ಶುಕ್ರವಾರ, ಫೆಬ್ರವರಿ 26, 2021
29 °C
ಶಾಂತಿ ಸಭೆ

ಗಣೇಶೋತ್ಸವ ಶಾಂತಿಯುತವಾಗಿ ಆಚರಿಸಿ: ಎಸ್‌ಪಿ ಶ್ರೀನಾಥ್ ಎಂ. ಜೋಶಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಗಣೇಶೋತ್ಸವವನ್ನು ಶಾಂತಿಯುತವಾಗಿ ಆಚರಿಸುವ ಮೂಲಕ ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ವಿವಿಧೆಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಉತ್ಸವ ಸಮಿತಿಯವರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ. ಜೋಶಿ ಸಲಹೆ ನೀಡಿದರು.

ಡಿಎಆರ್ ಆವರಣದಲ್ಲಿ ಶುಕ್ರವಾರ ನಡೆದ ಗಣೇಶೋತ್ಸವ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾಪನೆಗೂ ಮುನ್ನ ಕೆಇಬಿ, ಅಗ್ನಿಶಾಮಕ, ನಗರಸಭೆ, ಪೊಲೀಸ್ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಗಣೇಶ ಪೆಂಡಾಲ್ ಕಾಯುವ ಸಂಪೂರ್ಣ ಜವಾಬ್ದಾರಿ ಆಯೋಜಕರದ್ದಾಗಿದೆ. ನಾವು ಇಲಾಖೆಯಿಂದ ನಿಮ್ಮಗಳ ಹಿತದೃಷ್ಟಿಯಿಂದ ಕೆಲವೊಂದು ನಿಬಂಧನೆಗಳನ್ನು ಹಾಕುತ್ತೇವೆ. ಅವುಗಳನ್ನು ಚಾಚೂ ತಪ್ಪದೇ ಪಾಲಿಸಿ. ಇದು ಕೇವಲ ರಕ್ಷಣೆಗಾಗಿಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಉಡುಪಿಯಲ್ಲಿ ಈ ಬಾರಿ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಸರಳವಾಗಿ ಆಚರಿಸಿದ್ದಾರೆ. ಇದಕ್ಕೆ ಕಾರಣ ಕೊಡಗು ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪ. ಇಲ್ಲಿಯೂ ಕೂಡ ಸಾಧ್ಯವಾದಷ್ಟು ಅದೇ ರೀತಿ ಆಚರಿಸಲು ಮುಂದಾಗಿ. ಮೆರವಣಿಗೆ ಅವಧಿಯಲ್ಲಿ ಯಾರು ಕೂಡ ಮದ್ಯ ಸೇವಿಸಿ ಅಸಭ್ಯ ರೀತಿಯಲ್ಲಿ ವರ್ತಿಸುವಂತಿಲ್ಲ. ಹಿಂದೂ ಮಹಾಗಣಪತಿ ಉತ್ಸವದಲ್ಲಿ ವಿವಿಧ ಜಿಲ್ಲೆಗಳಿಂದ ಪಾಲ್ಗೊಳ್ಳುವ ನಿಮ್ಮ ಸ್ನೇಹಿತರಿಗೂ ಮದ್ಯ ಸೇವಿಸದಂತೆ ಕಿವಿಮಾತು ಹೇಳಿ. ದೇವರ ಉತ್ಸವಗಳು ಸಂಸ್ಕೃತಿ, ಸಂಪ್ರದಾಯದ ಪ್ರಕಾರ ನಡೆಯಲಿ ಎಂದರು.

ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಅಧ್ಯಕ್ಷ ಬದರಿನಾಥ್ ಮಾತನಾಡಿ, ಪ್ರತಿ ವರ್ಷದಂತೆ ಈ ಬಾರಿಯೂ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಗಣಪತಿ ಉತ್ಸವವನ್ನು ಹಬ್ಬವಾಗಿ ಆಚರಿಸೋಣ. ಎಲ್ಲಿಯೂ ಅಪಚಾರ ಆಗದಂತೆ ನೋಡಿಕೊಳ್ಳೋಣ. ಪೊಲೀಸ್ ಇಲಾಖೆಗೆ ನಮ್ಮ ಸಮಿತಿಯೂ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ಬಾಬು ಮಾತನಾಡಿ, ಶೋಭಾಯಾತ್ರೆಯಲ್ಲಿ ಡಿಜೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಪಿ, ಯಾವ ಕಾರಣಕ್ಕೂ ಅನುಮತಿ ನೀಡಲು ಸಾಧ್ಯವಿಲ್ಲ. ಇಲಾಖೆ ಎಷ್ಟು ಸೌಂಡ್‌ ಪರಿಮಿತಿ ನೀಡುತ್ತದೋ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಪ್ರಸನ್ನ ಗಣಪತಿ ಸೇವಾ ಸಮಿತಿ ಮುಖಂಡ ರಾಜ್‌ಕುಮಾರ್ ಗುಪ್ತ ಮಾತನಾಡಿ, ನಗರದಾದ್ಯಂತ ಬೀದಿ ದೀಪ ಹಾಗೂ ಉತ್ತಮ ರಸ್ತೆಗಳನ್ನು ದುರಸ್ತಿ ಪಡಿಸುವ ಮೂಲಕ ಸಂಬಂಧಪಟ್ಟವರು ಉತ್ಸವಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಉದ್ಯಮಿ ತಾಜ್‌ಪೀರ್ ಮಾತನಾಡಿ, ಸೆ.27 ರಂದು ಮೊಹರಂ ಹಬ್ಬ ಬಂದಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತೇವೆ. ಪೊಲೀಸ್ ಇಲಾಖೆ ಕೂಡ ಸಹಕಾರ ನೀಡಬೇಕು ಎಂದು ಕೋರಿದರು. ನಗರಸಭೆ ಸದಸ್ಯ ಸರ್ದಾರ್ ಅಹಮ್ಮದ್ ಪಾಷಾ ಮಾತನಾಡಿ, ನಗರಸಭೆಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಉಪವಿಭಾಗಾಧಿಕಾರಿ ವಿಜಯ್‌ಕುಮಾರ್, ತಹಶೀಲ್ದಾರ್ ಮಲ್ಲಿಕಾರ್ಜುನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಲಕ್ಷ್ಮಣ್ ಅರಸಿದ್ಧಿ ಇದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು