ಶನಿವಾರ, ಜನವರಿ 29, 2022
22 °C
ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಕ್ರಮ

ಮೊದಲ ದಿನ 19,689 ಮಕ್ಕಳಿಗೆ ಲಸಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ‘ನಾವು ಲಸಿಕೆ ಪಡೆದಿದ್ದೇವೆ... ನೀವೂ ಲಸಿಕೆ ಪಡೆದು ಕುಟುಂಬದ ಜೊತೆ ಸಮಾಜವನ್ನು ಕೋವಿಡ್‌ನಿಂದ ರಕ್ಷಿಸಿ’ ಎಂಬ ಸಂದೇಶವನ್ನು ವಿದ್ಯಾರ್ಥಿನಿಯರು ಸಾರಿದರು.

ನಗರದ ಬಾಲಕಿಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸೋಮವಾರ ಆಯೋಜಿಸಿದ್ದ 15 ರಿಂದ 18 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಯಾವುದೇ ಆತಂಕವಿಲ್ಲದೇ ಕೋವ್ಯಾಕ್ಸಿನ್ ಲಸಿಕೆ ಪಡೆದರು. ಬಳಿಕ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸೂಚನೆಯಂತೆ ಒಂದೆರಡು ನಿಮಿಷ ವಿಶ್ರಾಂತಿ ಪಡೆದು ಸಂಭ್ರಮದ ನಗೆ ಬೀರಿದರು.

‘ಕೋವಿಡ್‌ನಿಂದ ಇಡೀ ವಿಶ್ವವೇ ನಲುಗಿದೆ. ಶಾಲೆ–ಕಾಲೇಜುಗಳಿಲ್ಲದೇ ಶೈಕ್ಷಣಿಕವಾಗಿ ನಾವು ಸಮಸ್ಯೆ ಅನುಭವಿಸಿದೆವು. ಇದೀಗ ತರಗತಿಗಳನ್ನು ಆರಂಭಿಸಿ ಲಸಿಕೆ ನೀಡುತ್ತಿರುವುದು ಸಂತಸ ತಂದಿದೆ. ಈಗಾಗಲೇ ಲಸಿಕೆಯ ಬಗ್ಗೆ ಸಾಕಷ್ಟು ಮಾಹಿತಿ ತಿಳಿದ ಕಾರಣ ಯಾವುದೇ ಭಯವಾಗಿಲಿಲ್ಲ’ ಎಂದು ದ್ವಿತೀಯ ಪಿಯು ವಿದ್ಯಾರ್ಥಿನಿ ಸಿ. ಸಿಂಧು ತಿಳಿಸಿದರು.

‘ಗ್ರಾಮೀಣ ಭಾಗದಲ್ಲಿ ಬಹಳಷ್ಟು ಜನ ಲಸಿಕೆ ಪಡೆಯಲು ಭಯಪಡುತ್ತಿದ್ದಾರೆ. ನಾವುಗಳೇ ಲಸಿಕೆ ಪಡೆದು ಧೈರ್ಯವಾಗಿದ್ದೇವೆ. ಇದರಿಂದ ಕೋವಿಡ್ ವಿರುದ್ಧ ಹೋರಾಡಲು ದೇಹ ಸಿದ್ಧವಾಗುತ್ತದೆ. ದಯವಿಟ್ಟು ಸರ್ಕಾರದ ಸೂಚನೆಯಂತೆ ಪ್ರತಿಯೊಬ್ಬರೂ ಎರಡು ಹಂತದ ಲಸಿಕೆ ಪಡೆಯಿರಿ’ ಎಂದು ದ್ವಿತೀಯ ಪಿಯು ವಿದ್ಯಾರ್ಥಿನಿ ಕೆ.ಟಿ. ಸಾವಿತ್ರಿ ಮನವಿ
ಮಾಡಿದರು.

76,142 ಮಕ್ಕಳಿಗೆ ಲಸಿಕೆ: ಜಿಲ್ಲೆಯಲ್ಲಿ 15ರಿಂದ 18 ವರ್ಷದ 76,142 ಮಕ್ಕಳನ್ನು ಗುರುತಿಸಲಾಗಿದೆ. ಇವರಿಗೆ ಕೋವ್ಯಾಕ್ಸಿನ್ ಲಸಿಕೆ ಮಾತ್ರ ನೀಡಲಾಗುತ್ತಿದ್ದು, ಕೋವಿಶೀಲ್ಡ್ ಲಸಿಕೆ ನೀಡುತ್ತಿಲ್ಲ. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಲಸಿಕೆ ನೀಡಿದರು. ಕೆಲವೆಡೆ ಪಾಲಕರು ಸ್ಥಳದಲ್ಲಿದ್ದು ಮಕ್ಕಳಿಗೆ ಲಸಿಕೆ ಹಾಕಿಸಿದ್ದು ಕಂಡು
ಬಂದಿತು.

‘9, 10ನೇ ತರಗತಿ, ಪ್ರಥಮ ಹಾಗೂ ದ್ವಿತೀಯ ಪಿಯು, ಐಟಿಐ, ಡಿಪ್ಲೊಮಾ, ಜಿಟಿಟಿಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ತರಬೇತಿ ಪಡೆದ ಶಾಲಾ ಶಿಕ್ಷಕರು, ವೈದ್ಯಾಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರನ್ನು ಲಸಿಕಾ ಕೇಂದ್ರಕ್ಕೆ ನಿಯೋಜಿಸಲಾಗಿದೆ. 18 ವರ್ಷ ಮೇಲಿನವರಿಗೆ ಈಗಾಗಲೇ ಮೊದಲ ಡೋಸ್ ಶೇ 98ರಷ್ಟು ಹಾಗೂ ಎರಡನೇ ಡೋಸ್‌ ಶೇ 74 ರಷ್ಟು ಪ್ರಗತಿ ಸಾಧಿಸಲಾಗಿದೆ’ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಕುಮಾರಸ್ವಾಮಿ
ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್. ರಂಗನಾಥ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ. ನಂದಿನಿ ದೇವಿ, ತಹಶೀಲ್ದಾರ್ ಸತ್ಯನಾರಾಯಣ ಇದ್ದರು.

ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿರುವುದಿಲ್ಲ. ಮಕ್ಕಳು ಲಸಿಕೆ ಹಾಕಿಸಿಕೊಂಡು ಪಾಲಕರ ಮನವೊಲಿಸಬೇಕು. ಓಮೈಕ್ರಾನ್ ಇದೀಗ ಹರಡುತ್ತಿದ್ದು, ಎಲ್ಲರೂ ಕೋವಿಡ್ ಮಾರ್ಗಸೂಚಿ ಪಾಲಿಸಿ.

- ಜಿ.ಎಚ್. ತಿಪ್ಪಾರೆಡ್ಡಿ, ಶಾಸಕ

ಫಿಟ್‌ನೆಸ್‌ಗೆ ನಮ್ಮ ಶಾಸಕರೇ ರೋಲ್ ಮಾಡೆಲ್. ಎಲ್ಲರೂ ತಪ್ಪದೇ ಲಸಿಕೆ ಪಡೆದು ಕೋವಿಡ್‌ನಿಂದ ಸಮಾಜವನ್ನು ರಕ್ಷಿಸಬೇಕು. ನೀವು ಲಸಿಕೆ ಪಡೆದು ಜನಜಾಗೃತಿ ಮೂಡಿಸಬೇಕು.

- ಕೆ.ಎಸ್. ನವೀನ್, ವಿಧಾನ ಪರಿಷತ್ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.