀಕ್ಷೆ ಇದೆ’ ಎಂದುಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್ ಕುಮಾರ್‌ ಹೇಳಿದರು.

‘ಯಾವ ರೈತರಿಗೂ ಅನ್ಯಾಯವಾಗಲು ಅವಕಾಶ ಕೊಡುವುದಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿಮಾ ಅಧಿಕಾರಿಗಳ ಸಭೆ ನಡೆಸುತ್ತೇನೆ’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭರವಸೆ ನೀಡಿದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್. ತಿಮ್ಮಯ್ಯ, ರೈತ ಸಂಘದ ಕೆ.ಟಿ. ತಿಪ್ಪೇಸ್ವಾಮಿ, ಕಸವನಹಳ್ಳಿ ರಮೇಶ್, ಆಲೂರು ಸಿದ್ದರಾಮಣ್ಣ, ಬಬ್ಬೂರು ಸುರೇಶ್, ಬಿ.ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT