ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಾವಿರದ ಸಿರಿಬೆಳಗು’ ಸಿರಿಯಜ್ಜಿ

Published 30 ಆಗಸ್ಟ್ 2023, 11:13 IST
Last Updated 30 ಆಗಸ್ಟ್ 2023, 11:13 IST
ಅಕ್ಷರ ಗಾತ್ರ

ಮಲ್ಲಿಕಾರ್ಜುನ ಕಲಮರಹಳ್ಳಿ

ಜಾನಪದ ವಿದ್ವಾಂಸರ ಕಿವಿಗೆ ಚಿತ್ರದುರ್ಗ ಎಂಬ ಶಬ್ದ ಬಿದ್ದೊಡನೆ ಥಟ್ಟನೆ ನೆನಪಾಗುವ ಮಹಿಳೆ ಸಿರಿಯಜ್ಜಿ.

ಚಳ್ಳಕೆರೆ ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿಯ ಗುಡ್ಡದ ಈರಪ್ಪ ಮತ್ತು ಕಾಡಮ್ಮ ದಂಪತಿಯ ಮಗಳಾಗಿ ಜನಿಸಿದ ಸಿರಿಯಮ್ಮ, 12ನೇ ವಯಸ್ಸಿಗೆ ತಿಪ್ಪೇಸ್ವಾಮಿಯವರ ಬಾಳಸಂಗಾತಿಯಾದವರು. ಅಜ್ಜಿ ಹಾಗೂ ತಾಯಿಯಿಂದ ಪದಗಳನ್ನು ಕಲಿತು ಎಳವೆಯಿಂದಲೇ ಹಾಡಲು ಆರಂಭಿಸಿದವರು. ಬಾಳಸಂಜೆಯ ಕೊನೆಯ ದಿನಗಳವರೆಗೆ ಕಾಡುಗೊಲ್ಲ ಬುಡಕಟ್ಟು ವೀರರಾದ ಎತ್ತಪ್ಪ, ಜುಂಜಪ್ಪ, ಚಿತ್ತಯ್ಯ, ಕಾಟಯ್ಯ, ಬಂಜಗೆರೆ ಈರಣ್ಣ, ಹಂದಿಸಿರಿಯಣ್ಣ, ಕ್ಯಾತಪ್ಪ, ಕೊಂಡದಕಾಟಮ್ಮ, ಗೌರಸಂದ್ರ ಮಾರಮ್ಮ ಹೀಗೆ ಮೊದಲಾದವರ ಕಾವ್ಯಗಳನ್ನು ಹಾಡಿದ್ದಾರೆ.

ಅಷ್ಟೇ ಅಲ್ಲದೆ ಮದುವೆ, ಸೋಬಾನೆ, ವಸಗೆ, ಮುಂತಾದ ಸಾಂಸ್ಕೃತಿಕ ಸಾಂದರ್ಭಿಕ ಪದಗಳ ಜೊತೆಗೆ ಸುಮಾರು ಹತ್ತು ಸಾವಿರ ತ್ರಿಪದಿಗಳನ್ನು ತನ್ನ ಎದೆಯ ಗಣಿಯಲ್ಲಿ ಕೇಂದ್ರೀಕರಿಸಿಕೊಂಡಿದ್ದರು. ಯಾರೇ ಆಗಲಿ, ಎಂಥಾ ಹೊತ್ತಿನಲ್ಲೇ ಆಗಲಿ ಪದ ಹೇಳಜ್ಜಿ ಎಂದಕೂಡಲೇ ಬೇಸರಿಸಿಕೊಳ್ಳದೆ, ಕಿಂಚಿತ್ತೂ ಸಂಕೋಚವಿಲ್ಲದೆ, ನಿರಾಯಾಸವಾಗಿ, ನಿರರ್ಗಳವಾಗಿ ಹಾಡುವ ಸಿರಿಯಜ್ಜಿ, ಮಧ್ಯಕರ್ನಾಟಕದ ಸುತ್ತೆಲ್ಲ ತಿರುಗಾಡಿ ತಮ್ಮ ಕಂಠಸಿರಿಯ ಮೂಲಕ ಜನರನ್ನು ರಂಜಿಸಿದ್ದಾರೆ. ಸ್ವತಃ ಆನಂದಪಟ್ಟಿದ್ದಾರೆ. ಆಕಾಶವಾಣಿ, ದೂರದರ್ಶನಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇವರ ಪ್ರತಿಭೆಯನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ಆರ್.ಗುಂಡೂರಾವ್, ರಾಮಕೃಷ್ಣ ಹೆಗಡೆ ಹಾಗೂ ಸಾಹಿತಿಗಳಾದ ಎ.ಕೆ. ರಾಮಾನುಜಂ, ಎಸ್.ಎಲ್.ಭೈರಪ್ಪ, ಜೀ.ಶಂ.ಪರಮಶಿವಯ್ಯ, ಎಚ್.ಎಲ್.ನಾಗೇಗೌಡ, ಕಾಳೇಗೌಡ ನಾಗವಾರ, ಪೀಟರ್ ಜೆ.ಕ್ಲಾಸ್ ಮೊದಲಾದವರು ಭೇಟಿಯಾಗಿದ್ದಾರೆ. ಅಜ್ಜಿಯ ಪದಗಳ ಜೇನು ಸವಿದಿದ್ದಾರೆ.

ತೀ.ನಂ.ಶಂಕರನಾರಾಯಣ, ಕೃಷ್ಣಮೂರ್ತಿ ಹನೂರು, ಮೀರಾಸಾಬಿಹಳ್ಳಿ ಶಿವಣ್ಣ ಮೊದಲಾದ ಜನಪದ ಸಂಶೋಧಕರು ಹಲವು ಸಾಂಸ್ಕೃತಿಕ ಸಾಮಗ್ರಿಗಳನ್ನು ತಮ್ಮ ವಿದ್ವತ್ತಿನ ಜೋಳಿಗೆಗೆ ತುಂಬಿಸಿಕೊಂಡಿದ್ದಾರೆ. ಇಂತಹ ಸಂದರ್ಭಗಳು ಬಹುತೇಕ ಕಲಾವಿದರಿಗೆ ಲಭ್ಯವಾಗುವುದಿಲ್ಲ. ಲಭ್ಯವಾದರೂ ಆ ಸನ್ನಿವೇಶಗಳ ಸ್ವಾರಸ್ಯಗಳನ್ನು, ಮಹತ್ವವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹೀಗಿರುವಾಗ ಸಿರಿಯಜ್ಜಿ ಮಾತ್ರ ಇವರೆಲ್ಲರಿಗಿಂತ ಭಿನ್ನ. ತಾನು ಕಂಡಂತಹ ಗಣ್ಯ ರಾಜಕಾರಣಿಗಳ, ಸಂಶೋಧಕ, ಸಾಹಿತಿಗಳ ಜೊತೆಗಿನ ಸ್ವಾರಸ್ಯಕರ ಅನುಭವಗಳನ್ನು ತನ್ನ ಬಂಧುಬಳಗ ಹಾಗೂ ಆಸಕ್ತ ಜನರೊಂದಿಗೆ ಚಾಚು ತಪ್ಪದೆ ಹಂಚಿಕೊಳ್ಳುತ್ತಿದ್ದರು.

ಸಿರಿಯಜ್ಜಿಯನ್ನು ಹತ್ತಾರು ಸಂದರ್ಭಗಳಲ್ಲಿ ಪ್ರೇರೇಪಿಸಿ ಪ್ರೋತ್ಸಾಹಿಸಿದವರು ಸಾಹಿತಿ ಬೆಳಗೆರೆ ಕೃಷ್ಣಶಾಸ್ತ್ರಿ. ಸಿರಿಯಜ್ಜಿಯ ಬೆಳವಣಿಗೆಯ ಪ್ರತಿಹಂತದಲ್ಲೂ ಇವರ ಪಾತ್ರ ಅತಿ ಮುಖ್ಯವಾದುದು. ಇವರ ಪ್ರತಿಭಾ ಗಣಿಯಿಂದ ಜಾನಪದ ಸಂಪತ್ತನ್ನು ಅಗಾಧವಾಗಿ ಹೊರತೆಗೆದು ಜಾನಪದ ಲೋಕಕ್ಕೆ ಬೆಳಕು ಕಾಣಿಸಿದವರು ಕೃಷ್ಣಮೂರ್ತಿ ಹನೂರು.

ಹನೂರು ಅವರು ‘ಕತ್ತಾಲದಾರಿ ದೂರ’ ಮತ್ತು ‘ಜನಪದ ವೀರಗೀತೆಗಳು’ ‘ಸಾವಿರದ ಸಿರಿಬೆಳಗು’ ಸಂಕಲನದಲ್ಲಿ ಸಿರಿಯಜ್ಜಿಯ ಹಾಡುಗಳನ್ನು ಪ್ರಕಟಿಸಿದ್ದಾರೆ.  ಮೀರಾಸಾಬಿಹಳ್ಳಿ ಶಿವಣ್ಣ ಅವರು ‘ಗಣೆಯದನಿ’ ಎಂಬ ತಮ್ಮ ಕೃತಿಯನ್ನು ಸಿರಿಯಜ್ಜಿಗೇ ಸಮರ್ಪಿಸಿದ್ದಾರೆ. ‘ಸಿರಿಯಜ್ಜಿ’ ಎಂಬ ಕಿರು ಹೊತ್ತಿಗೆಯಲ್ಲಿ ಜೀವನಚರಿತ್ರೆಯನ್ನು ದಾಖಲಿಸಿದ್ದಾರೆ. ಸಿರಿಯಜ್ಜಿ ಹಾಡಿದ ಕೆಲವು ಮುಖ್ಯ ಕಥನ ಗೀತೆಗಳು ಇಂಗ್ಲಿಷ್‍ಗೆ ಭಾಷಾಂತರಗೊಂಡಿವೆ. ಅವನ್ನು ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ಪ್ರಕಟಿಸಿದೆ.

‘ಕಳ್ಳೆಸಾಲಿನ ಕಾಡುಕೋಗಿಲೆ’ ಸಿರಿಯಜ್ಜಿಯ ಪ್ರತಿಭಾ ಸಂಪತ್ತನ್ನು ಗುರುತಿಸಿದ ನಾಡಿನ ನೂರಾರು ಸಂಘ ಸಂಸ್ಥೆಗಳು, ‘ಜನಪದಸಿರಿ’, ಜಾನಪದ ಸರಸ್ವತಿ, ಜನಪದ ಕಂಪ್ಯೂಟರ್, ‘ಹತ್ತು ಸಾವಿರ ಪದಗಳ ಒಡತಿ’... ಮುಂತಾಗಿ ಬಿರುದುಗಳನ್ನು ನೀಡಿ ಸನ್ಮಾನಿಸಿವೆ. 1975ರಲ್ಲಿ ಚಿತ್ರದುರ್ಗದಲ್ಲಿ ಜರುಗಿದ ರಾಜ್ಯ ಜನಪದ ಕಲಾಮೇಳದಲ್ಲಿ ಗೌರವಸನ್ಮಾನ, 1982ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, 50ನೇ ಗಣರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಸಿರಿಯಜ್ಜಿಯ ಮನೆಬಾಗಿಲನ್ನು ಅರಿಸಿಕೊಂಡು ಬಂದಿವೆ. 2004 ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಸಿರಿಯಜ್ಜಿಗೆ ‘ನಾಡೋಜ’ ಪ್ರಶಸ್ತಿಯ ಗರಿಯನ್ನು ಮುಡಿಸಿದೆ.

ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ಜಾನಪದಶ್ರೀ’ ಪ್ರಶಸ್ತಿಯನ್ನೂ ಸಹ ನೀಡಲಾಗಿದೆ. ಪ್ರೊ.ಬರಗೂರು ರಾಮಚಂದ್ರಪ್ಪ ಅವರು ತಮ್ಮ ನಿರ್ದೇಶನದ ಜನಪದ ಚಿತ್ರದಲ್ಲಿ ಸಿರಿಯಜ್ಜಿಗೆ ಗೌರವ ಪಾತ್ರವೊಂದನ್ನು ನೀಡಿರುವುದು ಜನಪದ ಲೋಕಕ್ಕೆ ಸಂದ ಗೌರವವಾಗಿದೆ. ದಾವಣಗೆರೆಯ ಪ್ರೊ.ಎಂ.ಮಂಜಣ್ಣ, ಸಿರಿಯಜ್ಜಿಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದೆ. ಅನಕ್ಷರಸ್ಥ ಜನಪದ ಕಲಾವಿದರೊಬ್ಬರು ಪಿಎಚ್.ಡಿ ಅಧ್ಯಯನಕ್ಕೆ ಒಳಗಾಗಿರುವುದು ಜನಪದ ಲೋಕದಲ್ಲಿ ಅಪರೂಪ. 2009ರ ಏ.4 ರಂದು ಇಹಲೋಕ ತ್ಯಜಿಸಿದ ಸಿರಿಯಜ್ಜಿ ಇಂದು ನಮ್ಮ ಕಣ್ಣೆದುರಿಲ್ಲದಿದ್ದರೂ ಅವರು ಬಿಟ್ಟು ಹೋಗಿರುವ ಸಾವಿರ ಸಾವಿರ ಪದಗಳು ಜನಮಾನಸದಲ್ಲಿ ಸಿರಿಬೆಳಕಾಗಿ ಪ್ರಜ್ವಲಿಸುತ್ತಿವೆ. ಹಾಗಾಗಿ ನಮ್ಮ ಸಿರಿಯಜ್ಜಿ ‘ಸಾವಿರದ ಸಿರಿಬೆಳಗು’.

‘ಹಣತೆಯಲ್ಲಿ ಸಣ್ಣ ಬತ್ತಿ ಮಿಳ್ಳೆ ಎಣ್ಣೆ

ನನ್ನ ಗುಡಿಸಲು ಜ್ಯೋತಿಯೇ

ಮೆಲ್ಲಮೆಲ್ಲಾಕ ಉರಿಯೆ ಪರಂಜ್ಯೋತಿ’

ಸಿರಿಯಜ್ಜಿಯ ಈ ಪದ ಸಾರ್ವಕಾಲಿಕ ಸತ್ಯವಾಗಿ ಜನರ ನಾಲಿಗೆ ಮೇಲೆ ನೆಲೆ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT