ಮಂಗಳವಾರ, ಡಿಸೆಂಬರ್ 1, 2020
18 °C
ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು

ಪಂಜಾಬ್‌ ಮಾದರಿ ಕಾಯ್ದೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನ ಮಾರಾಟ ಮತ್ತು ಖರೀದಿಯನ್ನು ಅಪರಾಧವೆಂದು ಪರಿಗಣಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಗುರುವಾರ ಪ್ರತಿಭಟನೆ ನಡೆಸಿದರು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾದಾರ ಚನ್ನಯ್ಯ ಗುರುಪೀಠದ ಬಳಿ ಜಮಾಯಿಸಿದ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ತರಕಾರಿಗಳಿಗೆ ಬೆಲೆ ನಿಗದಿಪಡಿಸಿದ ಕೇರಳದ ಮಾದರಿ ನೀತಿ ರಾಜ್ಯದಲ್ಲಿ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು. ಹೆದ್ದಾರಿ ತಡೆಯಿಂದ ಕೆಲ ಕಾಲ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ದರದಲ್ಲಿ ಕೃಷಿ ಉತ್ಪನ್ನ ಖರೀದಿಸುವುದನ್ನು ಅಪರಾಧವೆಂದು ಪಂಜಾಬ್‌ ಸರ್ಕಾರ ಕಾನೂನು ರೂಪಿಸಿದೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲು ಶಿಕ್ಷೆ ನಿಗದಿ ಮಾಡಿದೆ. ಇದೇ ಮಾದರಿಯ ಕಾನೂನು ಜಾರಿಗೆ ರಾಜಸ್ಥಾನ ಸರ್ಕಾರ ಮುಂದಾಗಿದೆ. ಇದರಿಂದ ರೈತರಿಗೆ ಅನುಕೂಲವಾಗಲಿದ್ದು, ಬೆಂಬಲ ಬೆಲೆ ದೊರೆಯುವ ಖಾತ್ರಿ ಸಿಗುತ್ತದೆ ಎಂದು ಹೇಳಿದರು.

ಪಕ್ಕದ ಕೇರಳ ರಾಜ್ಯದಲ್ಲಿಯೂ ರೈತ ಪರವಾದ ಕಾನೂನು ರೂಪುಗೊಂಡಿವೆ. 16 ತರಕಾರಿಗಳಿಗೆ ಸರ್ಕಾರ ಬೆಲೆ ನಿಗದಿ ಮಾಡಿದೆ. ಬೆಲೆ ಏರಿಳಿತದಿಂದ ರೈತರಿಗೆ ನಷ್ಟ ಉಂಟಾಗದಂತೆ ಸರ್ಕಾರ ಭರವಸೆ ನೀಡಿದೆ. ಇಂತಹ ಕಾನೂನುಗಳನ್ನು ಕರ್ನಾಟಕದಲ್ಲಿ ಜಾರಿಗೆ ತರುವ ಅಗತ್ಯವಿದೆ. ಸರ್ಕಾರ ಈ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಆಗ್ರಹಿಸಿದರು.

ರೈತನ ಮಗನೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೃಷಿಕರ ಬಗ್ಗೆ ಕಾಳಜಿ ಇರುವಂತೆ ಕಾಣುತ್ತಿಲ್ಲ. ರೈತರ ಪರ ವರ್ತಿಸಿ ರೈತ ವಿರೋಧಿ ಕಾನೂನು ಜಾರಿಗೆ ತರುತ್ತಿದ್ದಾರೆ. ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ನಿಗದಿ ಮಾಡಲು ಹಾಗೂ ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂದು ಕಿಡಿಕಾರಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತ ವಿರೋಧಿ ಕಾನೂನುಗಳನ್ನು ರೂಪಿಸುವಲ್ಲಿ ತಲ್ಲೀನವಾಗಿವೆ. ಸುಗ್ರೀವಾಜ್ಞೆ ಮೂಲಕ ತಂದಿರುವ ತಿದ್ದುಪಡಿಯನ್ನು ಸರ್ಕಾರಗಳು ಕೂಡಲೇ ಹಿಂಪಡೆಯಬೇಕು. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಚುನಾವಣಾ ರಾಜಕಾರಣದಿಂದ ಹೊರಬಂದು ರೈತರ ಏಳಿಗೆಗೆ ಶ್ರಮಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಿಕ್ಕಕಬ್ಬಗೆರೆ ನಾಗರಾಜ, ಪ್ರಧಾನ ಕಾರ್ಯದರ್ಶಿ ಡಿ.ಎಸ್‌.ಹಳ್ಳಿ ಮಲ್ಲಿಕಾರ್ಜುನ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.