ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ ಜಿಲ್ಲೆಯ ಕೆಲವೆಡೆಜಿಲ್ಲೆಯ ಕೆಲವೆಡೆ ಉತ್ತಮ ಮಳೆ

ಕಟಾವಿಗೆ ಬಂದಿರುವ ಮೆಕ್ಕೆಜೋಳ, ಶೇಂಗಾ ಬೆಳೆ ಹಾಳಾಗುವ ಆತಂಕ
Last Updated 21 ಅಕ್ಟೋಬರ್ 2020, 5:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯ ಕೆಲವೆಡೆ ಮಂಗಳವಾರ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಇಡೀ ದಿನ ಮೋಡಕವಿದ ವಾತಾವರಣವಿದ್ದು, ಸಂಜೆಯ ಬಳಿಕ ಎಡಬಿಡದೆ ಮಳೆ ಸುರಿಯಿತು.

ಜಿಲ್ಲೆಯಲ್ಲಿ ಬೆಳಿಗ್ಗೆಯಿಂದಲೂ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಆಗಿಂದಾಗ್ಗೆ ಜಿಟಿ ಜಿಟಿ ಮಳೆಯ ಜತೆಗೆ ಸೂರ್ಯನ ದರ್ಶನವೂ ಆಗುತ್ತಿತ್ತು. ಬೆಳಿಗ್ಗೆ 11.30ರ ಸುಮಾರಿಗೆ ಚಿತ್ರದುರ್ಗ ನಗರ ಹಾಗೂ ತಾಲ್ಲೂಕಿನ ಕೆಲವೆಡೆ ಗುಡುಗು ಸಹಿತ ಆರಂಭವಾದ ಮಳೆ ಕೆಲವೇ ನಿಮಿಷಗಳಲ್ಲಿ ಬಿರುಸು ಪಡೆಯಿತು. ಒಂದು ತಾಸು ಉತ್ತಮ ಮಳೆಯಾಯಿತು.

ಬೆಳಿಗ್ಗೆಯಿಂದ ರಾತ್ರಿವರೆಗೂ ಆಗಿಂದಾಗ್ಗೆ ಸುರಿದ ಮಳೆಯಿಂದಾಗಿ ಎಂದಿಗಿಂತಲೂ ಜನಸಂಚಾರ ವಿರಳವಾಗಿತ್ತು. ನಗರದ ವಿವಿಧೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಸಂಚಾರಕ್ಕೆ ವಾಹನ ಸವಾರರಿಗೆ ತೊಂದರೆ ಉಂಟಾಯಿತು. ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿಯಿತು.

ಚಿತ್ತ ಮಳೆ ಆರಂಭದಿಂದಲೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂಥ ಮಳೆಯಾಗಿಲ್ಲ. ವಾರದಿಂದಲೂ ಬಿಸಿಲಿನ ತಾಪ ಹೆಚ್ಚಾಗಿತ್ತು. ಸಂಜೆ ಹೊತ್ತು ಮೋಡಕವಿದ ವಾತಾವರಣ ನಿರ್ಮಾಣವಾದರೂ ಮಳೆಯಾಗಿರಲಿಲ್ಲ. ಆದರೆ, ಮಂಗಳವಾರ ಸಂಜೆಯ ನಂತರ ತಾಲ್ಲೂಕಿನ ಕೆಲವೆಡೆ ಮಳೆಯ ರಭಸ ಹೆಚ್ಚಾಯಿತು.

ಬೆಳೆ ಕಟಾವಿಗೆ ತೊಂದರೆ: ಯಾವುದೇ ಬೆಳೆಯಾಗಲಿ ಕಟಾವಿಗೆ ಬಂದ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿದು ನಂತರ ಬಿಸಿಲು ಬಂದರೆ ಒಣಗಿಸಿಕೊಳ್ಳಲು ಸಹಕಾರಿಯಾಗಲಿದೆ. ಆದರೆ, ಇಡೀ ದಿನ ಬಿಟ್ಟು ಬಿಟ್ಟು ಮಳೆಯಾದ ಪರಿಣಾಮ ಕಟಾವಿಗೆ ಬಂದಿರುವ ಮೆಕ್ಕೆಜೋಳ ಹಾಗೂ ಶೇಂಗಾ ಬೆಳೆಗೆ ತೊಂದರೆ ಉಂಟಾಗಲಿದೆ.

ಬೆಳೆಗಳು ಹಸಿಯಾದರೆ, ಮೊಳಕೆಯಾಗಿ ನಾಶವಾಗುವ ಸಾಧ್ಯತೆ ಹೆಚ್ಚಿದೆ. ಆಗಿಂದಾಗ್ಗೆ ಮಳೆಯಾಗುತ್ತಲೇ ಇದ್ದರೆ ಕಟಾವು ಮಾಡಲಿಕ್ಕೂ ಕಷ್ಟವಾಗಲಿದೆ. ಇದು ರೈತರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಕೆಲ ದಿನಗಳ ಹಿಂದಷ್ಟೇ ಮಳೆಯಿಂದಾಗಿ ಜಿಲ್ಲೆಯ ಪ್ರಮುಖ ಬೆಳೆಯಾದ ಈರುಳ್ಳಿ ಕೊಳೆತು ಬಹುತೇಕ ನಾಶವಾಗಿತ್ತು.

***

ಶೇಂಗಾ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ ಮಳೆ

ಚಳ್ಳಕೆರೆ: ಮಂಗಳವಾರ ಸಂಜೆ ಸತತ ಒಂದು ಗಂಟೆ ಸುರಿದ ಮಳೆಗೆ ಶೇಂಗಾ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ.

ಮಳೆಗೆ ನೆನೆದ ಶೇಂಗಾ, ಗಿಡದಲ್ಲಿ ಇದ್ದ ಮೂರ್ನಾಲ್ಕು ಕಾಯಿಗಳು ಬೂದುಬಣ್ಣ ಬಂದು ಕೆಡುತ್ತವೆ. ಬಳ್ಳಿ ಕೊಳೆತು ಹೋಗುತ್ತದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಈಗಾಗಲೇ ತಾಲ್ಲೂಕಿನ ಬೆಳೆಗೆರೆ, ಚಿಕ್ಕೇನಹಳ್ಳಿ, ಯಾಲಗಟ್ಟೆ, ನಾರಾಯಣಪುರ, ಸಾಣಿಕೆರೆ, ಮೀರಾಸಾಬಿಹಳ್ಳಿ, ಪುರ್ಲೆಹಳ್ಳಿ, ದುರ್ಗವರ, ತಳಕು, ತಿಮ್ಮಣ್ಣನಹಳ್ಳಿ ಮುಂತಾದ ಗ್ರಾಮದಲ್ಲಿ ರೈತರು ಶೇಂಗಾ ಗಿಡ ಕಿತ್ತು ಬಿಸಿಲಿಗೆ ಒಣಗಿಸಲು ಬಳ್ಳಿಯನ್ನು ಹೊಲದಲ್ಲೇ ರಾಶಿ, ರಾಶಿ ಹಾಕಿದ್ದಾರೆ.

***

ಗುಡುಗು ಸಹಿತ ಬಿರುಸು ಮಳೆ

ಧರ್ಮಪುರ: ಹೋಬಳಿಯ ಸುತ್ತ ಮುತ್ತ ಮಂಗಳವಾರ ಸಂಜೆ ಗುಡುಗು ಸಹಿತ ಮಳೆಯಾಗಿದ್ದು, ಅರಳೀಕೆರೆ ಹಳ್ಳ ಮೈದುಂಬಿ ಹರಿಯುತ್ತಿದೆ.

ಮಂಗಳವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಒಂದು ಗಂಟೆವರೆಗೂ ಸುರಿಯಿತು. ಅರಳೀಕೆರೆ, ಹೊಸಕೆರೆ, ಖಂಡೇನಹಳ್ಳಿ, ಶ್ರವಣಗೆರೆ, ಬೆಟ್ಟಗೊಂಡನಹಳ್ಳಿ, ಹಲಗಲದ್ದಿ, ಕಣಜನಹಳ್ಳಿ ಮೊದಲಾದ ಕಡೆ ಬಿರುಸಾದ ಮಳೆ ಸುರಿದಿದ್ದು, ಚೆಕ್ ಡ್ಯಾಂ, ಕೃಷಿ ಹೊಂಡಗಳು ತುಂಬಿವೆ. ಹಳ್ಳಗಳು ಹರಿಯುತ್ತಿವೆ.

ಒಂದು ಕಡೆ ರೈತರಲ್ಲಿ ಹರ್ಷ ಮೂಡಿಸಿದರೆ ಮತ್ತೊಂದೆಡೆ ರೈತರು ಕಂಗಾಲಾಗುವಂತೆ ಮಾಡಿದೆ.

‘ಧರ್ಮಪುರ ಹೋಬಳಿಯ ಪ್ರಮುಖ ವಾಣಿಜ್ಯ ಬೆಳೆ ಶೇಂಗಾ. ರೈತರು ಕಳೆದ ವಾರದಿಂದ ಶೇಂಗಾ ಕಿತ್ತಿದ್ದು, ಈಗ ಸಂಪೂರ್ಣ ಮಳೆಯಲ್ಲಿ ತೊಯ್ದಿದೆ. ಇದರಿಂದ ಶೇಂಗಾ ಕಪ್ಪಾಗುವ ಜತೆಗೆ ಹುಲ್ಲು ಸಹ ಕೆಟ್ಟು ಹೋಗುತ್ತದೆ. ಜಾನುವಾರಿಗೆ ಮೇವಿನ ಸಮಸ್ಯೆ ತಲೆದೋರಲಿದೆ’ ಎಂದು ಪರಮೇಶ್ವರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT