ಇನ್ಫೊಸಿಸ್‌ ಫೌಂಡೇಶನ್ ಮತ್ತು ರಾಮಕೃಷ್ಣ ಆಶ್ರಮದಿಂದ ಜಾನುವಾರುಗಳಿಗೆ ಮೇವು ವಿತರಣೆ

ಸೋಮವಾರ, ಏಪ್ರಿಲ್ 22, 2019
33 °C

ಇನ್ಫೊಸಿಸ್‌ ಫೌಂಡೇಶನ್ ಮತ್ತು ರಾಮಕೃಷ್ಣ ಆಶ್ರಮದಿಂದ ಜಾನುವಾರುಗಳಿಗೆ ಮೇವು ವಿತರಣೆ

Published:
Updated:
Prajavani

ಚಳ್ಳಕೆರೆ: ‘ಬರದ ಪರಿಣಾಮವಾಗಿ ಮೇವಿನ ಕೊರತೆ ಎದುರಿಸುತ್ತಿದ್ದ ದೇವರ ದನಗಳಿಗೆ ಇನ್ಫೊಸಿಸ್ ಕಂಪನಿ ಮತ್ತು ಪಾವಗಡ ಶ್ರೀ ರಾಮಕೃಷ್ಣ ಆಶ್ರಮದಿಂದ ಉಚಿತ ಮೇವು ಪೂರೈಕೆ ಮತ್ತು ಹಿಂಡಿ, ಬೂಸಾ ವಿತರಿಸುತ್ತಿದ್ದೇವೆ’ ಎಂದು ಜಪಾನಂದಸ್ವಾಮೀಜಿ ತಿಳಿಸಿದರು.

ಬೆಂಗಳೂರು ಇನ್ಫೊಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಸಹಕಾರದಿಂದ ಪಾವಗಡದ ರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ಅವರ ತಂಡ ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಕಟ್ಟೆಮನೆಯ ಕುರಡಿಹಳ್ಳಿ, ಬೊಮ್ಮೆದೇವರಹಟ್ಟಿ. ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ಬೂದಿಹಳ್ಳಿ ಮತ್ತು ಬೋಗನಹಳ್ಳಿ ದೇವರ ಎತ್ತಿನ ಗೂಡುಗಳಿಗೆ ಮಂಗಳವಾರ ಭೇಟಿ ನೀಡಿ ದನಗಳ ಪ್ರತಿ ಗೂಡಿಗೂ ಎರಡೆರಡು ಲೋಡ್ ಮೇವು, 100 ಕೆ.ಜಿ.ಶೇಂಗಾ ಹಿಂಡಿ, 300 ಕೆ.ಜಿ ಬೂಸಾ ಮತ್ತು 70 ಪ್ಲಾಸ್ಟಿಕ್ ಬುಟ್ಟಿಗಳನ್ನು ವಿತರಿಸುತ್ತಿದ್ದೇವೆ ಎಂದರು.

ಮೂರು ತಿಂಗಳಿಂದ 1500 ದೇವರ ದನಗಳ ಆರೈಕೆಯ ಜವಾಬ್ದಾರಿಯನ್ನು ಹೊತ್ತು ರಾಮಕೃಷ್ಣ ಸೇವಾಶ್ರಮದಿಂದ ಮೇವು ಒದಗಿಸುತ್ತಿರುವುದಾಗಿ ಜಪಾನಂದ ಸ್ವಾಮೀಜಿ ತಿಳಿಸಿದರು.

ಇಡೀ ರಾಜ್ಯದಲ್ಲಿ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಕೂಡ್ಲಿಗಿ ತಾಲ್ಲೂಕುಗಳನ್ನು ಹೊರತು ಪಡಿಸಿದರೆ ಎಲ್ಲಿಯೂ ಮ್ಯಾಸಬೇಡ ಬುಡಕಟ್ಟು ಸಂಸ್ಕೃತಿಯ ದೇವರ ದನಗಳು ಕಂಡು ಬರುವುದಿಲ್ಲ. ಚಿತ್ರದುರ್ಗ ಜಿಲ್ಲೆ ಬಯಲು ಸೀಮೆಯ ವಿಶಿಷ್ಟವಾದ ಬುಡಕಟ್ಟು ಸಮುದಾಯದ ಆಚಾರ, ವಿಚಾರ, ಸಂಸ್ಕೃತಿ ಉಳಿಸುವ ಸಲುವಾಗಿ ದೇವರ ದನಗಳ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ಹೇಳಿದರು.

ಶ್ರೀ ರಾಮಕೃಷ್ಣ ಸೇವಾಶ್ರಮದ ಆಡಳಿತಾಧಿಕಾರಿಗಳಾದ ನಾಗರಾಜ, ರವೀಂದ್ರ, ಶ್ರೀನಿವಾಸ್, ಎತ್ತಿನ ಕಿಲಾರಿ, ಚಿನ್ನಪಾಲಯ್ಯ, ಜೋಗಯ್ಯ, ಚಿನ್ನಯ್ಯ, ನಾಗರಾಜ, ದೊರೆಬೈಯಣ್ಣ, ಪಾಪಣ್ಣ, ಓಬಣ್ಣ, ಸಿದ್ದೇಶ್ ಇದ್ದರು.

ಮ್ಯಾಸಬೇಡ ಸಮುದಾಯದ ದೇವರ ಎತ್ತುಗಳು ಮೇವಿನ ಕೊರತೆ ಬಗ್ಗೆ ಫೆ.7.ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !