ದಾವಣಗೆರೆ: 1.11 ಲಕ್ಷ ವಿದ್ಯಾರ್ಥಿಗಳ ಕೈಗೆಟುಕದ ಆನ್‌ಲೈನ್ ಪಾಠ

ದಾವಣಗೆರೆ: ಕೊರೊನಾ ಕಾರಣದಿಂದಾಗಿ ಶಾಲೆಗಳು ಇನ್ನೂ ಆರಂಭವಾಗಿಲ್ಲ. ಜಿಲ್ಲೆಯ ಮಕ್ಕಳಿಗೆ ಸದ್ಯಕ್ಕೆ ಆನ್‌ಲೈನ್ ಶಿಕ್ಷಣವೇ ಗತಿ ಎಂಬಂತಾಗಿದೆ. ಆದರೆ ಜಿಲ್ಲೆಯಲ್ಲಿ ಆನ್‌ಲೈನ್ ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯಗಳಿಲ್ಲದ ಸಾವಿರಾರು ಮಕ್ಕಳಿಗೆ ಇದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 44,257 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಹಾಗೂ ಚಂದನದಲ್ಲಿ ಪ್ರಸಾರವಾಗುವ ಮನೆ ಪಾಠಗಳನ್ನು ಕೇಳಲು ಟಿ.ವಿ. ಇಲ್ಲ. ಇಂತಹ ಮಕ್ಕಳ ಮನೆಗಳಿಗೆ ಶಿಕ್ಷಕರು ಭೇಟಿ ನೀಡಿ ವರ್ಕ್‌ಶೀಟ್‌ಗಳನ್ನು ವಿತರಿಸಬೇಕಾಗಿದ್ದು, ಶಿಕ್ಷಣ ಇಲಾಖೆಗೆ ಇದು ಹೊರೆಯಾಗಿದೆ.
ಜಿಲ್ಲೆಯಲ್ಲಿ 2,50,740 ವಿದ್ಯಾರ್ಥಿಗಳು ದಾಖಲಾಗಿದ್ದು, ಅವರಲ್ಲಿ 1,39,479 ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌ಗಳಿವೆ. 67,004 ವಿದ್ಯಾರ್ಥಿಗಳ ಬಳಿ ಬರೀ ಕೀ ಪ್ಯಾಡ್ ಮೊಬೈಲ್‌ಗಳಿವೆ. ಮನೆಯಲ್ಲಿ ಟಿ.ವಿ. ಇಲ್ಲದ ಮಕ್ಕಳು ಸೇರಿ ಒಟ್ಟು 1,11,261 ವಿದ್ಯಾರ್ಥಿಗಳು ಆನ್‌ಲೈನ್ ಪಾಠದಿಂದ ವಂಚಿತರಾಗಿದ್ದಾರೆ. ಇವರೆಲ್ಲರಿಗೂ ಆದ್ಯತೆಯ ಮೇಲೆ ಶಿಕ್ಷಣ ನೀಡಬೇಕಾದ ಸವಾಲು ಹಾಗೂ ಹೊಣೆಗಾರಿಕೆ ಶಿಕ್ಷಣ ಇಲಾಖೆಯ ಮೇಲಿದೆ.
‘ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಉದ್ದೇಶದಿಂದ ಸ್ಮಾರ್ಟ್ ಫೋನ್ ಸೌಲಭ್ಯ ಇಲ್ಲದ, ಚಂದನ ವಾಹಿನಿ ವೀಕ್ಷಣೆಗೂ ವ್ಯವಸ್ಥೆ ಇಲ್ಲದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಹಾಗೂ ಆಫ್‌ಲೈನ್ ಶಿಕ್ಷಣ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಟಿ.ವಿ ಇಲ್ಲದ ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಹಳ್ಳಿಗಳಿಗೆ ತೆರಳಿ ಅಕ್ಕಪಕ್ಕದ ಮನೆಗಳಿಗೆ ವೀಕ್ಷಣೆಗೆ ಮನವಿ ಮಾಡಲಾಗುತ್ತಿದೆ’ ಎನ್ನುತ್ತಾರೆ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ.
‘ಜುಲೈ 1ರಿಂದ ಸ್ಮಾರ್ಟ್‌ಫೋನ್ ಇಲ್ಲದ ಮಕ್ಕಳಿಗೆ ‘ಸೇತುಬಂಧ’ ಕಾರ್ಯಕ್ರಮ ಆರಂಭಿಸಿದ್ದು, ಈ ಹಿಂದೆ ಕಲಿತಿರುವ ಸಾಮರ್ಥ್ಯವನ್ನು ಪರೀಕ್ಷೆ ಮಾಡಿ ಮುಂದಿನ ತರಗತಿಗೆ ಕಳುಹಿಸಿಕೊಡಲಾಗುವುದು. 10 ಪ್ರಶ್ನೆಗಳನ್ನು ಕೊಟ್ಟು ಮಕ್ಕಳಿಗೆ ಉತ್ತರ ಬರೆಯಲು ಹೇಳಲಾಗುವುದು. ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆದರೆ ಅಂತಹ ಮಕ್ಕಳನ್ನು ಮುಂದಿನ ತರಗತಿಗೆ ಕಳುಹಿಸಿಕೊಡಲಾಗುವುದು’ ಎಂದು ನಿಟುವಳ್ಳಿ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯರಾದ
ಕೆ.ಟಿ. ಜಯಪ್ಪ ತಿಳಿಸಿದರು.
‘ಒಂದು ವೇಳೆ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯದೇ ಇದ್ದರೆ ಅಂತಹ ಮಕ್ಕಳಿಗೆ 15 ದಿವಸ ಪರಿಹಾರ ಬೋಧನೆ ಮಾಡಲಾಗುವುದು. ಆ ಬಳಿಕ ‘ಸಾಫಲ್ಯ’ ಪರೀಕ್ಷೆ ಮಾಡಿ ಸಾಮರ್ಥ್ಯ ಕಲಿಸಿದ ಬಳಿಕ ಮುಂದಿನ ತರಗತಿಗೆ ಕಳುಹಿಸಲಾಗುವುದು’ ಎಂದು ಜಯಪ್ಪ ಹೇಳುತ್ತಾರೆ.
ಕೋವಿಡ್ ಕಾರಣ ದಿಂದ ಬರೀ ಕೀ ಪ್ಯಾಡ್ ಮೊಬೈಲ್ ಇರುವ ಮಕ್ಕಳನ್ನು ಗುಂಪುಗಳನ್ನಾಗಿ ವಿಭಾಗ ಮಾಡಿ ಅವರಿಗೆ ಅಭ್ಯಾಸ ಹಾಳೆ (ವರ್ಕ್‌ಶೀಟ್) ನೀಡುತ್ತಿದ್ದೇವೆ. ಆ್ಯಂಡ್ರಾಯ್ಡ್ ಮೊಬೈಲ್ ಇರುವ ಮಕ್ಕಳಿಗೆ ನೇರವಾಗಿ ವಾಟ್ಸ್‌ಆ್ಯಪ್ ಗ್ರೂಪ್‌ಗೆ ವರ್ಕ್ ಶೀಟ್‌ಗಳನ್ನು ಕಳುಹಿಸಲಾಗುವುದು. ಮಕ್ಕಳು ಉತ್ತರಿಸಿ ನಮಗೆ ಕಳುಹಿಸುತ್ತಾರೆ. ನಾವು ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿ ವಾಟ್ಸ್ಆ್ಯಪ್‌ಗೆ ಕಳುಹಿಸುತ್ತೇವೆ’ ಎಂದರು.
ಪಠ್ಯಪುಸ್ತಕಗಳು ಬಂದಿಲ್ಲ
ಪಠ್ಯಪುಸ್ತಕಗಳು ಬಂದಿಲ್ಲದೇ ಇರುವುದರಿಂದ ಹಿಂದಿನ ವರ್ಷ ಕಲಿತಿರುವ ವಿದ್ಯಾರ್ಥಿಗಳಿಂದ ಪಠ್ಯ ಪುಸ್ತಕಗಳನ್ನು ಪಡೆದು, ಮುಂದಿನ ತರಗತಿಗೆ ತೆರಳುವ ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. ಪಠ್ಯಪುಸ್ತಕ ಬರುವವರೆಗೆ ಆನ್‌ಲೈನ್ ಪಾಠವೇ ಗತಿಯಾಗಿದೆ.
ಟಿ.ವಿ. ಕೊಡಿಸಲು ಗ್ರಾ.ಪಂಗೆ ಮನವಿ
‘ಜುಲೈ 5ರಿಂದ ಚಂದನ ವಾಹಿನಿಯಲ್ಲಿ ವಿದ್ಯಾಗಮ ಸಂವೇದ ಕಾರ್ಯಕ್ರಮ ಪ್ರಸಾರವಾಗಲಿದ್ದು, ವೇಳಾಪಟ್ಟಿ
ಯನ್ನು ಮಕ್ಕಳಿಗೆ ತಿಳಿಸಲಾಗಿದೆ. ಚಂದನ ವಾಹಿನಿ ವೀಕ್ಷಿಸಲು ಕೆಲವು ವಿದ್ಯಾರ್ಥಿಗಳಿಗೆ ಟಿ.ವಿ ಇಲ್ಲ. ಹಾಗಾಗಿ ಟಿ.ವಿ. ಕೊಡಿಸುವಂತೆ ಪಂಚಾಯಿತಿಗೆ ಮನವಿ ಮಾಡಲಾಗಿದೆ. ಎಲ್ಲಾ ಮಕ್ಕಳಿಗೂ ವರ್ಕ್‌ಶೀಟ್ ನೀಡಬೇಕಾಗಿದ್ದು, ಝೆರಾಕ್ಸ್ ನೀಡಬೇಕಾಗಿದ್ದರಿಂದ ಇದು ದುಬಾರಿಯಾಗಿದೆ. ವಾರಕ್ಕೆ ಆಗುವಷ್ಟು ಕೊಡಲು ಹೇಳಿದ್ದೇವೆ. ಮಕ್ಕಳಿಗೆ ಸೌಲಭ್ಯ ಕೊಡಿಸುವ ಸಂಬಂಧ ದಾನಿಗಳನ್ನು ಹುಡುಕುವ ಆಲೋಚನೆ ಇದೆ’ ಎನ್ನುತ್ತಾರೆ ಡಿಡಿಪಿಐ ಆರ್.ಪರಮೇಶ್ವರಪ್ಪ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.