ಎಂಟು ವರ್ಷಗಳ ಬಳಿಕ ಒಂದಾದ ಅಪ್ಪ–ಮಗ

7
ನಾಪತ್ತೆಯಾಗಿದ್ದ ಪುತ್ರನನ್ನು ಅರಸಿ ಬಂದ ತಂದೆ

ಎಂಟು ವರ್ಷಗಳ ಬಳಿಕ ಒಂದಾದ ಅಪ್ಪ–ಮಗ

Published:
Updated:
Deccan Herald

ತುರುವನೂರು: ಮನೆ ತೊರೆದ ಮಗನಿಗೆ ಹುಡುಕಿ ವಿಫಲರಾಗಿದ್ದ ತಂದೆ, ಎಂಟು ವರ್ಷಗಳಿಂದ ಪುತ್ರಶೋಕದಲ್ಲಿ ಮುಳುಗಿದ್ದರು. ನಿರಾಶ್ರಿತ ಕೇಂದ್ರದ ಕರೆಯ ಜಾಡು ಹಿಡಿದು ಬಂದಿದ್ದ ಅವರ ಮೊಗದಲ್ಲಿ ದುಗುಡ ತುಂಬಿತ್ತು. ಮಗ ಸತ್ತೇ ಹೋಗಿದ್ದನೆಂದು ನಂಬಿದ್ದ ಅಪ್ಪನ ಎದುರು ಆತ ನಿಂತಾಗ ಅವರು ನಿರುತ್ತರರಾದರು. ಒಬ್ಬರನ್ನೊಬ್ಬರು ಬಾಚಿ ತಬ್ಬಿದಾಗ ಅರಿವಿಲ್ಲದಂತೆ ಹರಿದ ಆನಂದಬಾಷ್ಪ ಭೂಮಿಯನ್ನು ಸೋಕಿತು.

ಚಿತ್ರದುರ್ಗ ತಾಲ್ಲೂಕಿನ ಗೋನೂರು ಸಮೀಪದ ಹೋ.ಚಿ. ಬೋರಯ್ಯ ಬಡಾವಣೆಯ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಮಂಗಳವಾರ ಇಂತಹದೊಂದು ಅಪರೂಪದ ಕ್ಷಣ ಕಂಡು ಬಂದಿತು. ಎಂಟು ವರ್ಷಗಳ ಬಳಿಕ ಸಿಕ್ಕ ಪುತ್ರನನ್ನು ಕಂಡು ತಂದೆ ಬಿಕ್ಕಳಿಸಿ ಅತ್ತರು. ಪರಸ್ಪರ ಮುಖ ನೋಡಿಕೊಂಡು ಗದ್ಗದಿತರಾದರು. ತಂದೆ–ಮಗನ ಅಪರೂಪದ ಸಮಾಗಮಕ್ಕೆ ಕುಟುಂಬದ ಸಂಬಂಧಿಕರು, ಸ್ನೇಹಿತರು ಸಾಕ್ಷಿಯಾದರು.

ಮಹಾರಾಷ್ಟ್ರದ ಹಿಂಗೇಲಿ ಜಿಲ್ಲೆಯ ಕಲ್ಮನೂರಿ ತಾಲ್ಲೂಕಿನ ಜರಾ ಗ್ರಾಮದ ಕೌತಿಕ್ ರಾವ್ ಬಾಗೋಜಿ ಶಿಂಧೆ (73) ಅವರ ಪುತ್ರ ವಿಶ್ವನಾಥ್ ಶಿಂಧೆ(34) ವೃತ್ತಿಯಲ್ಲಿ ಆಟೊ ಚಾಲಕನಾಗಿದ್ದ. ಕುಟುಂಬದೊಂದಿಗೆ ಸಂತಸವಾಗಿದ್ದ ವಿಶ್ವಾನಾಥ್‌ಗೆ ವಿವಾಹವೂ ಆಗಿತ್ತು. ಮಾದಕ ವ್ಯಸನ ಅಂಟಿಸಿಕೊಂಡ ವಿಶ್ವನಾಥ್‌ ಪತ್ನಿಯಿಂದ ದೂರವಾದನು. ಇದೇ ಕೊರಗಿನಲ್ಲಿ ಮಾನಸಿಕ ಅಸ್ವಸ್ಥನಾಗಿ ಗ್ರಾಮ ತೊರೆದನು.

ನಾಪತ್ತೆಯಾದ ಪುತ್ರನಿಗೆ ಪೋಷಕರು ಎಲ್ಲೆಡೆ ಹುಡುಕಾಟ ನಡೆಸಿದರು. ಅನಾರೋಗ್ಯದಿಂದ ಬಳಲುತ್ತಿದ್ದ ಪುತ್ರನನ್ನು ಕಳೆದುಕೊಂಡಿದ್ದು, ಅವರ ದುಃಖವನ್ನು ಇಮ್ಮಡಿಗೊಳಿಸಿತ್ತು. ಆದರೆ, ಎಲ್ಲಿಯೂ ‍ಪುತ್ರನ ಸುಳಿವು ಲಭ್ಯವಾಗಲಿಲ್ಲ. ವರ್ಷಗಳು ಉರುಳಿದರೂ ಮಗ ಸಿಗದಿದ್ದಾಗ ಪುತ್ರ ಶೋಕ ಶಿಂಧೆ ಕುಟುಂಬವನ್ನು ಆವರಿಸಿತು.

‘ಒಂದು ದಿನ ಮಕ್ಕಳು ಮನೆಗೆ ತಡವಾಗಿ ಬಂದರೆ ಆತಂಕಗೊಳ್ಳುತ್ತೇವೆ. ಅಂತಹದರಲ್ಲಿ ಎಂಟು ವರ್ಷಗಳಿಂದ ಮನೆಗೆ ಬಾರದ ಮಗನನ್ನು ಕಳೆದುಕೊಂಡೆ ಎಂದೇ ಭಾವಿಸಿದ್ದೆವು. ಮಗನಿಲ್ಲದ ದಿನಗಳನ್ನು ಊಹಿಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ. ಕಣ್ಣ ಮುಂದೆ ಮಗನನ್ನು ಕಂಡು ಲೋಕವೇ ಗೆದ್ದಷ್ಟು ಸಂತೋಷವಾಗುತ್ತಿದೆ’ ಎಂದು ಪುತ್ರನನ್ನು ಆಲಂಗಿಸಿಕೊಂಡರು ಕೌತಿಕ್ ರಾವ್ ಬಾಗೋಜಿ ಶಿಂಧೆ.

ಗ್ರಾಮ ತೊರೆದ ವಿಶ್ವನಾಥ್‌ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿಳಿದರು. ಮಾನಸಿಕ ಸ್ಥಿಮಿತತೆ ಕಳೆದುಕೊಂಡಿದ್ದ ಅವರು ರಸ್ತೆಬದಿಯಲ್ಲೇ ದಿನ ದೂಡಿದರು. ಅದೊಂದು ದಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಸಿಕ್ಕಿತಾದರೂ ನೆನಪಿನ ಶಕ್ತಿ ಮರಳಲಿಲ್ಲ. ಬೆಂಗಳೂರಿನ ಕೇಂದ್ರದಲ್ಲಿ ನಿರಾಶ್ರಿತರ ಸಂಖ್ಯೆ ಹೆಚ್ಚಾದ ಬಳಿಕ ಚಿತ್ರದುರ್ಗಕ್ಕೆ ಸ್ಥಳಾಂತರಿಸಲಾಯಿತು.

‘ಮಾನಸಿಕ ಅಸ್ವಸ್ಥನಾಗಿದ್ದರಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ವೈದ್ಯರ ಸೂಚನೆ ಪಾಲಿಸಿದ ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣತೊಡಗಿತು. ದಿನ ಕಳೆದಂತೆ ಸಂಪೂರ್ಣ ಗುಣಮುಖರಾದರು’ ಎನ್ನುತ್ತಾರೆ ಗೋನೂರು ನಿರಾಶ್ರಿತರ ಪರಿಹಾರ ಕೇಂದ್ರದ ಅಧೀಕ್ಷಕ ಮಹದೇವಯ್ಯ.

ಗುಣಮುಖರಾದ ಬಳಿಕ ವಿಶ್ವನಾಥ್‌ ಅವರಿಗೆ ನೆನಪಿನ ಶಕ್ತಿ ಮರಳಿತು. ಊರು, ಪೋಷಕರ ವಿಳಾಸದ ಬಗ್ಗೆ ಮಾಹಿತಿ ನೀಡಿದರು. ನಿರಾಶ್ರಿತ ಕೇಂದ್ರದ ಸಿಬ್ಬಂದಿ ಇದನ್ನು ಮಹಾರಾಷ್ಟ್ರ ಪೊಲೀಸರಿಗೆ ತಿಳಿಸಿದರು. ಪುತ್ರ ಬದುಕಿರುವ ಸುದ್ದಿ ತಿಳಿದು ಕೌತಿಕ್‌ ಶಿಂಧೆ ಆತುರದಿಂದ ಬಂದಿದ್ದರು. ನಿರಾಶ್ರಿತರ ಕೇಂದ್ರದಲ್ಲಿನ ಸ್ನೇಹಿತರು ಕೈಕುಲುಕಿ ವಿಶ್ವನಾಥ್‌ ಅವರನ್ನು ಬೀಳ್ಕೊಟ್ಟರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !