ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂರಹಿತ ಬಡವರಿಗೆ ಜಮೀನು ನೀಡಿ: ಸಿದ್ದನಗೌಡ ಪಾಟೀಲ್‌

ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕ ಆಗ್ರಹ
Last Updated 24 ಸೆಪ್ಟೆಂಬರ್ 2022, 4:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಭೂರಹಿತ ಬಡವರಿಗೆ ತಲಾ ಎರಡು ಎಕರೆ ಜಮೀನು ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಬಳಿ ಶೀಘ್ರ ನಿಯೋಗ ತೆರಳಲಿದೆ. ಒಂದು ವೇಳೆ ಮನವಿ ನಿರಾಕರಿಸಿದರೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ್‌ ಎಚ್ಚರಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಅಖಂಡ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘50 ವರ್ಷಗಳಿಂದಲೂ ಬಗರ್‌ಹುಕುಂ, ಕಾಯ್ದಿಟ್ಟ ಅರಣ್ಯ ಹಾಗೂ ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಬಡವರನ್ನು ಸರ್ಕಾರ ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಒಂದು ವೇಳೆ ಈ ಕಾರ್ಯಕ್ಕೆ ಮುಂದಾದರೆ ಸರ್ಕಾರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಅತಿವೃಷ್ಟಿಯಿಂದ ರೈತರು ಬೆಳೆದ ಮೆಕ್ಕೆಜೋಳ, ಶೇಂಗಾ, ರಾಗಿ ಸೇರಿ ಇತರೆ ಬೆಳೆಗಳು ಹಾನಿಯಾಗಿವೆ. ಈರುಳ್ಳಿ ಬೆಳೆದವರು ದಿವಾಳಿಯಾಗಿದ್ದಾರೆ. ಆದ್ದರಿಂದ ಸರ್ಕಾರ ಪ್ರತಿ ಎಕರೆಗೆ ₹ 30 ಸಾವಿರ ತಾತ್ಕಾಲಿಕ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ವಿದ್ಯುತ್‌ ಖಾಸಗೀಕರಣಗೊಳಿಸಿದರೆ ಪಂಪ್‌ಸೆಟ್‌ಗಳಿಗೆ ತೊಂದರೆಯಾಗುತ್ತದೆ. ಯಾವುದೇ ಕಾರಣಕ್ಕೂ ಮೀಟರ್ ಅಳವಡಿಸಲು ಬಿಡುವುದಿಲ್ಲ. ಹತ್ತು ತಾಸು ವಿದ್ಯುತ್‌ ಪೂರೈಕೆಗೆ ಕ್ರಮಗೊಳ್ಳಬೇಕು’ ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿದರು. ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ವೆಂಕಟರಮಣಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿದ್ದಪ್ಪ, ಕುರುಬರಹಳ್ಳಿ ಜಿ.ಎಸ್‌.ಶಿವಣ್ಣ, ಜೆ.ಮೇಘರಾಜ್‌ ಹಳಿಯೂರು, ಎನ್‌.ಜಿ.ಷಣ್ಮುಖಪ್ಪ, ಮರುಳಸಿದ್ದಪ್ಪ, ಜಿ.ಪರಮೇಶ್ವರಪ್ಪ, ಗೌಡ್ರು ಪರಮಶಿವಣ್ಣ, ಎನ್‌.ವೀರಣ್ಣ, ಶಿವಕುಮಾರ್‌ ಇದ್ದರು.

ಸಂಘದಿಂದ ಉಚ್ಚಾಟನೆ

ಅಖಂಡವಾಗಿ ಬೆಳೆದ ರಾಜ್ಯ ರೈತ ಸಂಘವನ್ನು ಕೆಲವರು ವೈಯಕ್ತಿಕ ಹಿತಕ್ಕಾಗಿ ಹೋಳು ಮಾಡಿದ್ದಾರೆ. ನಾನೇ ಅಧ್ಯಕ್ಷ, ಕಾರ್ಯದರ್ಶಿಯೆಂದು ಹೇಳಿಕೊಳ್ಳುತ್ತಿರುವ ಬೀದರ್‌ನ ನಿರ್ಮಲಕಾಂತ್‌ ಪಾಟೀಲ್, ಮಂಡ್ಯದ ಸುಧೀರ್‌ ಕುಮಾರ್‌, ಹೊನ್ನಾಳಿಯ ನಾಗೇಂದ್ರಪ್ಪ ಇವರನ್ನು ಸಂಘದಿಂದ ಉಚ್ಚಾಟಿಸಲಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿದ್ದನಗೌಡ ಪಾಟೀಲ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT