ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠದಲ್ಲಿ ಹಣ ದುರ್ಬಳಕೆ ಶಂಕೆ: ತನಿಖೆಗೆ ಒತ್ತಾಯ

ಮುರುಘಾ ಮಠ ಉಳಿಸಲು ವೀರಶೈವ ಲಿಂಗಾಯತ ಸಮಾಜದ ಸಭೆ
Last Updated 4 ಡಿಸೆಂಬರ್ 2022, 7:36 IST
ಅಕ್ಷರ ಗಾತ್ರ

ಚಿತ್ರದುರ್ಗ: ಶಿವಮೂರ್ತಿ ಶರಣರ ಬಂಧನವಾದ ಬಳಿಕ ಮುರುಘಾ ಮಠದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಆಗಿರುವುದಕ್ಕೆ ಸಂಬಂಧಿಸಿ ಆರೋಪಗಳು ಕೇಳಿಬರುತ್ತಿವೆ. ಸರ್ಕಾರ ಮಧ್ಯಪ್ರವೇಶಿಸಿ ತನಿಖೆ ಆದೇಶಿಸಬೇಕು ಎಂದು ಮಾಜಿ ಸಚಿವ ಎಚ್‌. ಏಕಾಂತಯ್ಯ ಆಗ್ರಹಿಸಿದರು.

ತಾಲ್ಲೂಕಿನ ಸೀಬಾರದಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಸ್ಮಾರಕದಲ್ಲಿ ಶನಿವಾರ ನಡೆದ ವೀರಶೈವ ಲಿಂಗಾಯತ ಸಮಾಜದ ಸಭೆಯಲ್ಲಿ ಅವರು ಮಾತನಾಡಿದರು.

‘ಶಿವಮೂರ್ತಿ ಶರಣರು ಜೈಲು ಸೇರಿದರೂ ಮಠದ ಹಲವು ಹುದ್ದೆಗೆ ನೇಮಕಾತಿ ನಡೆಯುತ್ತಲೇ ಇದೆ. ಚೆಕ್‌ಗಳಿಗೆ ಸಹಿ ಹಾಕುವ ಅಧಿಕಾರವನ್ನು ಮತ್ತೊಬ್ಬರು ಪಡೆದಿದ್ದಾರೆ. ಯಾವ ಉದ್ದೇಶಕ್ಕೆ ಹಣ ವಿನಿಯೋಗ ಆಗುತ್ತಿದೆ ಎಂಬ ಮಾಹಿತಿ ಭಕ್ತರಿಗೆ ತಿಳಿಯುತ್ತಿಲ್ಲ. ಹೆಲಿಕಾಪ್ಟರ್‌ ಬಳಕೆಗೆ ಸಂಬಂಧಿಸಿದ ಅನುಮಾನಗಳು ಭಕ್ತವಲಯದಲ್ಲಿ ಹಾಗೆಯೇ ಉಳಿದಿವೆ. ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮಜಾ ಮಾಡುವುದಕ್ಕೂ ಇತಿ–ಮಿತಿ ಇರಬೇಕು. ಕೋಟಿಗಟ್ಟಲೆ ಸಾಲ ಮಾಡಿ ದುಂದುವೆಚ್ಚ ಮಾಡುವುದು ತಪ್ಪು. ಮಠ ಹಾಗೂ ವಿದ್ಯಾಪೀಠದಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ರಾಜಕೀಯ ಮುಖಂಡರು ಬಹಿರಂಗವಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕು. ಸರ್ಕಾರ ಶೀಘ್ರದಲ್ಲಿಯೇ ಸರಿಯಾದ ನಿರ್ಧಾರ ಪ್ರಕಟಿಸದೇ ಇದ್ದರೆ ಹೋರಾಟದ ಮಾರ್ಗ ತುಳಿಯುವುದು ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.

‘ಪೀಠಾಧ್ಯಕ್ಷರು ಏಕ ವ್ಯಕ್ತಿ ಟ್ರಸ್ಟ್‌ ರಚಿಸಿಕೊಂಡು ಭಕ್ತರನ್ನು ಮೋಸಗೊಳಿಸಿದ್ದಾರೆ. ಅನುಕೂಲಕ್ಕೆ ತಕ್ಕಂತೆ ಬೈಲಾ ತಿದ್ದುಪಡಿ ಮಾಡಿಕೊಳ್ಳಲಾಗಿದೆ. ಶಿಕ್ಷಣ ಸಂಸ್ಥೆ ಹಾಗೂ ಮಠದಲ್ಲಿ ಅವ್ಯವಹಾರ ನಡೆದರೆ ಮಧ್ಯಪ್ರವೇಶ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಆದರೆ, ಸರ್ಕಾರದ ನಡೆ ನಿಗೂಢವಾಗಿದ್ದು, ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ’ ಎಂದು ಅಸಮಾಧಾನ
ಹೊರಹಾಕಿದರು.

‘ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ಅಧಿಕಾರವನ್ನು ಕಳೆದುಕೊಳ್ಳುತ್ತಾನೆ. ಅಧಿಕಾರ ಚಲಾವಣೆ ಮಾಡದಂತೆ ಆರೋಪಿಯನ್ನು ನಿರ್ಬಂಧಿಸುವ ಅವಕಾಶ ಕಾನೂನಿನಲ್ಲಿ ಇದೆ. ಇಂತಹ ಅವಕಾಶಗಳನ್ನು ಕೈಚೆಲ್ಲಿರುವ ಸರ್ಕಾರದ ಬಗ್ಗೆ ಜನಸಾಮಾನ್ಯರಿಗೆ ಅನುಮಾನ ಮೂಡುತ್ತಿದೆ. ಎಫ್‌ಐಆರ್‌ ದಾಖಲಾದ ಸಂದರ್ಭದಲ್ಲಿ ಶಿವಮೂರ್ತಿ ಶರಣರ ಬಂಧನಕ್ಕೆ ಪೊಲೀಸರು ವಿಳಂಬ ಮಾಡಿದ್ದನ್ನು ಭಕ್ತರು ಮರೆತಿಲ್ಲ’ ಎಂದರು.

........

ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು

ಪೀಠ ಮುಖ್ಯವೇ ಹೊರತು ವ್ಯಕ್ತಿ ಅಲ್ಲ. ಪೀಠ ಉಳಿಸಲು ಏಕಾಂತಯ್ಯ ಅವರ ನೇತೃತ್ವದಲ್ಲಿ ಹೋರಾಟ ಮಾಡೋಣ. ಜಾತಿ, ಉಪಜಾತಿ ಬಿಟ್ಟು ಒಂದೆಡೆ ಸೇರಿದ್ದು ಸ್ವಾಗತಾರ್ಹ ಬೆಳವಣಿಗೆ.

–ಜಿ.ಎಸ್. ಮಂಜುನಾಥ್, ಉದ್ಯಮಿ, ಭೀಮಸಮುದ್ರ

ಲಿಂಗಾಯತ ಸಮುದಾಯ ತಲೆತಗ್ಗಿಸುವ ಕಾರ್ಯವನ್ನು ಅನೇಕ ಮಠಾಧೀಶರು ಮಾಡುತ್ತಿದ್ದಾರೆ. ಐದು ವರ್ಷ ಮೇಲ್ಪಟ್ಟು ಯಾವುದೇ ಸ್ವಾಮೀಜಿ ಪೀಠದಲ್ಲಿ ಇರಬಾರದು. ಲೆಕ್ಕ ಪತ್ರ ಸರಿಯಾಗಿ ನೋಡಿಕೊಳ್ಳಬೇಕು. ಮಠಕ್ಕೆ ಸಮರ್ಥ ಸಮಿತಿ ಇರಬೇಕು.

-ಉಜ್ಜಪ್ಪ, ದಾವಣಗೆರೆ

ಎರಡು ತಿಂಗಳು ಕಳೆದರೂ ಮಠಕ್ಕೆ ಆಡಳಿತಾಧಿಕಾರಿ ನೇಮಕಾತಿ ನಡೆದಿಲ್ಲ. ಸರ್ಕಾರಕ್ಕೆ ಗಡುವು ನೀಡಿ ಕಾನೂನು ಹೋರಾಟ ಮಾಡಬೇಕು. ಹಲವು ಹಂತದ ಹೋರಾಟಕ್ಕೆ ಸಮುದಾಯ ಸಜ್ಜಾಗಬೇಕು.

-ಮಹಡಿ ಶಿವಮೂರ್ತಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ

ಕೊಡಗಿನಲ್ಲಿರುವ ಆಸ್ತಿ, ಬೆಂಗಳೂರಿನ ಕಾನಿಷ್ಕ ಹೋಟೆಲ್ ಮಠದ ಕೈತಪ್ಪಿದೆ. ದೇಶ, ವಿದೇಶದಲ್ಲಿರುವ ಆಸ್ತಿಯೂ ಕೈತಪ್ಪುವ ಸಾಧ್ಯತೆ ಇದೆ. ಇದು ಭಕ್ತರು ನೀಡಿದ ಕಾಣಿಕೆ, ದುರ್ಬಳಕೆ ಆಗಲು ಬಿಡೆವು.

–ಕೊಟ್ರೇಶ್, ದಾವಣಗೆರೆ

ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ಇದ್ದರೂ ಮುಂದಾಗದಿರುವುದು ಅನುಮಾನ ಮೂಡಿಸಿದೆ. ಈಗಾಗಲೇ ಸಾಕಷ್ಟು ಕಾಲಾವಕಾಶವನ್ನು ಸರ್ಕಾರಕ್ಕೆ ನೀಡಲಾಗಿದೆ. ವೀರಶೈವ ಪರಂಪರೆ ಉಳಿಸಲು ಎಲ್ಲರೂ ಒಗ್ಗೂಡಿ ಮುನ್ನಡೆಯೋಣ.

–ಜಿ.ಸಿ.ಮಲ್ಲಿಕಾರ್ಜುನಪ್ಪ, ಚಿತ್ರದುರ್ಗ

........

ಗದ್ದಲ, ಪೊಲೀಸರ ಮಧ್ಯಪ್ರವೇಶ

ವ್ಯಕ್ತಿಯೊಬ್ಬರು ವ್ಯಕ್ತಪಡಿಸಿದ ಅಭಿಪ್ರಾಯ ಸಭೆಯಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿತು. ಇತರರು ತೀವ್ರ ಅಸಮಾಧಾನ ಹೊರಹಾಕಿದ್ದರಿಂದ ಗದ್ದಲ ಉಂಟಾಯಿತು. ಪೊಲೀಸರು ಮಧ್ಯಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದರು.

ಚಿತ್ರದುರ್ಗದ ಲಿಂಗರಾಜು, ‘ನೂತನ ಪೀಠಾಧ್ಯಕ್ಷರ ನೇಮಕ ಮಾಡುವ ಅಧಿಕಾರ ಸಮುದಾಯದಲ್ಲಿದೆ. ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಪ್ಪು ಮಾಡಿದ ವ್ಯಕ್ತಿಯನ್ನು ಕ್ಷಮಿಸಿ ಸರಿಪಡಿಸಿಕೊಳ್ಳಲು ಅವಕಾಶ ನೀಡಬೇಕು’ ಎಂದರು. ಇದಕ್ಕೆ ಕೆಲವರು ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಲಿಂಗರಾಜು ಅವರನ್ನು ಸಭೆಯಿಂದ ಹೊರ ಕಳುಹಿಸಿದರು.

.........

ಭೂಮಿ ನೀಡಿರುವುದಕ್ಕೆ ಆಕ್ಷೇಪ

ಹಿಂದುಳಿದ ಹಾಗೂ ದಲಿತ ಸಮುದಾಯದ ಜಾತಿಗಳಿಗೆ ಪ್ರತ್ಯೇಕ ಮಠ ಸ್ಥಾಪಿಸಿ ಐದು ಎಕರೆ ಭೂಮಿ ನೀಡಿದ ಮುರುಘಾ ಮಠದ ಶಿವಮೂರ್ತಿ ಶರಣರ ನಡೆಗೆ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.

‘ಶಿವಮೂರ್ತಿ ಶರಣರು ಬಸವತತ್ವಕ್ಕೆ ಅನುಗುಣವಾಗಿ ನಡೆದುಕೊಂಡಿಲ್ಲ. ಮಠದ ಆಸ್ತಿಯನ್ನು ಒಡೆದು ಎಲ್ಲ ಜಾತಿಯ ಮಠಗಳಿಗೆ ಹಂಚಿದ್ದು ತಪ್ಪು’ ಎಂದು ಬೆಂಗಳೂರಿನ ಸುನೀತಾ ಆರೋಪಿಸಿದರು.

ಇದಕ್ಕೆ ಕೆಲವರು ತಕರಾರು ವ್ಯಕ್ತಪಡಿಸಿ, ‘ಜಾತಿಗೊಂದು ಮಠ ಸ್ಥಾಪಿಸಿದ್ದಕ್ಕೆ ವಿರೋಧವಿಲ್ಲ. ಮಠದ ಆಸ್ತಿ ಹಂಚಿರುವುದಕ್ಕೆ ಆಕ್ಷೇಪವಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT