ಭಾನುವಾರ, ಆಗಸ್ಟ್ 14, 2022
20 °C
ಸಮುದಾಯಕ್ಕಾಗಿ ಪಕ್ಷಾತೀತವಾಗಿ ಒಗ್ಗೂಡಿ: ಈಶ್ವರಾನಂದಪುರಿ ಸ್ವಾಮೀಜಿ ಸಲಹೆ

ಹಕ್ಕಿಗಾಗಿ ಪಾದಯಾತ್ರೆ ಅನಿವಾರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವ ಸಂಬಂಧ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಕಾಗಿನೆಲೆಯಿಂದ ಬೆಂಗಳೂರಿಗೆ 24 ದಿನ ಆಯೋಜಿಸಿರುವ 340 ಕಿ.ಮೀ ದೂರದ ಪಾದಯಾತ್ರೆ ಅನಿವಾರ್ಯ.

ಇಲ್ಲಿನ ಕುರುಬ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಕಾಗಿನೆಲೆ ಕನಕ ಗುರುಪೀಠ, ಜಿಲ್ಲಾ ಕುರುಬರ ಸಂಘ, ಹಾಲುಮತ ಮಹಾಸಭಾ ಸಂಘಟನೆಗಳ ನೇತೃತ್ವದಲ್ಲಿ ಶನಿವಾರ ರಾಜ್ಯಮಟ್ಟದ ಬೃಹತ್ ಸಮಾವೇಶದ ಅಂಗವಾಗಿ ನಡೆದ ಎಸ್‌ಟಿ ಹೋರಾಟ ಸಮಿತಿ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

‘ಹಿಂದುಳಿದ ಬುಡಕಟ್ಟು ಸಂಸ್ಕೃತಿಯುಳ್ಳ ಹಾಲುಮತ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಕೊಡಿಸುವ ಅನಿವಾರ್ಯತೆ ಖಂಡಿತ ಇದೆ. ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರು ಪಕ್ಷಾತೀತವಾಗಿ ಒಗ್ಗೂಡಿ, ಕೈಜೋಡಿಸಿ’ ಎಂದು ಹೊಸದುರ್ಗ ತಾಲ್ಲೂಕಿನ ಕಾಗಿನೆಲೆ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

‘ಪಾದಯಾತ್ರೆ ವೇಳೆ ಚಿತ್ರದುರ್ಗ ಜಿಲ್ಲೆಯ ಏಳು ಗ್ರಾಮಗಳಲ್ಲಿ ರಾತ್ರಿ ವಾಸ್ತವ್ಯ ಹೂಡಲು ಕೇಂದ್ರಗಳನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಇದು ಕುರುಬ ಸಮುದಾಯದ ಹಕ್ಕಿನ ಪ್ರಶ್ನೆಯಾಗಿದ್ದು, ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದರು.

‘ಹೋರಾಟಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿನ ಸಮಿತಿ ಸಂಘಟಿಸಲಾಗುತ್ತಿದೆ. ಈ ಮೂಲಕ ಹೋರಾಟಕ್ಕೆ ಸಮುದಾಯದವರನ್ನು ಜಾಗೃತಗೊಳಿಸಲಾಗುತ್ತಿದೆ. ಸಮು
ದಾಯದ ಪ್ರತಿಯೊಬ್ಬರ ಪಾತ್ರವೂ ಅತಿ ಮುಖ್ಯವಾಗಿದೆ’ ಎಂದರು.

ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ‘ಪಾದಯಾತ್ರೆಗೆ ಸಮುದಾಯದ ಎಲ್ಲರ ಬೆಂಬಲ ಅಗತ್ಯ’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಸುರೇಶ್‌ಬಾಬು, ‘ಪುರುಷರಷ್ಟೇ ಅಲ್ಲ. ಜಿಲ್ಲೆಯಲ್ಲಿನ ಸಮುದಾಯದ ಮಹಿಳೆಯರೂ ಕೈಜೋಡಿಸಬೇಕು. ಈ ಹೋರಾಟ ಸ್ವಾರ್ಥಕ್ಕಾಗಿ ಮಾಡುತ್ತಿಲ್ಲ. ಸಮುದಾಯದವರಿಗೆ ನ್ಯಾಯ ಸಿಗಬೇಕು ಎಂಬ ಉದ್ದೇಶಕ್ಕಾಗಿ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಸಮುದಾಯದ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜಿನ, ಎಂಜಿನಿಯರ್ ಕಾಲೇಜಿನ ಸೀಟು ಪಡೆಯುವುದಕ್ಕಿಂತಲೂ ವಿವಿಧ ರೀತಿಯ ಸೌಲಭ್ಯ ಪಡೆಯಲು ಮೀಸಲಾತಿ ಅಗತ್ಯವಿದೆ. ನಮ್ಮ ಗುರಿ ಮುಟ್ಟುವವರೆಗೆ ನಿರಂತರ ಹೋರಾಟ ನಡೆಯಬೇಕಿದೆ. ಈ ವಿಚಾರದಲ್ಲಿ ಅವ್ಯವಸ್ಥೆ ಆಗಬಾರದು’ ಎಂದರು.

ಸಮುದಾಯದ ಮುಖಂಡರಾದ ಶ್ರೀರಾಮ್, ಬಿ.ಟಿ. ಜಗದೀಶ್, ಎಂ.ಎಚ್. ಕೃಷ್ಣಮೂರ್ತಿ, ರಜನಿಲೇಪಾಕ್ಷಿ, ಕರಿಯಪ್ಪ, ನಿಶಾನಿ ಜಯಣ್ಣ, ಎಚ್. ಮಂಜಪ್ಪ, ಮಲ್ಲಿಕಾರ್ಜುನ್, ಜಗನ್ನಾಥ, ಎಮ್ಮೆಹಟ್ಟಿ ಹನುಮಂತಪ್ಪ, ಕಂದಿಕೆರೆ ಸುರೇಶ್ ಇದ್ದರು.

ಮೀಸಲಾತಿ ಸಿಗುವುದಿಲ್ಲ ಎಂಬ ಅನುಮಾನವೇಕೆ?

‘ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಗುವುದಿಲ್ಲ ಎಂಬ ಅನುಮಾನ ರಾಜ್ಯದ ಎಲ್ಲಾ ಪಕ್ಷಗಳಲ್ಲಿನ ನಮ್ಮ ಸಮುದಾಯದ ಮುಖಂಡರಲ್ಲಿದೆ. ಈ ಗೊಂದಲ ಏಕೆ’ ಎಂದು ಕಾಗಿನೆಲೆ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಪ್ರಶ್ನಿಸಿದರು.

‘2021ರ ಜ. 15ರಿಂದ ಫೆಬ್ರುವರಿ 7ರ ವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಎಲ್ಲಿ ಸಮಾವೇಶ ಮಾಡಬೇಕು ಎಂಬ ಕುರಿತು ತೀರ್ಮಾನಿಸಲಿದ್ದೇವೆ’ ಎಂದು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು