ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ಶ್ರದ್ಧಾಂಜಲಿ ಕಾರ್ಯಕ್ರಮ
Last Updated 25 ಸೆಪ್ಟೆಂಬರ್ 2021, 6:19 IST
ಅಕ್ಷರ ಗಾತ್ರ

ಸಿರಿಗೆರೆ/ಭರಮಸಾಗರ: ಸಿರಿಗೆರೆ ಮಠದ ವಿದ್ಯಾರ್ಥಿ ನಿಲಯಗಳಲ್ಲಿರುವ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಪ್ರಸ್ತುತ ವರ್ಷದಿಂದಲೇ ಉಚಿತ ಊಟ–ವಸತಿಯನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಘೋಷಿಸಿದರು.

ಸಿರಿಗೆರೆ ತರಳಬಾಳು ಮಠದ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶುಕ್ರವಾರ ಸರಳವಾಗಿ ಆಚರಿಸಲಾದ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರ 29ನೇ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘100 ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಮೊಟ್ಟ ಮೊದಲ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದವರು ಲಿಂ. ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ. ಗುರುಶಾಂತರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ಶಿವಕುಮಾರ ಸ್ವಾಮೀಜಿ ಇಬ್ಬರೂ ತರಳಬಾಳು ಸಂಸ್ಥೆಯ ಮನದಾಳದ ಆದರ್ಶ ಗುರುಗಳಾಗಿದ್ದಾರೆ. ಈ ಕಾರಣಕ್ಕಾಗಿ ವೇದಿಕೆಯಲ್ಲಿ ಇಬ್ಬರು ಗುರುಗಳಾಗಿದ್ದಾರೆ. ಇನ್ನು ಮುಂದೆ ಭಕ್ತರು ತಮ್ಮ ಯಾವುದೇ ಆಹ್ವಾನ ಪತ್ರಿಕೆಗಳಲ್ಲಿ ಇಬ್ಬರ ಭಾವಚಿತ್ರಗಳನ್ನು ಹಾಕುವ ಮೂಲಕ ಅವರಿಗೆ ಭಕ್ತಿ ಸಮರ್ಪಿಸಬೇಕು’ ಎಂದು
ಸೂಚಿಸಿದರು.

‘ಲಿಂ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯವರು ಬಸವ ಜಯಂತಿಯಂದು ಜನ್ಮಿಸಿದವರು. ಅವರು ಹೋಲಿಕೆಯಲ್ಲಿ ಬಸವಣ್ಣನವರ ಪಡಿಯಚ್ಚಾಗಿದ್ದರು. ಕಾಶಿಯಲ್ಲಿ ವ್ಯಾಸಂಗ ಮಾಡಿ ಸಂಸ್ಕೃತ ಪಾಂಡಿತ್ಯ ಪಡೆದರೂ ಅವರು ಈ ಪೀಠ ಅಲಂಕರಿಸಿದ ಮೇಲೆ ಬಸವಣ್ಣನವರ ಸಾಹಿತ್ಯದಿಂದ ಪ್ರಭಾವಿತರಾಗಿ ಅವರ ನಡೆ ನುಡಿ ಮೈಗೂಡಿಸಿಕೊಂಡಿದ್ದರು’ ಎಂದು ಹೇಳಿದರು.

‘ಬಹಳ ನಿರೀಕ್ಷಿತ ಭರಮಸಾಗರದ ದೊಡ್ಡಕೆರೆಗೆ ನೀರು ಹರಿಯುವ ಕಾಮಗಾರಿ ಮುಂದಕ್ಕೆ ಹೋಗಿರುವ ಬಗ್ಗೆ ಯಾರೂ ನಿರಾಸೆಗೊಳ್ಳಬಾರದು. ಒಳ್ಳೆಯ ಕೆಲಸಗಳಿಗೆ ಅಡೆತಡೆ, ವಿಘ್ನಗಳು ಇರುತ್ತವೆ. ಈಗ ಬಂದಿರುವ ವಿಘ್ನವು ತಾತ್ಕಾಲಿಕವಾದದ್ದು. ತಾಂತ್ರಿಕ ತೊಂದರೆಗಳಿಂದ ನೀರು ಹರಿಸಲು ಸಾಧ್ಯವಾಗಲಿಲ್ಲ’ ಎಂದು ತಿಳಿಸಿದರು.

‘ಭರಮಸಾಗರ ಏತ ನೀರಾವರಿ ಯೋಜನೆಗೆ ಎಲ್ಲ ಪಕ್ಷಗಳ ಮುಖ್ಯಮಂತ್ರಿಗಳೂ, ಮುಖಂಡರೂ ಶ್ರಮಿಸಿದ್ದಾರೆ. ಇದು ಬಹಳ ಅಪರೂಪದ ಯೋಜನೆಯಾಗಿದೆ. ಇದರಿಂದ ಭರಮಸಾಗರ ಕೆರೆ ಸಮುದ್ರೋಪಾದಿಯಲ್ಲಿ ತುಂಬಿ ಹರಿಯಲಿದೆ. ಈಗಿನ ಬೊಮ್ಮಾಯಿ ಸೇರಿದಂತೆ ಕುಮಾರಸ್ವಾಮಿ, ಸಿದ್ದರಾಮಯ್ಯ, ಯಡಿಯೂರಪ್ಪ ಅವರನ್ನು ಕರೆಸಿ ಉದ್ಘಾಟಿಸುವ ಸಂಕಲ್ಪ ಹೊಂದಲಾಗಿದೆ. ಪಕ್ಷಾತೀತವಾಗಿ ಅವರನ್ನು ವೇದಿಕೆಯಲ್ಲಿ ಕಾಣುವ ಆಸೆ ಇದೆ’ ಎಂದು ಹೇಳಿದರು.

ಶಿಷ್ಯಂದಿರೊಂದಿಗೆ ನೇರವಾಗಿ ಸಂವಾದ ಮಾಡಲು ವೆಬ್ ಅಪ್ಲಿಕೇಶನ್ ರೂಪಿಸಲಾಗಿದೆ. ನೇರವಾಗಿ ಈ ಜಾಲತಾಣದಲ್ಲಿ ಸಂಪರ್ಕಿಸಬಹುದು. ಮಠದ ಸೂಚನೆಗಳು, ಚಟುವಟಿಕೆ ವೀಕ್ಷಿಸಬಹುದು ಎಂದರು.

ನಿವೃತ್ತ ಪ್ರಾಂಶುಪಾಲ ನಾ.ಲೋಕೇಶ್ ಒಡೆಯರ್ ಮಾತನಾಡಿ, ‘ವೈಚಾರಿಕ ನೆಲೆಗಟ್ಟಿನ ಮೇಲೆ ಮಠವನ್ನು ರೂಪಿಸಿ ಕಂದಾಚಾರಗಳನ್ನು ಮೂಢನಂಬಿಕೆಗಳನ್ನು ಮೂಲೆ ಸೇರಿಸಿ ಬೃಹನ್ಮಠದ ಇತಿಹಾಸದಲ್ಲಿ ಅತ್ಯಂತ ಮುಖ್ಯ ಪಾತ್ರವಹಿಸಿದವರು ಲಿಂಗೈಕ್ಯ ಗುರುಶಾಂತ ದೇಶಿಕೇಂದ್ರ ಸ್ವಾಮೀಜಿ. ಅವರು ಸಿರಿಗೆರೆಗೆ ಮೂಲ ಸೌಕರ್ಯಗಳನ್ನು ಒದಗಿಸಿ ಅಕಾಲಿಕ ಮರಣಕ್ಕೆ ಒಳಗಾದವರು. ಅವರ ದಿವ್ಯದೃಷ್ಟಿಯ ಫಲವಾಗಿ ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಮಠಕ್ಕೆ
ಬಂದರು.

‘ಸವಾಲುಗಳನ್ನು ಎದುರಿಸಿ ಮಠ ಹೇಗಿರಬೇಕು ಎನ್ನುವುದನ್ನು ತೋರಿಸಿದವರು. 1946ರಲ್ಲಿಯೇ ವಿವಿಧೋದ್ದೇಶದ ಶಾಲೆ ತೆರೆದವರು, ಸಹಪಂಕ್ತಿ ಭೋಜನ, ಅವಕಾಶ ವಂಚಿತ ಮಕ್ಕಳಿಗೆ ಬೆಳಕಾದವರು. 1962ರಲ್ಲಿ ತರಳಬಾಳು ವಿದ್ಯಾಸಂಸ್ಥೆ, 269 ಶಿಕ್ಷಣಿಕ ಸಂಸ್ಥೆಗಳನ್ನು ಕಟ್ಟಿದವರು’ ಎಂದು ಬಣ್ಣಿಸಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ‘ಹಿರಿಯ ಗುರುಗಳು ಆಧುನಿಕ ಬಸವಣ್ಣ, ನಡೆದಾಡುವ ದೇವರಾಗಿದ್ದವರು. ಕಷ್ಟ ಅನುಭವಿಸಿ ಸಾಧಿಸಿದವರು. ಮಾದಿಗ ಸಮಾಜವನ್ನು ಕೈಹಿಡಿದು ಅನ್ನ ಆಶ್ರಯ ನೀಡಿ ಕಾಪಾಡಿದವರು. ರಾಜಕೀಯದಲ್ಲಿಯೂ ಛಲ, ಸವಾಲನ್ನು ಸ್ವೀಕರಿಸಿದವರು. ಶಿಕ್ಷಣ, ಸಂಘಟನೆ, ಹೋರಾಟ, ಸ್ವಾಭಿಮಾನದ ಕಿಚ್ಚನ್ನು ಹಚ್ಚಿದವರು. ಕೆರೆಗಳಿಗೆ ನೀರು ತುಂಬಿಸುವುದು ಈಗಿನ ಸ್ವಾಮೀಜಿಯವರ ವರದಾನವಾಗಿದೆ’ ಎಂದು ನೆನೆದರು.

‘ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಜೀವನ ಚರಿತ್ರೆ’ ಎಂಬ ಎರಡನೇ ಆವೃತ್ತಿಯ ಪುಸ್ತಕ ಬಿಡುಗಡೆ ಮಾಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ‘ಸಿರಿಗೆರೆ ಕಾರ್ಯಕ್ರಮ ಭಾವೈಕ್ಯ ಮೂಡಿಸುವಲ್ಲಿ ಸಹಕಾರಿಯಾಗಿದೆ. ಸದೃಢ ಸಮಾಜಕ್ಕೆ ಸಾಕ್ಷಿಯಾಗಲಿದೆ’ ಎಂದರು.

ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಿ. ಮಂಜುನಾಥ್, ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಬಿ. ರಂಗನಾಥ್ ಇದ್ದರು.

ರೋಂ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಸ್ವಾಮೀಜಿ ಮಾತು

ಅಕ್ಟೋಬರ್‌ 4ರಂದು ರೋಂನಲ್ಲಿ ಪರಿಸರದ ಬಗ್ಗೆ ಅಂತರರಾಷ್ಟ್ರೀಯ ಸಮ್ಮೇಳನ ಇದೆ. ಅದರಲ್ಲಿ ಜಗತ್ತಿನಾದ್ಯಂತ 37 ಮಂದಿ ಆಯ್ಕೆಯಾಗಿದ್ದು, ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರೂ ಪರಿಸರದ ಬಗ್ಗೆ ಮಾತನಾಡಲಿದ್ದಾರೆ.

ಕೊರಾನಾ ಕಾರಣದಿಂದ ಸಮ್ಮೇಳನದಲ್ಲಿ ಸ್ವಾಮೀಜಿ ನೇರವಾಗಿ ಪಾಲ್ಗೊಳ್ಳುತ್ತಿಲ್ಲ. ಅಂತರ್ಜಾಲದ ಮೂಲಕ ಮಾತನಾಡಲಿದ್ದಾರೆ. ಅ. 4ರೊಳಗೆ ಭರಮಸಾಗರ ಕೆರೆಗೆ ನೀರು ಬಂದರೆ ಈ ದೃಶ್ಯವನ್ನೂ ಸಮ್ಮೇಳನದಲ್ಲಿ ಪ್ರಸ್ತುತ ಪಡಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT