ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಲ್ಲಿ ಮುಂಗಾರಿನ ಸಂಭ್ರಮ

ವಿಭಿನ್ನ ಕೃಷಿಯತ್ತ ಯುವಜನರ ಒಲವು
Last Updated 11 ಜೂನ್ 2018, 9:13 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಹದವಾಗಿ ಸುರಿಯುತ್ತಿದ್ದು ರೈತರು ಬಿತ್ತನೆಪೂರ್ವ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಸಾಯಿಲ್‌ ಮತ್ತು ಏಯ್ಡ್‌ ಇಂಡಿಯಾ ಹಾಗೂ ಬಳ್ಳಿ ಬಳಗದಿಂದ ಗ್ರಾಮಗಳಲ್ಲಿ ಸಾವಯವ ಕೃಷಿ ಪದ್ದತಿ, ನಾಟಿ ಬೀಜಗಳ ಬಳಕೆ, ಮಣ್ಣಿನ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.

ತಾಲ್ಲೂಕಿನ ಶೆಟ್ಟಿಹಳ್ಳಿ, ಭೂಮಿಶೆಟ್ಟಿಹಳ್ಳಿ, ನಾಗಸಂದ್ರಗಡ್ಡೆ, ಮೂಗಲಮರಿ, ಎನ್‌.ಕೊತ್ತೂರು, ಬಂಡಕೋಟೆ, ಚೌಡದೇನಹಳ್ಳಿ, ಮಹಮದ್‌ಪುರ, ಸೋರಪ್ಪಲ್ಲಿ, ಶ್ರೀನಿವಾಸಪುರ, ದ್ವಾರಪ್ಪಲ್ಲಿ, ತಮ್ಮೇಪಲ್ಲಿ, ಮುನಗನಹಳ್ಳಿ, ನಾಯನಹಳ್ಳಿ ಗ್ರಾಮಗಳಲ್ಲಿ ಸುಮಾರು 300ಕ್ಕೂ ಅಧಿಕ ರೈತರಿಗೆ ಮಣ್ಣಿಗೆ ಪೋಷಕಾಂಶ ಒದಗಿಸುವ ಸುಧಾರಿತ ತಿಪ್ಪೆಗೊಬ್ಬರ, ಪಂಚಗವ್ಯ, ಜೀವಾಮೃತ, ತ್ರಿಮೂರ್ತ ಟಾನಿಕ್‌, ಕಾಂಪೋಸ್ಟ್‌ ತಯಾರಿಸುವುದನ್ನು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಲಾಯಿತು.

ಸಾಯಿಲ್‌ ಸಂಸ್ಥೆಯ ವಾಸು ಮಾತನಾಡಿ ಮುಂಗಾರು ಆರಂಭವಾಗಿದ್ದು ಮಣ್ಣಿಗೆ ತೇವಾಂಶ ಬಂದಿದೆ. ಮಣ್ಣಿಗೆ ದ್ರವ ಸಾವಯವ ಗೊಬ್ಬರವಾದ ಜೀವಾಮೃತ, ಪಂಚಗವ್ಯಗಳನ್ನು ಸಿಂಪರಣೆ ಮಾಡಿದರೆ ಜೀವಾಣುಗಳು ಉತ್ಪತ್ತಿಯಾಗಿ ಮಣ್ಣಿನ ಕಳೆ, ಕಸಕಡ್ಡಿ ಕೊಳೆಯುತ್ತದೆ ಜತೆಗೆ ಮಣ್ಣಿಗೆ ಪೋಷಕಾಶವನ್ನು ಒದಗಿಸುತ್ತದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗಿ ಉತ್ತಮ ಬೆಳೆಯಾಗಿ ಉತ್ಕೃಷ್ಟ ಇಳುವರಿಯಲ್ಲಿ ಪಡೆಯಲು ಸಹಕಾರಿಯಾಗುತ್ತದೆ ಎಂದರು.

ಏಡ್‌ ಇಂಡಿಯಾ ಸಂಸ್ಥೆಯ ನಿರ್ದೇಶಕಿ ವತ್ಸಲಾ ಮಾತನಾಡಿ ಇಂದಿನ ರೈತರ ಆರ್ಥಿಕ ಮತ್ತು ಆರೋಗ್ಯದ ಸ್ಥಿತಿ ದುರ್ಬಲವಾಗಿದೆ. ರಾಸಾಯನಿಕ ಮತ್ತು ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಹಾಳಾಗಿ ಕೃಷಿಕರಿಗೆ ಬೆಳೆ ಸಿಗುತ್ತಿಲ್ಲ. ಇದರಿಂದ ಕೃಷಿಕರು ಕೃಷಿ ಮಾಡುವುದನ್ನು ತ್ಯಜಿಸಿ ಪಟ್ಟಣ, ನಗರಗಳಿಗೆ ವಲಸೆ ಹೋಗುತ್ತಿದ್ದಾರೆ.ಪಾರಂಪರಿಕ ಜೀವನವನ್ನು ಮರು ನಿರ್ಮಾಣ ಮಾಡಲು ಸಾವಯವ ಕೃಷಿ ಪರ್ಯಾಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಡಾ.ಲತಾ ಮಾತನಾಡಿ ಫಲವತ್ತತೆ ಕಳೆದುಕೊಂಡ ಮಣ್ಣಿಗೆ ತುರ್ತಾಗಿ ಪೋಷಕಾಂಶ ದೊರೆಯಬೇಕಾದರೆ ಸಗಣಿ ಮತ್ತು ಗಂಜಲವನ್ನು ಬಳಸಿದ ಗೊಬ್ಬರಗಳಿಂದ ಸಾಧ್ಯ. ಈ ಗೊಬ್ಬರವನ್ನು ಸ್ಥಳೀಯವಾಗಿ ಕಡಿಮೆ ಖರ್ಚಿನಲ್ಲಿ ರೈತರೇ ಮಾಡಿಕೊಳ್ಳಬಹುದು ಎಂದು ದ್ರವಗೊಬ್ಬರಗಳ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿದರು. ಈ ನಿಟ್ಟಿನಲ್ಲಿ ಸಾಯಿಲ್‌ ಸಂಸ್ಥೆ ಮಾರ್ಗದರ್ಶನ ನೀಡುತ್ತಿದೆ ಎಂದರು.

ಸಾಯಿ ಸಂಸ್ಥೆಯ ಶಶಿರಾಜ್‌, ಪ್ರಭಾಕರ್‌, ಚಿಂತನ ಸಂಸ್ಥೆಯ ಉಮೇಶ್‌, ಬಯೋಫಿಯ್‌ ವೆಂಕಟೇಶ್‌, ಶ್ರೀನಿವಾಸಶರ್ಮ ಶಮಪನ್ಮೂಲ ವ್ಯಕ್ತಿಗಳಾಗಿ ರೈತರಿಗೆ ತರಬೇತಿ ನೀಡಿದರು.

ಕೃಷಿಯತ್ತ ಮೌನ ಕ್ರಾಂತಿ

ತಲೆಮಾರಿನ ಕೃಷಿ ಸಂಸ್ಕೃತಿಯನ್ನು ಮರು ಸ್ಥಾಪಿಸುವಲ್ಲಿ ಸಮಾನ ಮನಸ್ಸುಳ್ಳ ಯುವಜನರು ಮುಂಗಾರು ಸಂಭ್ರಮದ ಹೆಸರಿನಲ್ಲಿ ವೈವಿಧ್ಯಮಯ ಪ್ರಾಕೃತಿಕ ಬೇಸಾಯ ಪದ್ಧತಿಗಳ ಕಡೆಗೆ ರೈತರನ್ನು ಸಂಘಟಿಸುತ್ತಿರುವುದು ಮೌನ ಕ್ರಾಂತಿಯಾಗಿದೆ.

ಈ ಕ್ರಾಂತಿಯು ಬಹುರಾಷ್ಟ್ರೀಯ ಕಂಪನಿಗಳ ಮುಖವಾಡ ಕಳಚಿ ಸ್ವಾವಲಂಬಿ ನಾಡನ್ನು ಕಟ್ಟುವ ಆಶಯವಾಗಿದೆ. ನೆಲದ ಕರುಳಿನ ನಾಟಿ ಬೀಜಗಳನ್ನು ಬೆಳೆಸುವ ಮತ್ತು ಕೊಟ್ಟಿಗೆ ಗೊಬ್ಬರಗಳನ್ನು ಬಳಸುವ ಹಾಗೂ ಬಹುಬೆಳೆ ಪದ್ಧತಿಯನ್ನು ಅನುಸರಿಸುವ ಮೂಲಕ ಆಹಾರ, ಬೀಜಗಳ ಸ್ವಾವಲಂಬನೆ ಹಾಗೂ ಸಮಾಜಿಕ ಸಾಮರಸ್ಯ ಸಾಧ್ಯ
- ಶಶಿರಾಜ್‌, ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT