ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಕೃಷಿ ಉತ್ಪನ್ನ ದಾಸ್ತಾನು ಸವಾಲು

Last Updated 13 ಜೂನ್ 2022, 8:38 IST
ಅಕ್ಷರ ಗಾತ್ರ

ಚಿತ್ರದುರ್ಗ: ಬರಗಾಲಕ್ಕೆ ಹೆಸರಾಗಿರುವ ಜಿಲ್ಲೆಯ ರೈತರು ಬೆಳೆದ ಕೃಷಿ ಉತ್ಪನ್ನಗಳ ದಾಸ್ತಾನು ವ್ಯವಸ್ಥೆ ಸಮರ್ಪಕವಾಗಿಲ್ಲ. ಸರ್ಕಾರಿ ಗೋದಾಮು ರೈತರ ಕೈಗೆಟುಕುತ್ತಿಲ್ಲ. ಬಹುನಿರೀಕ್ಷಿತ ಶಿಥಲೀಕರಣ (ಕೋಲ್ಡ್‌ ಸ್ಟೋರೇಜ್‌) ಘಟಕ ಇನ್ನೂ ನಿರ್ಮಾಣವಾಗಿಲ್ಲ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಯದ್ದರಿಂದ ರೈತರು ಸಂಕಷ್ಟ ದೂರವಾಗುತ್ತಿಲ್ಲ.

ಜಿಲ್ಲೆಯಲ್ಲಿ ಸುಮಾರು ಅಂದಾಜು 7.70 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಇದೆ. ಈ ಪೈಕಿ 5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ನಡೆಯುತ್ತಿದೆ. ಪ್ರತಿ ಮುಂಗಾರು ಹಂಗಾಮಿನಲ್ಲಿ 3.5 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗುತ್ತದೆ. ಇದರಲ್ಲಿ ಶೇಂಗಾದ ಪಾಲು 1.5 ಲಕ್ಷ ಹೆಕ್ಟೇರ್‌. 1 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಮೆಕ್ಕೆಜೋಳ, ರಾಗಿ, ತೊಗರಿ, ಈರುಳ್ಳಿ, ತರಕಾರಿ ಹಾಗೂ ಸಿರಿಧಾನ್ಯ ಬೆಳೆಯಲಾಗುತ್ತದೆ.

ಈ ಬೆಳೆಗಳ ದಾಸ್ತಾನು ವ್ಯವಸ್ಥೆ ಕಲ್ಪಿಸಬೇಕು ಎಂಬುದು ರೈತರ ಬಹುದಿನಗಳ ಬೇಡಿಕೆ. ಈರುಳ್ಳಿಗೆ ಕೋಲ್ಡ್‌ ಸ್ಟೋರೇಜ್‌, ಸಿರಿಧಾನ್ಯದ ಮೌಲ್ಯವರ್ಧನಾ ಘಟಕ ಹಾಗೂ ಮೆಕ್ಕೆಜೋಳ, ಶೇಂಗಾ ದಾಸ್ತಾನಿಗೆ ಗೋದಾಮು ನಿರ್ಮಿಸುವಂತೆ ರೈತರು ಪ್ರತಿ ಬಜೆಟ್‌ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸುತ್ತಾರೆ. ಆದರೆ, ಈವರೆಗೆ ಬೇಡಿಕೆ ಈಡೇರುವ ಸೌಭಾಗ್ಯ ದೊರೆತಿಲ್ಲ. ಕೋಲ್ಡ್‌ ಸ್ಟೋರೇಜ್‌ ಕೊರತೆಯಿಂದ ಮೆಣಸು ಹಾಗೂ ಹುಣಸೆಹಣ್ಣು ದಾಸ್ತಾನು ಸಾಧ್ಯವಾಗದೇ ಧಾರವಾಡ, ಹಾವೇರಿ ಸೇರಿ ಇತರ ಜಿಲ್ಲೆಗಳ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡಲಾಗುತ್ತಿದೆ.

ಬೆಳೆಯು ರೈತರ ಕೈಸೇರಿದಾಗ ಬೆಲೆ ಕುಸಿತವಾಗುತ್ತದೆ. ಮಾರುಕಟ್ಟೆ ಲಾಬಿಯ ಪರಿಣಾಮವಾಗಿ ಈ ವ್ಯವಸ್ಥೆ ಇನ್ನೂ ಸುಧಾರಣೆ ಕಂಡಿಲ್ಲ. ಬೆಳೆ ಸಂಗ್ರಹಿಸಿಡುವ ವ್ಯವಸ್ಥೆ ಇಲ್ಲದಿರುವುದರಿಂದ ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡುವುದು ರೈತರಿಗೆ ಅನಿವಾರ್ಯವಾಗಿದೆ. ನಿರೀಕ್ಷಿತ ಬೆಲೆ ಕೈಗೆಟುಕದೇ ನಿರಾಸೆ ಅನುಭವಿಸದೇ ಸಾಮಾನ್ಯವಾಗಿದೆ.

‘ಕೃಷಿ ಉತ್ಪನ್ನ ದಾಸ್ತಾನು ವ್ಯವಸ್ಥೆ ದೊರೆತರೆ ರೈತರು ಸಮಸ್ಯೆಯಿಂದ ಪಾರಾಗಲು ಸಾಧ್ಯವಿದೆ. ನಿರೀಕ್ಷಿತ ಬೆಲೆ ಸಿಗದೇ ಇದ್ದಾಗ ಗೋದಾಮು ಅಥವಾ ಕೋಲ್ಡ್‌ಸ್ಟೋರೇಜ್‌ನಲ್ಲಿಟ್ಟು ಮಾರಾಟ ಮಾಡಬಹುದಾಗಿದೆ. ಆದರೆ, ಇವು ರೈತರ ಕೈಗೆಟುಕುತ್ತಿಲ್ಲ. ಈರುಳ್ಳಿ, ತರಕಾರಿ ಹಾಗೂ ಹಣ್ಣುಗಳಿಗೆ ಕೋಲ್ಡ್‌ಸ್ಟೋರೇಜ್‌ ನಿರ್ಮಿಸುವಂತೆ ದಶಕಗಳಿಂದ ಇಡುತ್ತಿರುವ ಬೇಡಿಕೆಗೂ ಸರ್ಕಾರ ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ನುಲೇನೂರು ಎಂ.ಶಂಕರಪ್ಪ.

ನನೆಗುದಿಗೆ ಬಿದ್ದ ಪ್ರಸ್ತಾವ: ಚಿತ್ರದುರ್ಗ ಎಪಿಎಂಸಿ ಆವರಣದಲ್ಲಿ ₹ 6 ಕೋಟಿ ವೆಚ್ಚದಲ್ಲಿ ಕೋಲ್ಡ್‌ಸ್ಟೋರೇಜ್‌ ನಿರ್ಮಾಣಕ್ಕೆ ಸಲ್ಲಿಸಿದ ಪ್ರಸ್ತಾವ ನನೆಗುದಿಗೆ ಬಿದ್ದಿದೆ. ಕೋಲ್ಡ್‌ಸ್ಟೋರೇಜ್‌ ನಿರೀಕ್ಷೆಯಲ್ಲಿದ್ದ ರೈತರಿಗೆ ಇದರಿಂದ ನಿರಾಸೆಯಾಗಿದೆ.

ಕೋಲ್ಡ್‌ ಸ್ಟೋರೇಜ್‌ ಹಾಗೂ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹ 13 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಎಪಿಎಂಸಿ 2021ರಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪ್ರವೇಶ ದ್ವಾರದ ಸಮೀಪ ಇವುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. 400 ಮೆಟ್ರಿಕ್‌ ಟನ್‌ ಕೃಷಿ ಉತ್ಪನ್ನಗಳನ್ನು ದಾಸ್ತಾನು ಇಡಬಹುದಾದ ಅತ್ಯಾಧುನಿಕ ತಂತ್ರಜ್ಞಾನದ ಕೋಲ್ಡ್‌ ಸ್ಟೋರೇಜ್‌ ರೂಪುರೇಷೆಯೂ ಸಿದ್ಧವಾಗಿತ್ತು. ಆದರೆ, ಈವರೆಗೆ ಇದಕ್ಕೆ ಅನುಮೋದನೆ ದೊರೆತಿಲ್ಲ.

‘ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿ ರಾಜ್ಯದ ಹಲವು ಎಪಿಎಂಸಿಗಳಲ್ಲಿ ಕೋಲ್ಡ್‌ಸ್ಟೋರೇಜ್‌ಗಳಿವೆ. ಇದರ ನಿರ್ವಹಣೆಯ ವೆಚ್ಚ ಎಪಿಎಂಸಿಗೆ ಹೊರೆಯಾಗುವ ಸಾಧ್ಯತೆ ಇದೆ. ಅಲ್ಲದೇ ಈ ಸ್ಟೋರೇಜ್‌ಗಳು ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿಲ್ಲ. ಹೀಗಾಗಿ, ನೂತನ ಕೋಲ್ಡ್‌ ಸ್ಟೋರೇಜ್‌ಗೆ ಸರ್ಕಾರ ಒಲವು ತೋರುತ್ತಿಲ್ಲ’ ಎಂದು ಎಪಿಎಂಸಿ ಜಂಟಿ ನಿರ್ದೇಶಕ ನಜೀಬ್‌ ಉಲ್ಲಾ ಮಾಹಿತಿ ನೀಡಿದರು.

ಕೈಗೆಟುಕದ ಗೋದಾಮು:

ಕರ್ನಾಟಕ ರಾಜ್ಯ ಆಹಾರ ನಿಗಮ ಹಾಗೂ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ರೈತರು ಕೃಷಿ ಉತ್ಪನ್ನ ದಾಸ್ತಾನು ಇಡಲು ಅವಕಾಶವಿದೆ. ಆದರೆ, ಇವು ರೈತರಿಂದ ಕೊಂಚ ದೂರವೇ ಉಳಿದಿವೆ. ಸಾಮಾನ್ಯ ರೈತರು ದಾಸ್ತಾನು ಇಡಲು ಮುಂದಾದರೆ ನಿಗಮ ಅಸಹಕಾರ ತೋರುತ್ತದೆ ಎಂಬ ಆರೋಪವೂ ಇದೆ.

ಸಣ್ಣ ಹಿಡುವಳಿದಾರರೇ ಹೆಚ್ಚಾಗಿರುವ ಜಿಲ್ಲೆಯಲ್ಲಿ ಕೃಷಿ ಉತ್ಪನ್ನ ದಾಸ್ತಾನು ಮಾಡುವ ಜಾಗೃತಿಯ ಕೊರತೆಯೂ ಇದೆ. ಬೆಳೆ ಕೈಗೆ ಬರುವ ಮೊದಲೇ ಸಾಲದ ಸುಳಿಯಲ್ಲಿ ನರಳುವ ರೈತರು ಸಿಕ್ಕ ದರಕ್ಕೆ ಮಾರಾಟ ಮಾಡಿ ಸಾಲದಿಂದ ಮುಕ್ತಿಹೊಂದಲು ಹವಣಿಸುತ್ತಾರೆ. ಚಳ್ಳಕೆರೆ ಹಾಗೂ ಹಿರಿಯೂರಿನಲ್ಲಿ ಖಾಸಗಿ ಕೋಲ್ಡ್‌ಸ್ಟೋರೇಜ್‌ಗಳಿದ್ದರೂ ರೈತರಿಗೆ ದುಬಾರಿಯಾಗಿವೆ. ವ್ಯಾಪಾರಸ್ಥರು ಮಾತ್ರ ಇವುಗಳನ್ನು ಬಳಸುತ್ತಿದ್ದಾರೆ.

ಖಾಸಗಿ ಹಿಡಿತದಲ್ಲಿ ಕೋಲ್ಡ್ ಸ್ಟೋರೇಜ್‌

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಶೇಂಗಾ, ಸೂರ್ಯಕಾಂತಿ, ಹುಣಸೆಹಣ್ಣು, ಒಣ ಮೆಣಸಿನಕಾಯಿ ಮುಂತಾದ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಸರ್ಕಾರಿ ಗೋದಾಮಿನ ಕೊರತೆಯ ಕಾರಣ ತಾಲ್ಲೂಕಿನ ರೈತರು ಕಳವಳಗೊಂಡಿದ್ದಾರೆ.

ಹೀಗಾಗಿ ಆಯಾ ಕಾಲದಲ್ಲಿ ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಯಲ್ಲಿ ದೊರೆಯುವ ಅಲ್ಪ ಬೆಲೆಗೇ ಮಾರಾಟ ಮಾಡುವ ಅನಿವಾರ್ಯತೆಗೆ ಒಳಗಾಗಿದ್ದಾರೆ. ಇನ್ನು ಕೆಲವರು ಬಿತ್ತನೆ ಬೀಜ, ಗೊಬ್ಬರ ಹಾಗೂ ಜೀವನ ನಿರ್ವಹಣೆಗೆ ವರ್ತಕರಿಂದ ಮುಂಗಡ ಪಡೆದ ರೈತರು ಉತ್ಪನ್ನಗಳನ್ನು ನೇರವಾಗಿ ದಲ್ಲಾಳಿಗಳಿಗೇ ಮಾರಾಟ ಮಾಡುತ್ತಾರೆ.

ತಾಲ್ಲೂಕಿನ ಹೊಟ್ಟೆಪ್ಪನಹಳ್ಳಿ ಬಳಿ ಆಂಧ್ರಪ್ರದೇಶದ ವರ್ತಕರೊಬ್ಬರು ಕೋಲ್ಡ್ ಸ್ಟೋರೇಜ್ ನಿರ್ಮಿಸಿದ್ದಾರೆ. ಬಳ್ಳಾರಿ ರಸ್ತೆ ಮಾರ್ಗದ ಸುಶೀಲಾ ಆಯಿಲ್ ಮಿಲ್ ಬಳಿಯ ತಮಿಳುನಾಡಿನ ಶಾರದ ಗಣಪತಿ ಕೋಲ್ಡ್ ಸ್ಟೋರೇಜ್‌ನಲ್ಲಿ ಕೃಷಿ ಉತ್ಪನ್ನ, ಹಣ್ಣು, ತರಕಾರಿ ಸಂಗ್ರಹಿಸಿಡುವ ವ್ಯವಸ್ಥೆ ಇದೆ.

ಎಪಿಎಂಸಿ ವತಿಯಿಂದ ಮಾರುಕಟ್ಟೆ ಆವರಣದಲ್ಲಿ ₹ 3 ಕೋಟಿ ವೆಚ್ಚದಲ್ಲಿ 5 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಿ ಐದು ವರ್ಷಗಳಾಗಿವೆ. ತಿಂಗಳಿಗೆ ₹ 3.25 ಲಕ್ಷ ಬಾಡಿಗೆ ನಿಗದಿ ಮಾಡಲಾಗಿದೆ. ದರ ಹೆಚ್ಚಳದಿಂದ ಬಾಡಿಗೆದಾರರು ಬರುತ್ತಿಲ್ಲ.

‘ಖಾಸಗಿ ಕೋಲ್ಡ್‌ ಸ್ಟೋರೇಜ್‌ ಬಾಡಿಗೆ ದುಬಾರಿ ಅಗಿರುವುದರಿಂದ ಉತ್ಪನ್ನಗಳನ್ನು ದಾಸ್ತಾನು ಕಷ್ಟವಾಗುತ್ತಿದೆ. ಅಲ್ಲದೆ, ಹಣ್ಣು, ತರಕಾರಿಯನ್ನೂ ಮಾರುಕಟ್ಟೆಯಲ್ಲಿ ದೊರೆಯುವ ಅಲ್ಪ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಸರ್ಕಾರ ಕೋಲ್ಡ್‌ ಸ್ಟೋರೇಜ್‌ ಸ್ಥಾಪಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎನ್ನುತ್ತಾರೆ ರೈತ ಚಿಕ್ಕೇನಹಳ್ಳಿ ವೆಂಕಟೇಶ್.

ಉಗ್ರಾಣ ಕೊರತೆ: ರಾಗಿ ಖರೀದಿಗೆ ತೊಡಕು

ಶ್ವೇತಾ ಜಿ.

ಹೊಸದುರ್ಗ: ರಾಗಿ ಖರೀದಿಯ ಸಂದರ್ಭ ಉಗ್ರಾಣದ ಅಗತ್ಯ ರೈತರಿಗೆ ಮನವರಿಕೆಯಾಗಿದೆ. ರಾಗಿ ದಾಸ್ತಾನಿಗೆ ಪಟ್ಟಣದಲ್ಲಿ ಉ‌ಗ್ರಾಣವಿದ್ದಿದ್ದರೆ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.

ಜಿಲ್ಲೆಯಲ್ಲಿ ಹೊಸದುರ್ಗ ತಾಲ್ಲೂಕಿನಲ್ಲೇ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಲ್ಲಿ ರಾಗಿ ಖರೀದಿ ಕೇಂದ್ರವನ್ನು ಪ್ರತಿ ವರ್ಷ ಹೊಸದುರ್ಗ ಹಾಗೂ ಶ್ರೀರಾಂಪುರದಲ್ಲಿ ತೆರೆಯಲಾಗುತ್ತದೆ. ಖರೀದಿಸಿದ ರಾಗಿಯನ್ನು ಚಿತ್ರದುರ್ಗದ ಉಗ್ರಾಣಕ್ಕೆ ಸಾಗಣೆ ಮಾಡಬೇಕು. ಇದರಿಂದ ರಾಗಿ ಖರೀದಿ ಪ್ರಕ್ರಿಯೆ ವಿಳಂಬವಾಗಿ ರೈತರು ತೊಂದರೆ ಅನುಭವಿಸಿದ್ದಾರೆ.

‘ಖರೀದಿಸಿದ ರಾಗಿಯನ್ನು ಚಿತ್ರದುರ್ಗಕ್ಕೆ ಸಾಗಣೆ ಮಾಡಲು ಸರ್ಕಾರಕ್ಕೂ ಹೊರೆ. ಲಾರಿ ಬರುವವರೆಗೂ ರೈತರು ಕಾಯಬೇಕು. ಹೊಸದುರ್ಗದಲ್ಲಿಯೇ ಗೋದಾಮು ವ್ಯವಸ್ಥೆ ಕಲ್ಪಿಸಿದರೆ ಚಿತ್ರದುರ್ಗದಲ್ಲಿ ರಾಗಿ ದಾಸ್ತಾನು ತಪ್ಪುತ್ತದೆ’ ಎನ್ನುತ್ತಾರೆ ರೈತರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೆಲ ಉಗ್ರಾಣಗಳಿವೆ. ತಾಲ್ಲೂಕಿನ ರೈತರು ಹೆಚ್ಚಾಗಿ ರಾಗಿ, ಜೋಳ, ಹೆಸರುಕಾಳು, ಎಳ್ಳು ಹಾಗೂ ಸಿರಿಧಾನ್ಯಗಳನ್ನು ಅಧಿಕವಾಗಿ ಬೆಳೆಯುತ್ತಾರೆ. ಇವುಗಳನ್ನೆಲ್ಲ ಈಗಿರುವ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡಬಹುದು. ಈರುಳ್ಳಿ ಬೆಳೆಗಾರರಿಗೆ ಶೈತ್ಯಾಗಾರಗಳಿಲ್ಲದ ಕಾರಣ ನೇರ ಬೆಂಗಳೂರಿನ ಮಾರುಕಟ್ಟೆಗೆ ಸಾಗಿಸಬೇಕಿದೆ.

‘ಶ್ರೀರಾಂಪುರ ಮತ್ತು ಮತ್ತೋಡು ಭಾಗದ ರೈತರಿಗೆ ಉಗ್ರಾಣದ ಸೌಲಭ್ಯವಿಲ್ಲ. ಧಾನ್ಯ ದಾಸ್ತಾನು ಮಾಡಲು 20 ಕಿ.ಮೀ ದೂರದ ಹೊಸದುರ್ಗಕ್ಕೆ ಬರಬೇಕಿದೆ. ಕೊಬ್ಬರಿ ಮಾರುಕಟ್ಟೆಗಾಗಿ ಅರಸೀಕೆರೆ ಮತ್ತು ತಿಪಟೂರಿಗೆ ಅಲೆದಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಮತ್ತೋಡಿನ ರೈತ ರಂಗಪ್ಪ.

* ಕೃಷಿ ಉತ್ಪನ್ನ ದಾಸ್ತಾನು ವ್ಯವಸ್ಥೆ ಮಹಾರಾಷ್ಟ್ರದಲ್ಲಿ ಉತ್ತಮವಾಗಿದೆ. ಇಂತಹ ಸೌಲಭ್ಯ ರಾಜ್ಯದ ರೈತರಿಗೂ ಸಿಗಬೇಕು. ಆದರೆ, ಸರ್ಕಾರ ಮಾತ್ರ ರೈತರನ್ನು ನಿರ್ಲಕ್ಷಿಸುತ್ತಿದೆ.

–ಟಿ. ನುಲೇನೂರು ಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ

* ಸಿರಿಧಾನ್ಯ ಮೌಲ್ಯವರ್ಧನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 3 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ₹ 20 ಲಕ್ಷ ವೆಚ್ಚದ ಘಟಕಕ್ಕೆ ಸರ್ಕಾರ ನೆರವು ನೀಡುತ್ತಿದೆ.

-ಡಾ.ಪಿ.ರಮೇಶಕುಮಾರ್‌, ಜಂಟಿ ನಿರ್ದೇಶಕ, ಕೃಷಿ ಇಲಾಖೆ

* ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ವ್ಯಾಪಾರಸ್ಥರು ಗೋದಾಮು ನಿರ್ಮಿಸಿದ್ದಾರೆ. ರೈತರು ಕೃಷಿ ಉತ್ಪನ್ನ ದಾಸ್ತಾನಿಗೆ ಆಹಾರ ನಿಗಮ ಸಂಪರ್ಕಿಸಬೇಕು.

–ನಜೀಬ್‌ ಉಲ್ಲಾ, ಜಂಟಿ ನಿರ್ದೇಶಕ, ಚಿತ್ರದುರ್ಗ ಎಪಿಎಂಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT