ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೋವಿಡ್-19ನಿಂದ ಮಗು ಸೇರಿ ನಾಲ್ವರು ಗುಣಮುಖ

ಕೋಡಿಹಳ್ಳಿಯ ಇಬ್ಬರು, ತಬ್ಲೀಗ್‌ ಜಮಾತ್‌ನ ಇಬ್ಬರು ಸದಸ್ಯರು ಸೋಂಕಿನಿಂದ ಮುಕ್ತ
Last Updated 30 ಮೇ 2020, 15:51 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ಸೋಂಕಿಗೆ ತುತ್ತಾಗಿ ಇಲ್ಲಿಯ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಲ್ಲಿ ಮತ್ತೆ ನಾಲ್ವರು ರೋಗಿಗಳು ಗುಣಮುಖರಾಗಿದ್ದು, ಅದರಲ್ಲಿ ಮೂರು ವರ್ಷದ ಮಗುವೊಂದು ಸೋಂಕು ಮುಕ್ತವಾಗಿರುವುದು ಅವರ ಕುಟುಂಬದವರ ಸಂತಸಕ್ಕೆ ಕಾರಣವಾಗಿದೆ.

ಅವರೆಲ್ಲರೂ ಆತ್ಪತ್ರೆಯಿಂದ ಹೊರಬರುತ್ತಿದ್ದಂತೆ ಜಿಲ್ಲಾಧಿಕಾರಿ ಆರ್. ವಿನೋತ್‌ ಪ್ರಿಯಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸವರಾಜ್ ಪ್ರೀತಿ, ವಿಶ್ವಾಸ, ನಗುಮೊಗದೊಂದಿಗೆ ಬರಮಾಡಿಕೊಂಡು ಹೂಗುಚ್ಛ ನೀಡಿದರು. ಚೆನ್ನಾಗಿ ಇದ್ದೀರಾ ಎಂದು ಮಾತನಾಡಿಸಿದರು. ಗುಣವಾದವರ ಮುಖದಲ್ಲೂ ಮಂದಹಾಸ ಅರಳಿತ್ತು.

ಇದಕ್ಕೂ ಮುನ್ನ ಹರ್ಷದ ಹೊನಲಿನಲ್ಲೇ ಹೊರಬಂದಾಗ ವೈದ್ಯರು, ನರ್ಸ್‌ಗಳು, ಸಿಬ್ಬಂದಿ ಗುಲಾಬಿ, ಸೇವಂತಿ ಹೂಗಳನ್ನು ಎರಚಿ, ಚಪ್ಪಾಳೆ ತಟ್ಟುವುದರೊಂದಿಗೆ ಬೀಳ್ಕೊಟ್ಟರು. ಒ‌ಟ್ಟಾರೆ ಆಸ್ಪತ್ರೆ ಬಳಿ ಸಂತಸದ ವಾತಾವರಣ ನಿರ್ಮಾಣವಾಗಿತ್ತು.

ಗುಜರಾತಿನ ಅಹಮದಾಬಾದಿನಿಂದ ಮೇ 5ರಂದು ಜಿಲ್ಲೆಗೆ ಮರಳಿದ 15 ಜನ ತಬ್ಲೀಗ್‌ ಜಮಾತ್‌ ಸದಸ್ಯರ ಪೈಕಿ ಮೇ 8 ಮತ್ತು 9 ರಂದು ತಲಾ ಮೂವರು ಸೇರಿ ಒಟ್ಟು ಆರು ಮಂದಿಗೆ ‘ಕೋವಿಡ್-19’ ದೃಢಪಟ್ಟಿತ್ತು. ಅದರಲ್ಲಿ ನಾಲ್ವರು ಸೋಂಕಿನಿಂದ ಮುಕ್ತರಾಗಿ ಕಳೆದ ವಾರವಷ್ಟೇ ಬಿಡುಗಡೆಯಾಗಿದ್ದರು. ಉಳಿದ ಇನ್ನಿಬ್ಬರು ಮೂರು ವಾರಗಳ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದಿದ್ದಾರೆ.

ತಮಿಳುನಾಡಿನ ಚೆನ್ನೈನಿಂದ ಜಿಲ್ಲೆಗೆ ಮರಳಿದ್ದ ಕುಟುಂಬವೊಂದರ ಮೂರು ವರ್ಷದ ಮಗು ಸೇರಿ ಇಬ್ಬರಿಗೆ ‘ಕೋವಿಡ್‌-19’ ಇರುವುದು ಮೇ 15ರಂದು ದೃಢಪಟ್ಟಿತ್ತು. ಬಾಲಕಿಯನ್ನು ಪ್ರತ್ಯೇಕವಾಗಿಡುವುದು ಅಸಾಧ್ಯವಾಗಿರುವ ಕಾರಣಕ್ಕೆ ತಂದೆಯೊಂದಿಗೆ ಇರಲು ಆರೋಗ್ಯ ಇಲಾಖೆ ಅವಕಾಶ ಕಲ್ಪಿಸಿತ್ತು. ಎರಡು ವಾರದ ಚಿಕಿತ್ಸೆ ಪಡೆದು ಇಬ್ಬರೂ ಸೋಂಕಿನಿಂದ ಮುಕ್ತರಾಗಿದ್ದು, ಈವರೆಗೂ ಒಟ್ಟು 8 ಜನ ಗುಣಮುಖರಾಗಿದ್ದಾರೆ.

ವೃದ್ಧ 64 (ಪಿ-789), 17 ವರ್ಷದ (ಪಿ-753), ಚಳ್ಳಕೆರೆ ತಾಲ್ಲೂಕಿನ ಕೋಡಿಹಳ್ಳಿಯ 39 ವರ್ಷದ ಪುರುಷ (ಪಿ-994) ಹಾಗೂ ಇವರ ಪುತ್ರಿ (ಪಿ-993) ಗುಣಮುಖರಾಗಿದ್ದಾರೆ. ನಾಲ್ವರು ಚಿತ್ರದುರ್ಗ ಜಿಲ್ಲೆಯವರೇ ಆಗಿದ್ದಾರೆ.

‘ನಮಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವಲ್ಲಿ ವೈದ್ಯರು, ಸಿಬ್ಬಂದಿ ಶ್ರಮ ಹೆಚ್ಚಿದೆ. ನಿಜಕ್ಕೂ ಅಧಿಕಾರಿಗಳು ಚೆನ್ನಾಗಿ ಸ್ಪಂದಿಸಿದ್ದಾರೆ’ ಎಂದು ಪಿ-753 ತಿಳಿಸಿದರು.

ಪ್ರೀತಿ, ವಿಶ್ವಾಸದ ಆರೈಕೆ ಮರೆಯುವಂತಿಲ್ಲ: ‘ಕೋವಿಡ್-19 ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್‌ಗಳು ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ. ಆಗಾಗ ಬಂದು ಔಷಧ ನೀಡಿ ಹೋಗುತ್ತಿದ್ದರು. ಜತೆಗೆ ಎಲ್ಲರೂ ಧೈರ್ಯವನ್ನೂ ತುಂಬುತ್ತಿದ್ದರು. ಅವರೆಲ್ಲರ ಶ್ರಮ, ಪ್ರೀತಿ, ವಿಶ್ವಾಸದ ಆರೈಕೆ ಜತೆಗೆ ದೇವರ ದಯೆಯಿಂದ ಗುಣಮುಖನಾಗಿ ಹೊರಬಂದಿದ್ದೇನೆ’ ಎಂದು ಪಿ-789 ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲಾಡಳಿತ, ಆರೋಗ್ಯ ಇಲಾಖೆ ಊಟಕ್ಕೆ ಕೊರತೆಯಾಗದಂತೆ ನೋಡಿಕೊಂಡಿದೆ. ಕೊರೊನಾ ಸೋಂಕು ದೃಢವಾದಾಗ ಧೃತಿಗೆಡಲಿಲ್ಲ. ಬದಲಿಗೆ ಧೈರ್ಯವಾಗಿ ಎದುರಿಸಬೇಕೆಂಬ ಆತ್ಮವಿಶ್ವಾಸ ಮೂಡಿತು. ಇದರಿಂದ ಮುಕ್ತವಾಗಲು ಇದು ಒಂದು ಕಾರಣ. ಜಿಲ್ಲಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಅಧಿಕಾರಿ ವರ್ಗ ಚೆನ್ನಾಗಿ ನೋಡಿಕೊಂಡಿದೆ. ಇದರಿಂದ ಸಂತಸ ಹೆಚ್ಚಾಗಿದೆ’ ಎಂದು ತಿಳಿಸಿದರು.

ಕೆಲವರು ತುಂಬಾ ಅವಮಾನಿಸಿದ್ದಾರೆ:‘ಊರಿಗೆ ಹೋಗಿ ಮುಖ ತೋರಿಸಲು ಸಾಧ್ಯವಾಗದ ರೀತಿಯಲ್ಲಿ ಕೆಲವರು ನಮ್ಮನ್ನು ಅವಮಾನಿಸಿದ್ದಾರೆ. ಊರು, ಹೆಸರು, ತಂದೆ, ತಾಯಿ, ಪತ್ನಿ, ಮಗು ಸೇರಿ ಎಲ್ಲರ ಹೆಸರು ಬಹಿರಂಗ ಪಡಿಸಿದ್ದಾರೆ. ಇದು ನನಗೆ ಮಾತ್ರ ಬಂದಿದೆಯೇ? ವಿಶ್ವದಲ್ಲಿ ಅನೇಕರಿಗೆ ಬಂದಿಲ್ಲವೇ’ ಎಂದು (ಪಿ-994) ಪ್ರಶ್ನಿಸಿದರು.

‘ಮಾಧ್ಯಮದವರು ದಯಮಾಡಿ ಸೋಂಕಿತರ ಮತ್ತು ಕುಟುಂಬದವರ ಹೆಸರನ್ನಾಗಲಿ, ವಿಳಾಸವನ್ನಾಗಲಿ ಬಹಿರಂಗ ಪಡಿಸಬೇಡಿ. ಇದಕ್ಕೆ ವಿರುದ್ಧವಾಗಿ ನಡೆದರೆ ಜನ ತುಂಬಾ ಕೀಳಾಗಿ ಕಾಣುತ್ತಾರೆ. ಸೋಂಕು ಬಂದಿರುವುದೇ ನನಗೆ ಗೊತ್ತಿರಲಿಲ್ಲ. ನಾನೂ ಮಾಡಿದ ತಪ್ಪಾದರೂ ಏನು’ ಎಂದು ಅಳಲು ತೋಡಿಕೊಂಡರು.

‘ತಂದೆ-ಮಗು ಸೇರಿ ಇಬ್ಬರಿಗೂ ಕೋವಿಡ್-19 ದೃಢಪಟ್ಟಿದೆ ಎಂದು ದೊಡ್ಡದಾಗಿ ವರದಿಯಾಗಿದೆ. ಈಗ ಗುಣಮುಖವಾಗಿ ಸೋಂಕಿನಿಂದ ಮುಕ್ತರಾಗಿರುವ ಕುರಿತು ವರದಿ ಮಾಡಿ. ನಾವು ತುಂಬಾ ನೋವು ಅನುಭವಿಸಿದ್ದೇವೆ. ಬೇರೆಯವರಿಗೂ ಇದು ಪುನರಾವರ್ತನೆ ಆಗಬಾರದು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT