ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ನ್ಯಾಯಬೆಲೆ ಅಂಗಡಿ ಪರವಾನಗಿ ಅಮಾನತು

ಹಣಕ್ಕೆ ಬೇಡಿಕೆ, ತೂಕದಲ್ಲಿ ವಂಚನೆ ಆರೋಪ
Last Updated 9 ಏಪ್ರಿಲ್ 2020, 13:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಪಡಿತರ ವಿತರಣೆಗೆ ಫಲಾನುಭವಿಗಳಿಂದ ಲಂಚಕ್ಕೆ ಬೇಡಿಕೆಗೆ ಇಟ್ಟ ಹಾಗೂ ತೂಕದಲ್ಲಿ ಮೋಸ ಮಾಡಿದ ಆರೋಪದ ಮೇರೆಗೆ ಮೂರು ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಮಾನತುಗೊಳಿಸಿದೆ.

ಚಿತ್ರದುರ್ಗ ನಗರದ ಗಾಂಧಿನಗರ ಬಡಾವಣೆ, ಹಿರಿಯೂರು ತಾಲ್ಲೂಕಿನ ಬಬ್ಬೂರು ಹಾಗೂ ಚಳ್ಳಕೆರೆ ತಾಲ್ಲೂಕಿನ ಕರಿಕೆರೆ ಗ್ರಾಮದ ನ್ಯಾಯಬೆಲೆ ಅಂಗಡಿಗಳ ಪರವಾನಗಿ ಅಮಾನತುಗೊಂಡಿವೆ. ಹಣಕ್ಕೆ ಒತ್ತಾಯಿಸಿದ, ತೂಕದಲ್ಲಿ ವಂಚಿಸಿದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಕೆ.ಪಿ.ಮಧುಸೂದನ್‌ ಎಚ್ಚರಿಕೆ ನೀಡಿದ್ದಾರೆ.

‘ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ಹಾಗೂ ಲೋಪದೋಷಗಳನ್ನು ಸರಿಪಡಿಸಲು ಆಹಾರ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಯೋಗದಲ್ಲಿ ಜಾಗೃತ ದಳ ರಚಿಸಲಾಗಿದೆ. ಆಕಸ್ಮಿಕವಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡುವ ದಳ, ಪರಿಶೀಲನೆ ನಡೆಸಲಿದೆ. ದೂರು, ಲೋಪದೋಷ ಕಂಡುಬಂದರೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಪಡಿತರ ಹೊರತುಪಡಿಸಿ ಸೋಪು, ಎಣ್ಣೆ ಸೇರಿ ಇತರ ಸಾಮಗ್ರಿಗಳ ಮಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ 4.58 ಲಕ್ಷ ಪಡಿತರ ಕಾರ್ಡ್‌ಗಳಿವೆ. ಬಿಪಿಎಲ್ ಪಡಿತರ ಚೀಟಿದಾರರ ಪ್ರತಿ ಸದಸ್ಯನಿಗೆ 10 ಕೆ.ಜಿ. ಅಕ್ಕಿ ಹಾಗೂ 4 ಕೆ.ಜಿ. ಗೋಧಿ ನೀಡಲಾಗುತ್ತಿದೆ. ಅಂತ್ಯೋದಯ ಪಡಿತರ ಚೀಟಿದಾರರಿಗೆ 70 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಪಡಿತರಕ್ಕೆ ಮೊಬೈಲ್‌ ಒಟಿಪಿ ಕೇಳುವಂತೆ ಸೂಚಿಸಲಾಗಿದೆಯಾದರೂ, ಕಡ್ಡಾಯವಲ್ಲ. ಪಡಿತರ ಚೀಟಿದಾರರಿಗೆ ತೊಂದರೆಯಾಗದಂತೆ ಧಾನ್ಯ ವಿತರಿಸುವಂತೆ ನ್ಯಾಯಬೆಲೆ ಅಂಗಡಿಗಳಿಗೆ ತಾಕೀತು ಮಾಡಲಾಗಿದೆ.

ಲಾಕ್‌ಡೌನ್‌ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಆಹಾರ ಧಾನ್ಯಗಳ ಕೊರತೆ ಉಂಟಾಗಬಾರದು ಎಂಬ ಉದ್ದೇಶದಿಂದ ಎರಡು ತಿಂಗಳ ಪಡಿತರವನ್ನು ಏಕಕಾಲಕ್ಕೆ ವಿತರಣೆ ಮಾಡುವಂತೆ ಸರ್ಕಾರ ಆದೇಶಿಸಿದೆ. ಜಿಲ್ಲೆಗೆ 1,51,460 ಕ್ವಿಂಟಲ್‌ ಅಕ್ಕಿ ಮತ್ತು 14,700 ಕ್ವಿಂಟಲ್‌ ಗೋಧಿ ಹಂಚಿಕೆ ಮಾಡಲಾಗಿದೆ. ಗೋದಾಮಿನಿಂದ ಜಿಲ್ಲೆಯ 580 ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯ ಸರಬರಾಜು ಮಾಡಲಾಗಿದೆ. ಏ.1ರಿಂದ ಈವರೆಗೆ 1.8 ಲಕ್ಷ ಕುಟುಂಬಗಳಿಗೆ ಪಡಿತರ ವಿತರಿಸಲಾಗಿದೆ.

ಪಡಿತರ ವಿತರಣೆಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 08194-222027, 08194- 222035, 08194-222038, 08194-222044, 08194-222050, 08194-222056 ಕ್ಕೆ ಕರೆ ಮಾಡಬಹುದು. ಈ ಸೇವೆ ದಿನದ 24 ಗಂಟೆಗಳೂ ಕಾರ್ಯನಿರ್ವಹಿಸುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಧುಸೂದನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT