ಗುರುವಾರ, 30 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Ganesh Chaturthi | ವಿವಿಧ ರೂಪದಲ್ಲಿ ಏಕದಂತನ ದರ್ಶನ

ಮುಗಿಲು ಮುಟ್ಟಿದ ಗಣೇಶೋತ್ಸವ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು
Published 20 ಸೆಪ್ಟೆಂಬರ್ 2023, 7:05 IST
Last Updated 20 ಸೆಪ್ಟೆಂಬರ್ 2023, 7:05 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಾದ್ಯಂತ ಗೌರಿ ಗಣೇಶ ಹಬ್ಬವನ್ನು ಭಕ್ತರು ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಅಂಗವಾಗಿ ಸೋಮವಾರ ಮುಂಜಾನೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭವಾಗಿದ್ದವು.

ಈ ಬಾರಿ ಗೌರಿ, ಗಣೇಶ ಎರಡು ಹಬ್ಬ ಒಂದೇ ದಿನ ಬಂದಿದ್ದ ಕಾರಣ ಸಂಪ್ರದಾಯದಂತೆ ಭಕ್ತರು ಬೆಳಿಗ್ಗೆ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. 10.30 ರ ಬಳಿಕ ಏಕದಂತನನ್ನು ಭಕ್ತರು ಮನೆ, ದೇಗುಲ, ಮಂಟಪಗಳಲ್ಲಿ ಪ್ರತಿಷ್ಠಾಪಿಸಿ ಪೂಜಾ ಕಾರ್ಯಕ್ಕೆ ಮೆರುಗು ನೀಡಿದರು.

ಹಬ್ಬದ ಪ್ರಯುಕ್ತ ನಗರದಲ್ಲಿ ನಾನಾ ಸಂಘ, ಸಂಸ್ಥೆಯವರು, ಯುವಕ ಬಳಗದವರು, ಯುವಕರು ವಿಘ್ನೇಶ್ವರನ ನಾನಾ ಸ್ವರೂಪದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ. ದರ್ಬಾರ್, ಶಿವ, ಆದಿಶೇಷ, ಶ್ರೀಕೃಷ್ಣ, ನವಿಲು ಹೀಗೆ ನಾನಾ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ ಗೌರಿಪುತ್ರ.

[object Object]
ಆನೆಬಾಗಿಲ ಬಳಿಯ ಪ್ರಸನ್ನ ಗಣಪತಿ

ಸಾವಿರಾರು ಭಕ್ತರು ಮನೆಗಳಲ್ಲಿ ಗಣಪನನ್ನು ಪ್ರತಿಷ್ಠಾಪಿಸಿ ಪೂಜಾ ಕಾರ್ಯಗಳನ್ನು ನಿರಂತರವಾಗಿ ನಡೆಸಿದರು. ಮನೆಗಳಲ್ಲಿ ಸಿದ್ಧಪಡಿಸಿದ್ದ ಸಿಹಿ ಖಾದ್ಯಗಳನ್ನು ಸಮರ್ಪಿಸಿದರು. ಬಹುತೇಕರು ರಾತ್ರಿ ಆಗುತ್ತಿದ್ದಂತೆ ನಗರಸಭೆಯಿಂದ ವಿವಿಧೆಡೆ ನಿರ್ಮಿಸಿದ್ದ ಚಿಕ್ಕ ತೊಟ್ಟಿಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದರು.

ದರ್ಬಾರ್‌ ಭಂಗಿಯಲ್ಲಿ ಆನೆಬಾಗಿಲ ಬಳಿಯ ಪ್ರಸನ್ನ ಗಣಪತಿ ಭಕ್ತರನ್ನು ಸೆಳೆಯುತ್ತಿದೆ. ಬುರುಜನಹಟ್ಟಿಯ ಏಕನಾಥೇಶ್ವರಿ ಪಾದಗುಡಿಯಲ್ಲಿ ಸರ್ಕಲ್‌ ಅಡ್ಡ ಬಳಗದ ದರ್ಬಾರ್ ಗಣೇಶ ಮೂರ್ತಿಗೆ ಹಿಂಭಾಗದಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರ ಹಾಗೂ ಆಂಜನೇಯಸ್ವಾಮಿ ಮೂರ್ತಿ ಇರುವುದು ವಿಶೇಷ.

[object Object]
ಕೋಟೆ ಮುಂಭಾಗದ ಶ್ರೀರಾಮ ರೂಪಿ ಗಣಪ

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಪತ್ರಕರ್ತರ ಸಂಘದ ಸಿಂಹಾರೂಢ ಗಣೇಶ, ಬುರುಜನಹಟ್ಟಿಯ ಸೊಪ್ಪಿನವರ ಬೀದಿಯಲ್ಲಿ ವಿನಾಯಕ ಬಳಗದಿಂದ ರಾಕ್ಷಸನ ತಲೆಯ ಮೇಲೆ ಕಾಲಿಟ್ಟು ಸಂಹಾರ ಮಾಡುತ್ತಿರುವ ಭಂಗಿಯಲ್ಲಿ ನಿಂತಿರುವ ದೊಡ್ಡ ಗಾತ್ರದ ಗಣೇಶಮೂರ್ತಿ ಆಕರ್ಷಿಸುತ್ತಿದೆ. ಹೊಳಲ್ಕೆರೆ ರಸ್ತೆಯಲ್ಲಿನ ಸರ್‌.ಎಂ.ವಿಶ್ವೇಶ್ವರಯ್ಯ ಯುವಕರ ಬಳಗದಿಂದ ಅರಣ್ಯದ ನಡುವೆ ನವಿಲು ಮೇಲೆ ಕುಳಿತು ಆಕರ್ಷಿಸುತ್ತಿದೆ ವಕ್ರತುಂಡ.

ಕೋಟೆ ಯೂತ್ಸ್ ಬಳಗದಿಂದ ಕೋಟೆ ಮುಂಭಾಗ ಪ್ರತಿಷ್ಠಾಪಿಸಿರುವ ಶ್ರೀರಾಮ ಸ್ವರೂಪಿ ಗಣಪತಿಗೆ 11 ದಿನದ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ಜೋಗಿಮಟ್ಟಿ ರಸ್ತೆ, ಜಿಲ್ಲಾ ಕ್ರೀಡಾಂಗಣ ರಸ್ತೆ, ಚಿಕ್ಕಪೇಟೆ, ಕೋಟೆ ರಸ್ತೆ, ಜೆಸಿಆರ್, ಹೊಳಲ್ಕೆರೆ ರಸ್ತೆ, ಗಾರೇಹಟ್ಟಿ, ಮುನ್ಸಿಪಲ್‌ ಕಾಲೊನಿ, ಕಾಮನಬಾವಿ, ಮಾಸ್ತಮ್ಮ ಬಡಾವಣೆ ಸೇರಿ ನಗರದ ವಿವಿಧೆಡೆ ಗಣೇಶನನ್ನು ಸಾರ್ವಜನಿಕವಾಗಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.

[object Object]
ದೊಡ್ಡಪೇಟೆಯ ರಾಜಾ ಗಣಪತಿ

ಹಬ್ಬದ ಅಂಗವಾಗಿ ಕೋಟೆಯ ಬೆಟ್ಟದ ಗಣಪತಿ ದೇಗುಲದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪ್ರಸನ್ನ ಗಣಪತಿ, ಮದಕರಿ ಗಣಪತಿ, ಜೆಸಿಆರ್ ಬಡಾವಣೆ, ಪಿ ಅಂಡ್‌ ಟಿ ಕ್ವಾಟ್ರರ್ಸ್‌ನ ಸಂಕಷ್ಟಹರ ಗಣಪತಿ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರಗಳು ನೆರವೇರಿದವು. ಭಕ್ತರು ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಪ್ರತಿಷ್ಠಾಪನೆ ವೇಳೆ ಅದ್ದೂರಿಯಾಗಿ ಟ್ರ್ಯಾಕ್ಟರ್‌, ತೆರದ ವಾಹನಗಳಲ್ಲಿ ಗಣೇಶನನ್ನು ಕೂರಿಸಿ ಮೆರವಣಿಗೆ ನಡೆಸಿದರು. ಸಂಘ ಸಂಸ್ಥೆಗಳಿಂದ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳನ್ನು ಬಹುತೇಕ ಬುಧವಾರ ವಿಸರ್ಜಿಸಲಾಗುತ್ತದೆ. ಉಳಿದಂತೆ ಐದು, ಒಂಭತ್ತು, ಹನ್ನೊಂದು ದಿನ ಕೂರಿಸಿ ವಿಸರ್ಜಿಸಲಾಗುತ್ತದೆ.

ನಗರದ ಹೊಳಲ್ಕೆರೆ ರಸ್ತೆಯ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ದಿ ವಿನಾಯಕ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಸ್ಥಾನದ ಆವರಣದಲ್ಲಿ ಗೌರಿಯನ್ನು ವಿಶೇಷ ಅಲಂಕಾರದೊಂದಿಗೆ ಪ್ರತಿಷ್ಠಾಪಿಸಲಾಗಿದ್ದು, ಬೆನಕನ ಬಳಗದಿಂದ ಐದು ದಿನಗಳ ಕಾಲ ಪೂಜೆ ಸಲ್ಲಿಸಲಾಗುತ್ತಿದೆ. ಗಣೇಶ ಪೆಂಡಾಲ್‌ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಸಾದ ವಿತರಣೆ ಸಾಗಿವೆ. ಎಲ್ಲೆಡೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ.

[object Object]
ಜೋಗಿಮಟ್ಟಿ ರಸ್ತೆಯಲ್ಲಿ ಶಿವರೂಪಿ ಗಣೇಶ

ಪಾಂಚಜನ್ಯ ಹಿಡಿದ ಹಿಂದೂ ಮಹಾಗಣಪತಿ

ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ದರ್ಶನಕ್ಕೆ ಮೊದಲ ದಿನದಿಂದಲೇ ಭಕ್ತರು ದಂಡು ಹರಿದು ಬರುತ್ತಿದೆ. ನಗರದ ಬಿ.ಡಿ.ರಸ್ತೆಯ ಜೈನಧಾಮದ ಶಿವಶಕ್ತಿ ಮಂಟಪದ ಅರಮನೆಯ ದರ್ಬಾರ್‌ ಸಭಾಂಗಣದ ಮಾದರಿಯ ಪೆಂಡಾಲ್‌ನಲ್ಲಿ ಆದಿಶೇಷನ ಸಿಂಹಾಸನದ ಮೇಲೆ ಒಂದು ಕೈಯಲ್ಲಿ ಪಾಂಚಜನ್ಯ ಇನ್ನೊಂದು ಕೈಯಲ್ಲಿ ಸುದರ್ಶನ ಚಕ್ರ ಹಿಡಿದು ಭಕ್ತರಿಗೆ ಅಭಯ ನೀಡುತ್ತಿದೆ ಹಿಂದೂ ಮಹಾಗಣಪತಿ.

ಈ ವೈಭವವನ್ನು ಭಕ್ತರು ಕಣ್ತುಂಬಿಕೊಂಡರು. ವೈಭವಯುತವಾದ ಮಂಟಪ ಹಾಗೂ ವಿದ್ಯುತ್ ದೀಪಾಲಂಕಾರ ಆಕರ್ಷಿಸುತ್ತಿದೆ. ಮೊದಲ ಪೂಜೆಗೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ ಶಾಸಕ ಕೆ.ಸಿ.ವೀರೇಂದ್ರ ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಸುರೇಶ್‌ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ.ಬದರೀನಾಥ್‌ ಸಾಕ್ಷಿಯಾದರು.

[object Object]
ಜಿಲ್ಲಾ ಕ್ರೀಡಾಂಗಣದ ರಸ್ತೆಯ ಶ್ರೀಕೃಷ್ಣ ಗಣೇಶ
[object Object]
ಮಾಸ್ತಮ್ಮ ಬಡಾವಣೆಯ ದರ್ಬಾರ್‌ ಗಣಪ
[object Object]
ಪಿಎನ್‌ಟಿ ಕ್ವಾಟ್ರಸ್‌ನಲ್ಲಿ ಬೆನಕ ಬಳಗದಿಂದ ಪ್ರತಿಷ್ಠಾಪಿಸಿರುವ ಗೌರಿ ದೇವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT