ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಥಮ ಚಿಕಿತ್ಸೆ: ಸಾರ್ವಜನಿಕರಿಗೂ ತರಬೇತಿ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌ ಹೇಳಿಕೆ
Last Updated 28 ಅಕ್ಟೋಬರ್ 2022, 7:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಅ‍ಪಘಾತ ಹಾಗೂ ಪ್ರಕೃತಿ ವಿಕೋಪದಂತಹ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ಉಪಚರಿಸಲು ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಸಾರ್ವಜನಿಕರಿಗೂ ನೀಡಲು ಆರೋಗ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್‌.ರಂಗನಾಥ್‌ ತಿಳಿಸಿದರು.

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿನ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿವಿಧ ಇಲಾಖೆ ಸಿಬ್ಬಂದಿಗೆ ಆಯೋಜಿಸಿದ್ದ ಮೂರು ದಿನದ ಕೌಶಲ ಆಧಾರಿತ ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಆಪತ್ಕಾಲದಲ್ಲಿ ನೀಡುವ ಪ್ರಥಮ ಚಿಕಿತ್ಸೆಯಿಂದ ಶೇ 50ರಷ್ಟು ಸಾವು ಸಂಭವಿಸುವುದನ್ನು ತಪ್ಪಿಸಲು ಸಾಧ್ಯವಿದೆ. ಅಪಘಾತ ಸಂಭವಿಸಿದ ಸಂದರ್ಭದ ಅಮೂಲ್ಯ ಸಮಯವನ್ನು ಹಾಳಾಗದಂತೆ ನೋಡಿಕೊಳ್ಳಬೇಕಿದೆ. ಪ್ರಕೃತಿ ವಿಕೋಪ, ಅವಘಡ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಇದ್ದವರೇ ಪ್ರಥಮ ಹಂತದ ಚಿಕಿತ್ಸೆ ನೀಡುವಂತಾಗಬೇಕು. ಆಗ ಇನ್ನಷ್ಟು ಜೀವ ಉಳಿಸಲು ಸಾಧ್ಯ’ ಎಂದರು.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಸಾರ್ವಜನಿಕರಿಗೆ ಪ್ರಥಮ ಚಿಕಿತ್ಸೆ ನೀಡುವ ಕುರಿತು ತರಬೇತಿ ನೀಡಲಾಗುತ್ತದೆ. ಪಂಚಾಯಿತಿ ಹಾಗೂ ನಗರಸಭೆ ವ್ಯಾಪ್ತಿಯಲ್ಲಿ ವಾರ್ಡ್‌ವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸ್ವಯಂ ಪ್ರೇರಿತವಾಗಿ ಬರುವ ಎಲ್ಲರಿಗೂ ಈ ತರಬೇತಿ ನೀಡಲಾಗುವುದು’ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ‘ಆಪತ್ಕಾಲದಲ್ಲಿ ಸ್ಪಂದನೆ ತೋರುವ ಅಗತ್ಯವಿದೆ. ತೊಂದರೆಯಲ್ಲಿ ಸಿಲುಕಿದ ವ್ಯಕ್ತಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರೆ, ಅದು ಜೀವ ಉಳಿಸಲು ಪರಿಣಾಮಕಾರಿಯಾಗುತ್ತದೆ. ಆಪತ್ಕಾಲದಲ್ಲಿ ಕೇವಲ ವೈದ್ಯರು ಅಥವಾ ವೈದ್ಯಕೀಯ ಸಿಬ್ಬಂದಿ ಮಾತ್ರ ಸ್ಪಂದಿಸಬೇಕು ಎಂದು ತಿಳಿಯುವುದು ಸರಿಯಲ್ಲ. ಸ್ಥಳದಲ್ಲಿ ಇರುವ ಯಾವುದೇ ವ್ಯಕ್ತಿ ಪ್ರಥಮ ಚಿಕಿತ್ಸೆ ನೀಡಬಹುದು’ ಎಂದರು.

‘ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಪೊಲೀಸ್, ಅಗ್ನಿಶಾಮಕ, ಬೆಸ್ಕಾಂ, ಸಾರಿಗೆ ಇಲಾಖೆ, ಗೃಹ ರಕ್ಷಕ ಸಿಬ್ಬಂದಿಗೆ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ಪಡೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಆರೋಗ್ಯ ಇಲಾಖೆಯಿಂದಲೇ ತರಬೇತಿ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಎಸ್.ಬಿ.ರವೀಂದ್ರ ಮಾತನಾಡಿದರು. ಗೃಹ ರಕ್ಷಕ ದಳ ಜಿಲ್ಲಾ ಕಮಾಂಡೆಂಟ್‌ ಸಿ.ಕೆ.ಸಂಧ್ಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT