ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಆಹಾರ ಪದಾರ್ಥಕ್ಕೆ ಮುಗಿಬಿದ್ದ ಜನ

Last Updated 22 ಏಪ್ರಿಲ್ 2020, 12:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ರಂಗಯ್ಯನಬಾಗಿಲು ಬಳಿಯ ಜಿಲ್ಲಾ ಯಾದವ (ಗೊಲ್ಲ) ಸಂಘದಲ್ಲಿ ವಿತರಿಸಿದ ಆಹಾರ ಧಾನ್ಯಕ್ಕೆ ಸಾರ್ವಜನಿಕರು ಮುಗಿಬಿದ್ದು, ಗೊಂದಲ ಸೃಷ್ಟಿಸಿದ ಪ್ರಸಂಗ ಬುಧವಾರ ನಡೆಯಿತು. ಪೊಲೀಸರು ಹಾಗೂ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಅಲೆಮಾರಿ, ಅರೆ ಅಲೆಮಾರಿ ಹಾಗೂ ಬಡ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್‌ ವಿತರಿಸಲು ಜಿಲ್ಲಾ ಯಾದವ ಸಂಘ ಸಿದ್ಧತೆ ಮಾಡಿಕೊಂಡಿತ್ತು. ನಿಗದಿತ ಸಮಯಕ್ಕೂ ಮೊದಲೇ ಸಾವಿರಕ್ಕೂ ಅಧಿಕ ಜನರು ಯಾದವ ಹಾಸ್ಟೆಲ್‌ ಎದುರು ಜಮಾಯಿಸಿದ್ದರು. ಯಾರೊಬ್ಬರು ಅಂತರ ಕಾಯ್ದುಕೊಳ್ಳಲಿಲ್ಲ. ಇದರಿಂದ ಕೆಲ ಹೊತ್ತು ನೂಕು ನುಗ್ಗಲು ಉಂಟಾಯಿತು.

ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಸ್ಟೆಲ್‌ ಬಾಗಿಲು ಎದುರು ನಿಂತಿದ್ದ ಜನರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಸೂಚನೆ ನೀಡಿದರು. ಆಹಾರ ಧಾನ್ಯಗಳ ಕಿಟ್‌ ಸಂಖ್ಯೆಗೆ ಅನುಗುಣವಾಗಿ ಟೋಕನ್‌ ವಿತರಿಸುವ ವ್ಯವಸ್ಥೆ ಮಾಡಿದರು. ಟೋಕನ್‌ ಸಿಗದೇ ಕೆಲ ಮಹಿಳೆಯರು ನಿರಾಸೆಯಿಂದ ಮನೆಗೆ ಮರಳಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ‘ಕೊರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ. ಅಂತರ ಕಾಯ್ದುಕೊಂಡಾಗ ಮಾತ್ರ ಸೋಂಕು ಹರಡದಂತೆ ತಡೆಯಲು ಸಾಧ್ಯ. ಯಾರೊಬ್ಬರು ಗೊಂದಲಕ್ಕೆ ಒಳಗಾಗಬೇಡಿ. ತಾಳ್ಮೆಯಿಂದ ಸರತಿ ಸಾಲಿನಲ್ಲಿ ಕಾಯಿರಿ’ ಎಂಬ ಸೂಚನೆ ನೀಡಿದರು.

ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಆಹಾರ ಧಾನ್ಯದ ಕಿಟ್‌ ವಿತರಣೆ ಮಾಡಲಾಯಿತು. ಅಕ್ಕಿ, ಗೋದಿ ಹಾಗೂ ಅಡುಗೆ ಎಣ್ಣೆಯನ್ನು ಪಡೆದು ಜನರು ಮನೆಗೆ ಮರಳಿದರು.

ಜಿಲ್ಲಾ ಯಾದವ ಸಂಘದ ಅಧ್ಯಕ್ಷ ಮೀಸೆ ಮಹಲಿಂಗಪ್ಪ, ಕಾರ್ಯದರ್ಶಿ ಆನಂದಪ್ಪ, ಮುಖಂಡರಾದ ಟಿ.ರಂಗಸ್ವಾಮಿ, ಕಿರಣ್‍ಕುಮಾರ್ ಯಾದವ್, ಪಲ್ಗುಣೇಶ್ವರ್, ಡಿ.ಸಿ.ಗೋವಿಂದಪ್ಪ, ಎನ್.ಮಹಾಂತೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT