ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಈರುಳ್ಳಿ ರಫ್ತು ನಿಷೇಧ ಬೇಡ’

Last Updated 30 ಸೆಪ್ಟೆಂಬರ್ 2019, 20:27 IST
ಅಕ್ಷರ ಗಾತ್ರ

ಹಿರಿಯೂರು:ದಶಕಗಳ ನಂತರ ಈರುಳ್ಳಿಗೆ ಸಮಾಧಾನ ಎನಿಸುವಂತಹ ಬೆಲೆ ಬಂದಿದ್ದು, ಕೇಂದ್ರ ಸರ್ಕಾರ ಈರುಳ್ಳಿ ರಫ್ತು ಮಾಡಲು ಮುಂದಾಗಿರುವುದು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯ ಉಪಾಧ್ಯಕ್ಷ ಕೆ.ಪಿ ಭೂತಯ್ಯ ಎಚ್ಚರಿಸಿದರು.

ನಗರದಲ್ಲಿ ಸೋಮವಾರ ತಾಲ್ಲೂಕು ಹಸಿರು ಸೇನೆ ಹಾಗೂ ರೈತ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಈರುಳ್ಳಿ ಬೆಲೆ ಇಳಿಸುವ ಉದ್ದೇಶದಿಂದ ರಫ್ತು ರದ್ದು ಮಾಡುವುದಾಗಿ ಹೇಳುವ ಕೇಂದ್ರ ಸರ್ಕಾರ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ಬೆಲೆ ಹೆಚ್ಚಳಕ್ಕೆ ಯಾವ ಕ್ರಮ ಕೈಗೊಂಡಿದೆ. ಕಾರ್ಪೋರೇಟ್ ವಲಯಕ್ಕೆ ಘೋಷಿಸಿರುವ ರಿಯಾಯಿತಿ, ಪ್ರೋತ್ಸಾಹಗಳನ್ನು ಕೃಷಿಗೆ ಏಕೆ ಘೋಷಿಸುತ್ತಿಲ್ಲ. ರೈತರೆಂದರೆ ಇವರ ಲೆಕ್ಕದಲ್ಲಿ ಎರಡನೇ ದರ್ಜೆ ಪ್ರಜೆಗಳೇ, ದೊಡ್ಡ ದೊಡ್ಡ ಉದ್ದಿಮೆದಾರರು ಮಾತ್ರ ಇವರ ಕಣ್ಣಿನಲ್ಲಿ ದೇಶದ ಉದ್ಧಾರಕರೆ ಎಂದು ಪ್ರಶ್ನಿಸಿದರು.

ಮಹಾರಾಷ್ಟ್ರ, ಬೆಳಗಾವಿ ಕಡೆ ವಿಪರೀತ ಮಳೆಯ ಕಾರಣಕ್ಕೆ ಈರುಳ್ಳಿ ಬೆಳೆಗೆ ಉತ್ತಮ ಬೆಲೆ ಬಂದಿದೆ. ಸಾಲ ಮುಕ್ತರಾಗಲು ರೈತರಿಗೆ ಒಳ್ಳೆಯ ಅವಕಾಶ ಒದಗಿ ಬಂದಿದೆ. ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಬಿಟ್ಟು, ಕೃಷಿ ಅಭಿವೃದ್ಧಿಗೆ ಪೂರಕ ಯೋಜನೆಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ವಿಮಾ ವಂಚನೆ:

ಜಿಲ್ಲೆಯಲ್ಲಿ 27,438 ರೈತರು ₹ 107 ಕೋಟಿ ಬೆಳೆ ವಿಮೆ ಕಂತು ಪಾವತಿಸಿದ್ದು, ಇದುವರೆಗೂ 15,574 ರೈತರ ಖಾತೆಗೆ ₹ 66,514 ಕೋಟಿ ವಿಮಾ ಪರಿಹಾರ ಜಮಾ ಆಗಿದ್ದು, ಬಾಕಿ ಬರಬೇಕಿದೆ. ಬೆಳೆ ವಿಮೆ ಯೋಜನೆ ವಿಮಾ ಕಂಪನಿಗೆ ಲಾಭ ಮಾಡಿಕೊಡುವ ಯೋಜನೆಯಾಗಿದೆ. ತಕ್ಷಣ ಎಲ್ಲ ರೈತರಿಗೆ ವಿಮಾ ಹಣ ಪಾವತಿಸದೇ ಹೋದಲ್ಲಿ ಜಿಲ್ಲಾ ಬಂದ್‌ ನಡೆಸುತ್ತೇವೆ’ ಎಂದು ಅವರು ಎಚ್ಚರಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಬಿ. ಶಿವಕುಮಾರ್, ಎಂ.ಆರ್. ಪುಟ್ಟಸ್ವಾಮಿ ಮಾತನಾಡಿದರು. ಸಂಘದ ಅಧ್ಯಕ್ಷ ಹೊರಕೇರಪ್ಪ ಅಧ್ಯಕ್ಷತೆ ವಹಿಸಿದ್ದರು.

ಪದಾಧಿಕಾರಿಗಳ ಆಯ್ಕೆ:

ತಾಲ್ಲೂಕು ರೈತ ಸಂಘ ಹಾಗೂ ಹಸಿರುಸೇನೆಗೆ ಕೆ.ಟಿ. ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಬಿ.ಒ. ಶಿವಕುಮಾರ್ (ಕಾರ್ಯಾಧ್ಯಕ್ಷ), ತಿಮ್ಮಾರೆಡ್ಡಿ (ಉಪಾಧ್ಯಕ್ಷ), ದಸ್ತಗೀರ್ ಸಾಬ್ (ಪ್ರಧಾನ ಕಾರ್ಯದರ್ಶಿ), ಅರಳೀಕೆರೆ ತಿಪ್ಪೇಸ್ವಾಮಿ (ಸಂಘಟನಾ ಕಾರ್ಯದರ್ಶಿ), ಸಿ. ಸಿದ್ದರಾಮಣ್ಣ (ಖಜಾಂಚಿ).

ಮಹಿಳಾ ಘಟಕಕ್ಕೆ ವಿ. ಕಲ್ಪನಾ (ಅಧ್ಯಕ್ಷೆ), ಶಶಿಕಲಾ (ಕಾರ್ಯಾಧ್ಯಕ್ಷೆ), ತಿಮ್ಮಕ್ಕ (ಪ್ರಧಾನ ಕಾರ್ಯದರ್ಶಿ), ರಾಣಿ ವಿಕ್ಟೋರಿಯಾ ಮತ್ತು ಲಕ್ಷ್ಮೀದೇವಿ (ಉಪಾಧ್ಯಕ್ಷರು), ಸಿ. ಲತಾ ಮತ್ತು ಶ್ರೀರಂಗಮ್ಮ (ಸಂಘಟನಾ ಕಾರ್ಯದರ್ಶಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT