ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ವರಮಹಾಲಕ್ಷ್ಮಿ ಹಬ್ಬಕ್ಕೂ ಕೊರೊನಾ ಕರಿನೆರಳು

ಕೆಲವೇ ದೇಗುಲಗಳಲ್ಲಿ ವಿಶೇಷಾಲಂಕಾರ | ಪೂಜಾ ಸಾಮಗ್ರಿ ಖರೀದಿಗೆ ಕಾಣದ ಉತ್ಸಾಹ
Last Updated 30 ಜುಲೈ 2020, 12:02 IST
ಅಕ್ಷರ ಗಾತ್ರ

ಚಿತ್ರದುರ್ಗ: ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ಜಿಲ್ಲೆಯಾದ್ಯಂತ ಸಂಭ್ರಮದಿಂದ ನಡೆಯುವ ವರಮಹಾಲಕ್ಷ್ಮಿ ಹಬ್ಬದ ಮೇಲೆ ಈ ಬಾರಿ ಕೊರೊನಾ ಕರಿನೆರಳು ಬೀರಿದೆ. ಗುರುವಾರ ಮಾರುಕಟ್ಟೆಗಳ ಬಳಿ ಪೂಜಾ ಸಾಮಗ್ರಿ ಖರೀದಿಸಲು ಬಂದಿದ್ದ ಅನೇಕರಲ್ಲಿ ಉತ್ಸಾಹ ಕಾಣಲಿಲ್ಲ.

ಹಲವೆಡೆ ಹೂವು, ಹಣ್ಣು, ಕಾಯಿ, ಎಲೆ, ಬಾಳೆದಿಂಡು, ಹೊಂಬಾಳೆ ಸೇರಿ ಇತರೆ ಪೂಜಾ ಸಾಮಗ್ರಿ ಖರೀದಿಸಲು ನಾಗರಿಕರು ಮುಂದಾದರು. ಆದರೂ ಹಿಂದಿನ ವರ್ಷದಂತೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸಲಿಲ್ಲ. ಮನೆಯ ಬಾಗಿಲು, ದೇವರ ಕೋಣೆ ಸಿಂಗರಿಸಲು ಹೂಗಳನ್ನು ಅಧಿಕ ಪ್ರಮಾಣದಲ್ಲಿ ಕೊಳ್ಳಲು ಆಸಕ್ತಿ ತೋರಲಿಲ್ಲ.

ವರಮಹಾಲಕ್ಷ್ಮಿ ವ್ರತ ಮಹಿಳೆಯರು ಸಂಭ್ರಮದಿಂದ ಆಚರಿಸುವ ಹಬ್ಬ. ಹಿಂದೂ ಸಂಪ್ರದಾಯದ ಪ್ರಕಾರ ಮನೆಗಳಲ್ಲಿ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸುವ ಪರಂಪರೆ ಇದೆ. ಅದಕ್ಕಾಗಿ ದೇವರ ಕೋಣೆ ಶುಚಿಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಆದರೆ, ವಿಶೇಷ ಮಂಟಪ ನಿರ್ಮಿಸಿ ಅದ್ದೂರಿಯಾಗಿ ಆಚರಿಸಲು ಅನೇಕ ಮಹಿಳೆಯರಲ್ಲಿ ಈ ಬಾರಿ ಸಡಗರ, ಸಂಭ್ರಮ ಇಲ್ಲವಾಗಿದೆ.

ಕೋವಿಡ್ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವ ಕಾರಣ ಅಕ್ಕಪಕ್ಕದ ಮನೆಗಳ ಮಹಿಳೆಯರನ್ನು ಪೂಜೆಗೆ ಆಹ್ವಾನಿಸಿ, ಪರಸ್ಪರ ಫಲ–ತಾಂಬೂಲ ವಿನಿಮಯ ಮಾಡಿಕೊಂಡು ಹಬ್ಬದ ಶುಭಾಶಯ ಕೋರಲಿಕ್ಕೂ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾರನ್ನೂ ಮನೆಗಳಿಗೆ ಆಹ್ವಾನಿಸದೇ ಸರಳವಾಗಿ ಆಚರಿಸಲು ಜನರು ಮುಂದಾಗಿದ್ದಾರೆ.

ಇಲ್ಲಿನ ನವದುರ್ಗಿಯರ ದೇಗುಲಗಳಲ್ಲಿ ಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ಆದರೆ, ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಬರಗೇರಮ್ಮ, ಉಚ್ಚಂಗಿಯಲ್ಲಮ್ಮ ದೇಗುಲ ಹೊರತುಪಡಿಸಿ ಉಳಿದ ದೇಗುಲಗಳಲ್ಲಿ ವಿಶೇಷ ಅಲಂಕಾರಕ್ಕಾಗಿ ಹೆಚ್ಚಿನ ಸಿದ್ಧತೆ ಕಂಡು ಬರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಪ್ರಸಾದ ವಿತರಿಸದಿರಲು ಆಡಳಿತ ಮತ್ತು ಭಕ್ತಮಂಡಳಿ ನಿರ್ಧರಿಸಿವೆ. ದೇವರ ದರ್ಶನ ಹಾಗೂ ಮಂಗಳಾರತಿಗೆ ಮಾತ್ರ ಅವಕಾಶವಿದೆ.

ಗಗನಕ್ಕೇರಿದ ಹೂವು, ಹಣ್ಣುಗಳ ದರ: ಸಗಟು ವ್ಯಾಪಾರ ಮಾರುಕಟ್ಟೆಯಲ್ಲಿ ಗುಣಮಟ್ಟದ ಹಳದಿ, ಕಲರ್, ಬಿಳಿ ಸೇವಂತಿ ಹೂ 8 ಮಾರು ಪುಷ್ಪಕ್ಕೆ ತಲಾ ₹ 1,000. ಇದೇ ದರಕ್ಕೆ ಕನಕಾಂಬರ 12 ಮಾರು, ಮಲ್ಲಿಗೆ 15 ಮಾರಿನಂತೆ ಹೂ ಖರೀದಿಯಾಗುತ್ತಿದ್ದವು. ವಿವಿಧ ಬಣ್ಣಗಳ ಗುಲಾಬಿ (ಬಟನ್ಸ್) ಹೂಗಳು ಕೆ.ಜಿಗೆ ₹ 300ರಂತೆ ಮಾರಾಟವಾದವು.

ಲಕ್ಷ್ಮಿದೇವಿ ಮೂರ್ತಿ, ಕಳಶಕ್ಕೆ ಹಾಕುವ ಹಾರ ₹ 150ರಿಂದ ₹ 500 ಸೇರಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹಾರಗಳನ್ನು ಮಾರಾಟಗಾರರು ತಯಾರಿಸಿದ್ದರು.

ಹಬ್ಬದ ಹಿನ್ನಲೆಯಲ್ಲಿ ಹಣ್ಣುಗಳ ದರವೂ ಹೆಚ್ಚಾಗಿತ್ತು. 1 ಕೆ.ಜಿ ಲೆಕ್ಕದಲ್ಲಿ ಸೇಬು ₹ 200, ಬಾಳೆಹಣ್ಣು ₹ 60, ದಾಳಿಂಬೆ ₹ 80, ಮೋಸಂಬಿ ₹ 60, ಕರಿದ್ರಾಕ್ಷಿ, ಹಸಿರು ದ್ರಾಕ್ಷಿ ತಲಾ ₹ 120, ವೀಳ್ಯದ ಎಲೆ ₹ 60 ಕಟ್ಟು, ಮಾವಿನ ಸೊಪ್ಪು ₹ 20 ಕಟ್ಟು, ಬಾಳೆ ದಿಂಡು ಜೋಡಿ ₹ 30, ತೆಂಗಿನಕಾಯಿ ₹ 20ರಿಂದ 30ರವರೆಗೂ ಮಾರಾಟವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT