‘ಅಭಿವೃದ್ಧಿ ಮರೆತು ಅಧಿಕಾರಕ್ಕಾಗಿ ಸೆಣಸಾಟ’

7
ಮಾಜಿ ಸಂಸದ ಕೋದಂಡರಾಮಯ್ಯ ಅಸಮಾಧಾನ

‘ಅಭಿವೃದ್ಧಿ ಮರೆತು ಅಧಿಕಾರಕ್ಕಾಗಿ ಸೆಣಸಾಟ’

Published:
Updated:
Prajavani

ಚಿತ್ರದುರ್ಗ: ರಾಜ್ಯದ ಸಮ್ಮಿಶ್ರ ಸರ್ಕಾರ ಅಭಿವೃದ್ಧಿ, ಜನರಿಗೆ ಮೂಲ ಸೌಲಭ್ಯ ಕಲ್ಪಿಸುವುದನ್ನು ಮರೆತು ಅಧಿಕಾರ ಉಳಿಸಿಕೊಳ್ಳುವಲ್ಲಿಯೇ ಸೆಣಸಾಡುತ್ತಿದೆ ಎಂದು ಮಾಜಿ ಸಂಸದ, ಚಿತ್ರದುರ್ಗ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕೋದಂಡರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಪತನಗೊಳಿಸಲು ಒಂದು ಪಕ್ಷ ಮುಂದಾದರೆ, ಆಡಳಿತ ಪಕ್ಷಗಳ ಮುಖಂಡರು ಅಧಿಕಾರ ಉಳಿಸಿಕೊಳ್ಳುವಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಹೀಗೆ ಆದರೆ, ಜನಸಾಮಾನ್ಯರ ಗತಿ ಏನು’ ಎಂದು ಇಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಪ್ರಶ್ನಿಸಿದರು.

‘ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಬರುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಅನೇಕ ಯೋಜನೆಗಳು ನನೆಗುದಿಗೆ ಬಿದ್ದಿವೆ’ ಎಂದು ದೂರಿದರು.

‘ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆಗೆ ಅನುಮತಿ ದೊರೆತು ಅನೇಕ ವರ್ಷಗಳಾಗಿವೆ. ಅದಕ್ಕೆ ಬೇಕಾದ ಹಣವೂ ಇದೆ. ಆದರೆ, ಭೂ ಸ್ವಾಧೀನ ಕಾರ್ಯ ಮಾತ್ರ ಆಗುತ್ತಿಲ್ಲ. ಈ ಹಿಂದೆ ಇದ್ದಂತ ಮುಖ್ಯಮಂತ್ರಿ ಬಳಿಯೂ ನಿಯೋಗ ಹೋಗಿ ಯೋಜನೆಯಿಂದ ಆಗುವ ಉಪಯೋಗಗಳನ್ನು ಮನವರಿಕೆ ಮಾಡಿಕೊಡಲಾಗಿತ್ತು. ಆದರೂ ಕಾರ್ಯ ರೂಪಕ್ಕೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸಂಬಂಧಪಟ್ಟ ಅನೇಕ ಸಚಿವರು, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಬಳಿಯೂ ಮನವಿ ಮಾಡಿಕೊಂಡಿದ್ದೇವೆ. ಆದರೆ, ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಿಗಾಗಲಿ ಜನಪರ ಯೋಜನೆಗಳ ಬಗ್ಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಇಚ್ಛಾಶಕ್ತಿ ಪ್ರದರ್ಶಿಸದ ಹೊರತು ಯಾವ ಅಭಿವೃದ್ಧಿ ಕಾರ್ಯವೂ ಆಗುವುದಿಲ್ಲ. ಆದರೆ, ಸರ್ಕಾರಕ್ಕೆ ಅದೂ ಇದ್ದಂತೆ ಕಾಣುತ್ತಿಲ್ಲ. ವರ್ಷಗಳು ಉರುಳಿದಂತೆ ಯೋಜನೆಯ ವೆಚ್ಚವೂ ದುಪ್ಪಟ್ಟು ಆಗುತ್ತದೆ. ತ್ವರಿತವಾಗಿ ಯೋಜನೆ ಕಾರ್ಯರೂಪಕ್ಕೆ ಬರಬೇಕು ಎಂಬುದು ನಮ್ಮ ಆಶಯ. ಅದು ಈಡೇರದ ಕಾರಣ ನೋವುಂಟಾಗಿದೆ’ ಎಂದರು.

ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಬಳಿ ಶೀಘ್ರ ನಿಯೋಗ ತೆರಳುವ ಮೂಲಕ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ಸಮಿತಿ ಮುಖಂಡರಾದ ಮುರುಘಾರಾಜೇಂದ್ರ ಒಡೆಯರ್, ರಮಾ ನಾಗರಾಜ್, ರವಿ, ಕುರುಬರಹಳ್ಳಿ ಶಿವಣ್ಣ, ಧನಂಜಯ್ಯ, ಕರಿಯಪ್ಪ, ಕೆ.ಸಿ. ಹೊರಕೇರಪ್ಪ, ಪ್ರಶಾಂತ ನಾಯಕ, ಶಫಿವುಲ್ಲಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !