ಕೋಟೆನಾಡಲ್ಲಿ ಗಣೇಶೋತ್ಸವ; ಬಹುರೂಪಗಳಲ್ಲಿ ಏಕದಂತ

7
ಜಿಲ್ಲೆಯಾದ್ಯಂತ ಸಡಗರದಿಂದ ಗಜಮುಖನ ಪೂಜೆ * ಎಲ್ಲೆಡೆ ಮನೆ ಮಾಡಿದ ಸಂಭ್ರಮ

ಕೋಟೆನಾಡಲ್ಲಿ ಗಣೇಶೋತ್ಸವ; ಬಹುರೂಪಗಳಲ್ಲಿ ಏಕದಂತ

Published:
Updated:
Deccan Herald

ಚಿತ್ರದುರ್ಗ: ಕೋಟೆನಾಡಲ್ಲಿ ಗಣೇಶೋತ್ಸವವನ್ನು ಭಕ್ತಿ ಭಾವದಿಂದ ಆಚರಿಸಲಾಗುತ್ತಿದ್ದು, ವಿವಿಧೆಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. ಅದರಲ್ಲಿ ಹಿಂದೂ ಮಹಾಗಣಪತಿ ಪ್ರಮುಖವಾಗಿದೆ.

ಜೋಗಿಮಟ್ಟಿ ರಸ್ತೆ, ಪ್ರಶಾಂತನಗರ, ಜಿಲ್ಲಾ ಕ್ರೀಡಾಂಗಣ ರಸ್ತೆ, ಬುದ್ಧನಗರ, ದೊಡ್ಡಪೇಟೆ, ಚಿಕ್ಕಪೇಟೆ, ಕೋಟೆ ರಸ್ತೆ, ಫಿಲ್ಟರ್ ಹೌಸ್ ರಸ್ತೆ, ಬುರುಜನಹಟ್ಟಿ, ಜೆಸಿಆರ್, ಹೊಳಲ್ಕೆರೆ ರಸ್ತೆ, ಕೆಳಗೋಟೆ, ಗಾರೇಹಟ್ಟಿ, ಮುನ್ಸಿಪಲ್ ಕಾಲೊನಿ, ಸರಸ್ವತಿ ಪುರ, ಐಯುಡಿಪಿ ಬಡಾವಣೆ ಹೀಗೆ ಅನೇಕ ಬಡಾವಣೆಗಳಲ್ಲಿ ಗಣೇಶನನ್ನೂ ಪ್ರತಿಷ್ಠಾಪಿಸಲಾಗಿದೆ.

ಗಣಪತಿ ಹಬ್ಬದ ಅಂಗವಾಗಿ ಸಹಸ್ರಾರು ಮಂದಿ ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಮೂರ್ತಿಗೆ ಎಡೆ ಇಟ್ಟು, ಶ್ರದ್ಧಾ ಭಕ್ತಿಯಿಂದ ಕುಟುಂಬ ಸಮೇತ ಪೂಜೆ ನೆರವೇರಿಸಿದರು. ರಾತ್ರಿ ಬಹುತೇಕರು ನಗರಸಭೆಯವರು ವಿವಿಧೆಡೆ ಬಾವಿಯಾಕಾರದಲ್ಲಿ ನಿರ್ಮಿಸಿದ್ದ ಚಿಕ್ಕ ತೊಟ್ಟಿಗಳಲ್ಲಿ ವಿಸರ್ಜಿಸಿದರು.

ಬೆಟ್ಟದ ಗಣಪ

ಐತಿಹಾಸಿಕ ಕೋಟೆನಾಡಿನ ಮೇಲುದುರ್ಗದಲ್ಲಿ ಇರುವ ಬೆಟ್ಟದ ಗಣಪತಿಯೂ ಇಷ್ಟಾರ್ಥ ಸಿದ್ಧಿ ವಿನಾಯಕ ಎಂಬುದಾಗಿ ಖ್ಯಾತಿ ಗಳಿಸಿದ್ದಾನೆ. ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ ಸಿದ್ಧಿಯಾದರೆ, ಗಣಪತಿ ಹಬ್ಬದಂದು ಭಕ್ತರು ಸಿಹಿ ಕಡುಬಿನ ಹಾರವನ್ನು ಭಕ್ತಿಯಿಂದ ಸಮರ್ಪಿಸುತ್ತಾರೆ. ಪ್ರತಿ ವರ್ಷದಂತೆ ಈ ಸಂಪ್ರದಾಯ ಈ ಬಾರಿಯೂ ಮುಂದುವರೆಯಿತು.

ಹಲವು ದೇಗುಲಗಳಲ್ಲಿ ವಿಶೇಷ ಪೂಜೆ: ಪ್ರಸನ್ನ ಗಣಪತಿ, ಮದಕರಿ ಗಣಪತಿ, ಜೆಸಿಆರ್ ಬಡಾವಣೆ ಗಣಪತಿ, ಪಿ ಅಂಡ್ ಟಿ ಕ್ವಾಟ್ರಸ್‌ನ ಸಂಕಷ್ಟಹರ ಸಿದ್ಧಿವಿನಾಯಕ ಸ್ವಾಮಿ, ನೀಲಕಂಠೇಶ್ವರ ಸ್ವಾಮಿ ದೇಗುಲದಲ್ಲಿನ ಗಣಪತಿ ಹೀಗೆ ನಗರದಾದ್ಯಂತ ವಿವಿಧ ಗಣೇಶ ದೇಗುಲಗಳಲ್ಲಿ ಗಣೇಶ ಚತುರ್ಥಿಯಂದು ಹಾಗೂ ಶುಕ್ರವಾರವೂ ವಿಶೇಷ ಪೂಜೆ, ಅರ್ಚನೆ, ಅಲಂಕಾರಗಳು ನೆರವೇರಿದವು. ಸಹಸ್ರಾರು ಭಕ್ತರು ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಚಿತ್ರದುರ್ಗದ ಜನಪ್ರಿಯ ಹಿಂದೂ ಮಹಾಗಣಪತಿ ಅತ್ಯಂತ ಆಕರ್ಷಣೀಯವಾಗಿದೆ. ಪ್ರಸನ್ನ ಗಣಪತಿ ಸೇವಾ ಸಮಿತಿಯ ಪ್ರಸನ್ನ ಗಣಪತಿ, ಜೋಗಿಮಟ್ಟಿ ರಸ್ತೆಯಲ್ಲಿ ವಿಷ್ಣು ಅಂಡ್ ನ್ಯೂಸ್ಟಾರ್ ಬಾಯ್ಸ್‌ನ ಸಿಂಹದ ಮೇಲೆ ಕೂತಿರುವ ಗಣೇಶ, ಫ್ರೆಂಡ್ಸ್ ಗಣಪತಿ ಯುವಕರ ಬಳಗದಿಂದ ಪ್ರತಿಷ್ಠಾಪಿಸಿರುವ ಲಿಂಗದ ಮೇಲೆ ಗಣೇಶ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಫ್ರೆಂಡ್ಸ್ ಯುವಕರ ಸಂಘದವರ ಮತ್ಸ್ಯದ ಮೇಲೆ ವಿಘ್ನೇಶ್ವರ, ಜೆಸಿಆರ್ ಬಾಯ್ಸ್‌ನ ನವಿಲಿನ ಮೇಲೆ ವಿನಾಯಕ, ಗೋಪಾಲಪುರ ರಸ್ತೆಯಲ್ಲಿ ಸ್ಪೂರ್ತಿ ಗೆಳೆಯರ ಬಳಗದ ಗಣೇಶ, ಕೆಳಗೋಟೆಯಲ್ಲಿ ಆರ್.ಜಿ.ವೈ. ವಿಷ್ಣು ಬಾಯ್ಸ್ ತಂಡದಿಂದ ಗಣೇಶನನ್ನು ಹೊತ್ತು ಹೋಗುತ್ತಿರುವ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಎಲ್ಲ ಗಣೇಶ ಮೂರ್ತಿಗಳು ಸುತ್ತಮುತ್ತಲಿನ ನೂರಾರು ಭಕ್ತರನ್ನು ತನ್ನತ್ತ ಸೆಳೆಯುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !