ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಗೆ ನಗದು ರಹಿತ ಟಿಕೆಟ್‌ ವ್ಯವಸ್ಥೆ

ಕೋವಿಡ್‌ ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ
Last Updated 9 ಆಗಸ್ಟ್ 2020, 16:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಐತಿಹಾಸಿಕ ಏಳು ಸುತ್ತಿನ ಕೋಟೆ ಬಾಗಿಲು ತೆರೆದು ಪ್ರವಾಸಿ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ನಗದು ರಹಿತ ಟಿಕೆಟ್‌ ವ್ಯವಸ್ಥೆ ಕಲ್ಪಿಸಿದೆ.

ಕೋಟೆ ಪ್ರವೇಶಕ್ಕೆ ಟಿಕೆಟ್‌ ಕೌಂಟರ್‌ ಎದುರು ಕಾಯುವುದು ತಪ್ಪಿದೆ. ಮೊಬೈಲ್‌ ಮೂಲಕವೇ ಖಾತೆಗೆ ಹಣ ಜಮಾ ಮಾಡುವ ಮೂಲಕ ಪ್ರವೇಶ ಪಡೆಯಬಹುದಾಗಿದೆ. ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೋಟೆಯ ಪ್ರವೇಶ ದ್ವಾರದಲ್ಲಿ ಭಿತ್ತರಿಸಲಾಗಿದೆ.

ಕೋವಿಡ್‌ ಕಾಣಿಸಿಕೊಂಡಿದ್ದರಿಂದ ಐತಿಹಾಸಿಕ ಕೋಟೆ ಸೇರಿ ಹಲವು ಸ್ಮಾರಕಗಳು ಬಾಗಿಲು ಮುಚ್ಚಿದ್ದವು. ಪ್ರವಾಸಿ ಚಟುವಟಿಕೆಗೆ ಅವಕಾಶ ಸಿಕ್ಕ ನಂತರ ಪ್ರವಾಸಿಗರಿಗೆ ಕೋಟೆ ಮುಕ್ತವಾಗಿದೆ. ಆದರೆ, ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಮಾಸ್ಕ್‌ ಧರಿಸದವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.

‘ಹಣ ಪಡೆದು ಟಿಕೆಟ್‌ ವಿತರಿಸುವುದರಿಂದ ಕೊರೊನಾ ಸೋಂಕು ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೂ ಸಿಬ್ಬಂದಿ ಅಪಾಯಕ್ಕೆ ಸಿಲುಕಬಹುದು. ಹೀಗಾಗಿ, ದೇಶದ ಎಲ್ಲ ಸ್ಮಾರಕಗಳಲ್ಲಿ ಏಕರೂಪ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ಯೂಆರ್‌ ಕೋಡ್ ಮೇಲೆ ಸ್ಕ್ಯಾನ್‌ ಮಾಡಿ ಹಣ ಪಾವತಿಸಿದರೆ ಟಿಕೆಟ್‌ ಲಭ್ಯವಾಗಲಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪ್ರವೇಶ ದ್ವಾರದಲ್ಲಿ ಇಟ್ಟಿರುವ ಫಲಕಗಳಲ್ಲಿ ಕ್ಯೂಆರ್‌ ಕೋಡ್‌ ಬಿತ್ತರಿಸಲಾಗಿದೆ. ಟಿಕೆಟ್‌ ಪಡೆಯುವ ಪ್ರವಾಸಿ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ ಕ್ಷಣಾರ್ಧದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಜಾಲತಾಣದ ಸಂಪರ್ಕ ಸಿಗಲಿದೆ. ಪ್ರವಾಸಿಗರ ಸಂಖ್ಯೆಯನ್ನು ನಮೂದಿಸಿ ಹಣ ಪಾವತಿಸಿದರೆ ಮೊಬೈಲ್‌ಗೆ ಟಿಕೆಟ್‌ ಬರಲಿದೆ. ಡೌನ್‌ಲೋಡ್‌ ಮಾಡಿಕೊಂಡ ಟಿಕೆಟ್‌ನ್ನು ಪ್ರವೇಶದ್ವಾರದಲ್ಲಿರುವ ಸಿಬ್ಬಂದಿಗೆ ತೋರಿಸಬೇಕು.

‘ಪ್ರವಾಸಿಗರ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಆಗಿರುವ ಟಿಕೆಟ್‌ ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇದೆ. ಇಲಾಖೆಯ ಸಿಬ್ಬಂದಿಗೆ ಸ್ಕ್ಯಾನರ್‌ ಯಂತ್ರ ನೀಡಲಾಗಿದೆ. ಟಿಕೆಟ್‌ ಸ್ಕ್ಯಾನ್‌ ಮಾಡಿದಾಕ್ಷಣ ನೈಜತೆ ಗೊತ್ತಾಗುತ್ತದೆ. ಆನ್‌ಲೈನ್‌ ವ್ಯವಸ್ಥೆ ಜಾರಿಯಾದ ಬಳಿಕ ಟಿಕೆಟ್‌ ಮೇಲಿನ ನಿಗಾ ವ್ಯವಸ್ಥೆ ಇನ್ನಷ್ಟು ಪಾರದರ್ಶಕವಾಗಿದೆ’ ಎಂಬುದು ಅಧಿಕಾರಿಗಳ ಅಭಿಪ್ರಾಯ.

ಪ್ರವಾಸಿ ಚಟುವಟಿಕೆ ಆರಂಭಗೊಂಡರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಕೋಟೆ ವೀಕ್ಷಣೆಗೆ ಬರುತ್ತಿಲ್ಲ. ನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದ ದಿನಗಳಲ್ಲಿ ಸರಾಸರಿ ನೂರು ಜನರು ಮಾತ್ರ ಕೋಟೆ ಪ್ರವೇಶಿಸಿದ್ದಾರೆ. ಕೋಟೆಯೊಳಗಿನ ದೇಗುಲಗಳ ಪೂಜಾರಿಗಳು ಹಾಗೂ ಭಕ್ತರಿಗೆ ಮಾತ್ರ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಟಿಕೆಟ್‌ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಮೃಗಾಲಯಕ್ಕೂ ಆನ್‌ಲೈನ್‌ ವ್ಯವಸ್ಥೆ

ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೂ ಆನ್‌ಲೈನ್‌ ಟಿಕೆಟ್ ವ್ಯವಸ್ಥೆ ಕಲ್ಪಿಸಲು ಅರಣ್ಯ ಇಲಾಖೆ ಮುಂದಾಗಿದೆ. ಮೃಗಾಲಯ ಪ್ರಾಧಿಕಾರ ಅಭಿವೃದ್ಧಿಪಡಿಸಿದ ಆ್ಯಪ್‌ ಶೀಘ್ರದಲ್ಲೇ ಪ್ರವಾಸಿಗರಿಗೆ ಲಭ್ಯವಾಗಲಿದೆ.

‘ಮೊಬೈಲ್‌ ಅಪ್ಲಿಕೇಷನ್ ಡೌನ್‌ಲೋಡ್‌ ಮಾಡಿಕೊಂಡು ಟಿಕೆಟ್‌ ಕಾಯ್ದಿರಿಸುವ ವ್ಯವಸ್ಥೆ ರೂಪಿಸಲಾಗಿದೆ. ನಗದು ರಹಿತ ವಹಿವಾಟು ಉತ್ತೇಜಿಸಲು ಅನುಕೂಲವಾಗಲಿದೆ. ಬನ್ನೇರುಘಟ್ಟ ಹಾಗೂ ಮೈಸೂರು ಮೃಗಾಲಯದಲ್ಲಿ ಇದರ ಪ್ರಯೋಗ ನಡೆದಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT