ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಗಾಂಧೀಜಿ, ಶಾಸ್ತ್ರಿ ಜಯಂತಿ; ಅರ್ಥಪೂರ್ಣ ಆಚರಣೆ

ಮಹಾತ್ಮರನ್ನು ಸ್ಮರಿಸಿದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು
Last Updated 2 ಅಕ್ಟೋಬರ್ 2020, 16:08 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಗೆ ಚಾಲನೆ’, ‘ಡ್ರೋನ್ ಮೂಲಕ ಲಘು ಪೋಷಕಾಂಶ ಮತ್ತು ಕೀಟನಾಶಕ ಸಿಂಪಡಣೆ’, ‘ಸಿರಿಧಾನ್ಯ ಪ್ರಾತ್ಯಕ್ಷಿಕೆ’, ‘ಸ್ವಚ್ಛತಾ ಅಭಿಯಾನ’, ‘ಆರೋಗ್ಯ ರಕ್ಷಣೆ ಮತ್ತು ನೈರ್ಮಲ್ಯ ಪದ್ಧತಿಗಳ ಕುರಿತು ಜನ ಜಾಗೃತಿ’...

ಹೀಗೆ ಹಲವು ಕಾರ್ಯಕ್ರಮಗಳ ಮೂಲಕ ಗಾಂಧಿ ಜಯಂತಿ ಹಾಗೂ ಲಾಲ್‌ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಬಾರ್ಡ್‌ ಹಾಗೂ ಕೃಷಿ ಇಲಾಖೆ ನೇತೃತ್ವದಲ್ಲಿ ಶುಕ್ರವಾರ ಅರ್ಥಪೂರ್ಣವಾಗಿ ಆಚರಿಸಿ, ಮಹನೀಯರಿಗೆ ಗೌರವ ಸಲ್ಲಿಸಲಾಯಿತು.

ಜಿಲ್ಲಾ ಪಂಚಾಯಿತಿ:ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ ಕಾರ್ಯಕ್ರಮದ ಜತೆಗೆ ಕಸ ಸಂಗ್ರಹಿಸುವ ವಾಹನಗಳಿಗೆ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ಯೋಗೇಶ್ ಚಾಲನೆ ನೀಡಿದರು.

‘ಜಿಲ್ಲೆಯ 67 ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಘನತ್ಯಾಜ್ಯ ನಿರ್ವಹಣೆ ಘಟಕಗಳಿಗೆ ಜಮೀನು ಗುರುತಿಸಲಾಗಿದೆ. ಉಳಿದ 122 ಕಡೆಗಳಲ್ಲಿ ಜಮೀನು ಮಂಜೂರಾತಿ ಬಾಕಿ ಇದೆ. ಆದಷ್ಟು ಶೀಘ್ರ ಕಂದಾಯ ಅಧಿಕಾರಿಗಳ ಜತೆ ಚರ್ಚಿಸಿ, ಕಸ ವಿಂಗಡಣೆ ಮಾಡಲು ಜಮೀನು ಮಂಜೂರು ಮಾಡಿಸಿ, ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಲಾಗುವುದು’ ಎಂದು ಟಿ.ಯೋಗೇಶ್ ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಬೀನ್, ಯೋಜನಾಧಿಕಾರಿ ಗಾಯತ್ರಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಕೃಷ್ಣನಾಯ್ಕ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಮೂಡಲಗಿರಿಯಪ್ಪ, ಮೆದೇಹಳ್ಳಿ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಸೋಮಶೇಖರ್ ಇದ್ದರು.

ಗಾಂಧಿ ಭವನ ನಿರ್ಮಾಣ: ‘ಸರ್ಕಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ₹3 ಕೋಟಿ ವೆಚ್ಚದ ಗಾಂಧಿ ಭವನ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಆದಷ್ಟೂ ಬೇಗ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಡಳಿತದಿಂದ ಸರಳವಾಗಿ ನಡೆದ ಜಯಂತ್ಯುತ್ಸವದಲ್ಲಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.

ಇದೇ ವೇಳೆ ಸರ್ವಧರ್ಮ ಪ್ರಾರ್ಥನೆ ನೆರವೇರಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸಂಗಪ್ಪ, ಉಪಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ್ ನಾಯ್ಕ, ಉಪವಿಭಾಗಾಧಿಕಾರಿ ಪ್ರಸನ್ನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‍ರೆಡ್ಡಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ ಇದ್ದರು.

ತಾಲ್ಲೂಕಿನ ಗೋನೂರು ಗ್ರಾಮದ ರೈತ ಪಾಪಣ್ಣ ಅವರ ಜಮೀನಿನಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ 2020-21ನೇ ಸಾಲಿನ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಯೋಜನೆಯಡಿ ಪ್ರಾತ್ಯಕ್ಷಿಕೆ ಹಾಗೂ ಮಣ್ಣು ಆರೋಗ್ಯ ಅಭಿಯಾನ ಯೊಜನೆಯಡಿ ರೈತರಿಗೆ ತರಬೇತಿ- ಸಂವಾದ ಕಾರ್ಯಕ್ರಮ ನಡೆಯಿತು.

ಕಾರ್ಮಿಕರ ಕೊರತೆ ಉಂಟಾಗಿರುವ ಪ್ರಸ್ತುತ ದಿನಗಳಲ್ಲಿ ಬೆಳೆಗಳಿಗೆ ಡ್ರೋನ್ ಮೂಲಕ ಕೆಲವೇ ನಿಮಿಷಗಳಲ್ಲಿ ಲಘು ಪೋಷಕಾಂಶ ಹಾಗೂ ಕೀಟನಾಶಕ ಸಿಂಪಡಿಸುವ ಬಗ್ಗೆ ಪ್ರಾತ್ಯಕ್ಷತೆ ನೀಡಲಾಯಿತು.

ತರಕಾರಿ ಬೀಜಗಳ ವಿತರಣೆ: ರೈತರ ಆರೋಗ್ಯ ವೃದ್ಧಿಯ ಉದ್ದೇಶದಿಂದ ಜಲಾನಯನ ಯೋಜನೆಯಡಿ ರೈತರು ತಮ್ಮ ಬದುಗಳಲ್ಲಿ ಹಾಗೂ ಮನೆಯ ಹಿತ್ತಲ ತೋಟಗಳಲ್ಲಿ ತರಕಾರಿ ಬೆಳೆಯಲು ಬೀಜಗಳ ಕಿಟ್ ವಿತರಣೆ ಮಾಡಲಾಯಿತು.

ಇಲಾಖೆಯ ಸಹಾಯಕ ಕೃಷಿ ನಿರ್ದೇಶಕಿ ಭಾರತಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT