ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದಕದತ್ತ ಶ್ರೀಹರಿ ಚಿತ್ತ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದ ‘ಚಿನ್ನದ ಮೀನು’ ಶ್ರೀಹರಿ ನಟರಾಜನ್‌ ಈಗ ಗೋಲ್ಡ್‌ಕೋಸ್ಟ್‌ನತ್ತ ಚಿತ್ತ ನೆಟ್ಟಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸುವ ಭಾರತದ ಈಜು ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಶ್ರೀಹರಿ ಈಗ ಪದಕದ ಮೇಲೆ ಕಣ್ಣಿಟ್ಟಿದ್ದಾರೆ.

ಬಾಲ್ಯದಲ್ಲಿಯೇ ಈಜು ಕ್ರೀಡೆಯ ಆಕರ್ಷಣೆಗೆ ಒಳಗಾದವರು ಶ್ರೀಹರಿ.  ಅಮ್ಮನೊಂದಿಗೆ ಈಜು ಕೇಂದ್ರಕ್ಕೆ ಹೋಗುತ್ತಿದ್ದ ಅವರೂ ಕಲಿತರು.

ಬೆಳೆಯುತ್ತ ಸ್ಪರ್ಧಾತಕ ಈಜಿನತ್ತ ಸಾಗಿದರು. ಈ ಹಂತದಲ್ಲಿ ಜೈನ್ ಹೆರಿಟೇಜ್ ಶಾಲೆಯ ನಿರ್ದೇಶಕರಾದ ಅರ್ಚನಾ ವಿಶ್ವನಾಥ್‌ ಪ್ರೋತ್ಸಾಹದ ಮಾತುಗಳು ಅವರಲ್ಲಿದ್ದ ಆಸಕ್ತಿಯನ್ನು ಹೆಚ್ಚಿಸಿತು. ರೋಟರಿ ಈಜು ಕೂಟದಲ್ಲಿ ಭಾಗವಹಿಸಿದ ನಂತರ ಅವರಿಗೆ ಸ್ಪರ್ಧಾತ್ಮಕ ಜಗತ್ತಿನ ಪರಿಚಯವಾಯಿತು. ಅಲ್ಲಿ ಗೆದ್ದ ಎರಡು ಚಿನ್ನದ ಪದಕಗಳು ಪ್ರೇರಣೆಯಾದವು.

ಶ್ರೀಹರಿಗೆ 2010ರಲ್ಲಿ ಕರ್ನಾಟಕ ರಾಜ್ಯ ಚಾಂಪಿಯನ್‌ಷಿಪ್‌ನಲ್ಲಿ ಸ್ಪರ್ಧೆ ಒಡ್ಡುವ ಸುವರ್ಣ ಅವಕಾಶ ಸಿಕ್ಕಿತು. ಅಲ್ಲಿಂದ ಅವರು ವೃತ್ತಿಪರ ಕ್ರೀಡೆಗೆ ಪ್ರವೇಶ ಪಡೆದರು. ಮೊದಲು ಈಜು ಸ್ಪರ್ಧೆಯ  ಎಲ್ಲ ವಿಭಾಗಗಳಲ್ಲಿಯೂ ಭಾಗವಹಿಸುತ್ತಿದ್ದ ಅವರು ನಂತರ ತಮ್ಮ ನೆಚ್ಚಿನ ಬ್ಯಾಕ್‌ಸ್ಟ್ರೋಕ್‌ ನಲ್ಲಿ ಮಾತ್ರ ಮುಂದುವರಿಯಲು ನಿರ್ಧರಿಸಿದರು.   ರಾಷ್ಟ್ರೀಯ ಕೂಟ ದಾಖಲೆಗಳನ್ನು ಬರೆದ ಅವರು ಕಾಮನ್‌ವೆಲ್ತ್‌ ಕೂಟಕ್ಕೆ ಅರ್ಹತೆ ಪಡೆದರು. ಈಚೆಗೆ ನಡೆದಿದ್ದ ಖೇಲೊ ಇಂಡಿಯಾ ಕೂಟದಲ್ಲಿಯೂ ಮಿಂಚಿದ್ದರು. ಯೂತ್ ಒಲಿಂಪಿಕ್ಸ್ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲೂ ಅರ್ಹತೆ ಪಡೆದಿದ್ದಾರೆ.

ಶ್ರೀಹರಿಯ ಎಲ್ಲಾ ಸಾಧನೆಗಳ ಹಿಂದೆ ಅವರ ಅಮ್ಮ ಕಲ್ಯಾಣಿ ನಟರಾಜನ್ ಅವರ ತ್ಯಾಗ ಹಾಗೂ ಪರಿಶ್ರಮ ಬಹಳಷ್ಟಿದೆ. ಬೆಳಿಗ್ಗೆ 5 ಗಂಟೆಗೆ ಮಗನೊಂದಿಗೆ ಈಜು ಕೇಂದ್ರಕ್ಕೆ ಹೋಗುತ್ತಾರೆ. ಆತನ ಬೇಕು–ಬೇಡಗಳನ್ನು ನಿರ್ವಹಿಸುತ್ತಾರೆ. ತಮ್ಮನ್ನು ತಾವು ಮಗನ ಸಾಧನೆಗಾಗಿ ಸಮರ್ಪಿಸಿಕೊಂಡಿದ್ದಾರೆ.

‘ಹತ್ತು ತಿಂಗಳ ಮಗುವಿದ್ದಾಗಿನಿಂದಲೂ ಶ್ರೀಹರಿಗೆ ಈಜುಕೊಳದ ನಂಟಿದೆ.  ಹಿರಿಯ ಮಗ ಬಾಲಾಜಿ ನಟರಾಜನ್ ಆಗ ಈಜು ಅಭ್ಯಾಸ ಮಾಡುತ್ತಿದ್ದ. ಬೇರೆ ದಾರಿ ಇಲ್ಲದೇ ಶ್ರೀಹರಿಯನ್ನೂ ಈಜು ಕೇಂದ್ರಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ನಡೆಯಲು ಬರದಿದ್ದರೂ ಈಜು ಕೊಳದಲ್ಲಿ ಆಡಲು ಹಂಬಲಿಸುತ್ತಿದ್ದ. ಬೆಳೆದಂತೆ ನೀರಿನ ಆಕರ್ಷಣೆ ಹೆಚ್ಚಿತು.   ಎಲ್ಲರಂತೆ ಸ್ನೇಹಿತರು, ಕಾಲೇಜು, ಓದು ಇದ್ಯಾವುದನ್ನೂ ಇಷ್ಟ ಪಡಲಿಲ್ಲ. ಈಜುವುದಷ್ಟೇ ಶ್ರೀಹರಿ ಕನಸು. ಪಾರ್ಟಿ, ಮದುವೆ, ಹಬ್ಬ ಏನೇ ಇದ್ದರೂ ಬೆಳಿಗ್ಗೆ ಮತ್ತು ಸಂಜೆ ಈಜು ತರಗತಿಗಳನ್ನು ತಪ್ಪಿಸಿಕೊಳ್ಳುವುದಿಲ್ಲ. ಅವನಿಗಾಗಿ ನಾನು ಎಲ್ಲೂ ಹೋಗುವುದಿಲ್ಲ. ಅನಾರೋಗ್ಯವಾದರೆ ಮಾತ್ರ ಅವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆ’ ಎಂದು ಕಲ್ಯಾಣಿ ಅವರು ಮಗನ ಸಾಧನೆ ಮತ್ತು ದಿನಚರಿಯನ್ನು ವಿವರಿಸುತ್ತಾರೆ.

‘ಶ್ರೀಹರಿ ಜೈನ್ ವಿಶ್ವವಿದ್ಯಾಲಯದಲ್ಲಿ ಪಿ.ಯು.ಸಿ ಮಾಡುತ್ತಿದ್ದಾನೆ. ಆದರೆ ಪರೀಕ್ಷೆ ಸಮಯದಲ್ಲಿ ಮಾತ್ರ ಎಷ್ಟು ಅಗತ್ಯವೋ ಅಷ್ಟು ಓದುತ್ತಾನೆ. ಉಳಿದ ದಿನ ಕೇವಲ ಈಜು ಮಾತ್ರ’ ಎನ್ನುತ್ತಾರೆ.

ಕಾಮನ್‌ವೆಲ್ತ್ ಸಿದ್ಧತೆ
‘ಕಾಮನ್‌ವೆಲ್ತ್ ಕೂಟದಲ್ಲಿ ಸ್ಪರ್ಧಿಸುವುದು ನನ್ನ ಮಟ್ಟಿಗೆ ದೊಡ್ಡ ಅನುಭವ. ಇದಕ್ಕಾಗಿ ವಿಶೇಷ ತಯಾರಿ ನಡೆಸಿಲ್ಲ. ಎಂದಿನಂತೆ ಡಯಟ್, ಈಜು, ಜಿಮ್‌ ತರಗತಿಗಳನ್ನು ಮುಂದುವರಿಸಿದ್ದೇನೆ’ ಎಂದು ಶ್ರೀಹರಿ ಹೇಳುತ್ತಾರೆ.

‘ಈಜುವುದೇ ನನ್ನ ಜಗತ್ತು. ಕಾಲೇಜು, ಫ್ರೆಂಡ್ಸ್‌ ಇದ್ಯಾವುದರ ಮೇಲೂ ಆಕರ್ಷಣೆ ಇಲ್ಲ. ನೀರಿಗೆ ಇಳಿದರೆ ಜಗತ್ತನ್ನೇ ಮರೆಯುತ್ತೇನೆ. ನನ್ನ ಕನಸುಗಳೇ ನನಗೆ ಹೊಸ ದಾರಿ ತೋರಿಸಿವೆ’ ಎನ್ನುತ್ತಾರೆ.

‘ಭಾರತ ತಂಡದ ಕೋಚ್ ಪ್ರದೀಪ್ ಮಾರ್ಚ್ ತಿಂಗಳ ಅಂತ್ಯಕ್ಕೆ ನಮ್ಮ ಈಜು ಕೇಂದ್ರದಲ್ಲಿ ತರಬೇತಿ ನೀಡಲಿದ್ದಾರೆ. ಅವರಿಂದ ಬಹಳಷ್ಟು ಕಲಿಯುವುದು ಇದೆ. ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಅವರು ನಮಗೆ ಮಾರ್ಗದರ್ಶನ ಮಾಡಲಿದ್ದಾರೆ’ ಎಂದು ಶ್ರೀಹರಿ ಹೇಳಿದರು.
**
ಶ್ರೀಹರಿ ದಿನಚರಿ
ಬೆಳಿಗ್ಗೆ 5ರಿಂದ 8ರವರೆಗೆ ಈಜು. 9.30 ರಿಂದ 11 ಗಂಟೆವರಗೆ ಜಿಮ್‌ನಲ್ಲಿ ವ್ಯಾಯಾಮ. ಸಂಜೆ 5ರಿಂದ 8 ಗಂಟೆವರಗೆ ಮತ್ತೆ ಈಜುಕೊಳದಲ್ಲಿ ಅಭ್ಯಾಸ. ಪರೀಕ್ಷೆ ಸಮಯವಾದರೆ ಮಧ್ಯಾಹ್ನ ಸ್ವಲ್ಪ ಓದು. ಡಯಟ್‌ಗಾಗಿ ಬೆಳಿಗ್ಗೆ ತಿಂಡಿಗೆ ಮೊಟ್ಟೆ. ಮಧ್ಯಾಹ್ನ ಸ್ವಲ್ಪ ಅನ್ನ. ರಾತ್ರಿ ಚಪಾತಿ.
**
‘ಶ್ರೀಹರಿ ಪ್ರತಿಭಾವಂತ ಈಜುಪಟು. ಈ ಮಟ್ಟಕ್ಕೆ ಬೆಳೆಯಲು ಅವರಲ್ಲಿರುವ ಶ್ರದ್ಧೆ ಹಾಗೂ ಶಿಸ್ತು ಕಾರಣ. ಬ್ಯಾಕ್‌ಸ್ಟ್ರೋಕ್‌ನಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ. ಈ ವಿಭಾಗದಲ್ಲಿಯೇ ಯೂತ್ ಒಲಿಂಪಿಕ್ಸ್‌, ಏಷ್ಯನ್‌ ಕ್ರೀಡಾಕೂಟಗಳಲ್ಲಿ ಸ್ಪರ್ಧೆ ಒಡ್ಡಲಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಕಠಿಣ ಪೈಪೋಟಿ ಇರುತ್ತದೆ. ವಿಶ್ವ ಮಟ್ಟದಲ್ಲಿ ಈಜುವ ಎಲ್ಲಾ ಲಕ್ಷಣಗಳು ಅವರಲ್ಲಿವೆ’
–ಎ.ಸಿ ಜಯರಾಜನ್‌, ಕೋಚ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT