ಶನಿವಾರ, ಮೇ 21, 2022
23 °C

ಮಳೆಗೆ ಸಜ್ಜಾಗದ ಆಡಳಿತ ವ್ಯವಸ್ಥೆ

ಜಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪೂರ್ವ ಮುಂಗಾರು ಈಗಲೇ ಅಬ್ಬರಿಸತೊಡಗಿದೆ. ನಿತ್ಯ ಬಿರುಗಾಳಿ ಸಹಿತ ಮಳೆ ಸುರಿಯಲಾರಂಭಿಸಿದೆ. ಪ್ರತಿ ಮಳೆಗೆ ಹತ್ತಾರು ಮರಗಳು ಧರೆಗೆ ಉರುಳುತ್ತಿವೆ. ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿಯುತ್ತಿವೆ. ಮಳೆ ನೀರು ಹಾಗೂ ವಿಪತ್ತು ನಿರ್ವಹಣೆಗೆ ನಗರ ಸ್ಥಳೀಯ ಸಂಸ್ಥೆಯ ಆಡಳಿತ ವ್ಯವಸ್ಥೆ ಇನ್ನೂ ಸಜ್ಜಾದಂತೆ ಕಾಣುತ್ತಿಲ್ಲ.

ಅನಿರೀಕ್ಷಿತವಾಗಿ ಸುರಿಯುತ್ತಿರುವ ಪೂರ್ವ ಮುಂಗಾರು ಮಳೆ ಕೃಷಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡಿದೆ. ಭೂಮಿ ಉಳುಮೆ ಮಾಡಿ ಬಿತ್ತನೆಗೆ ಸಜ್ಜು ಮಾಡಿಕೊಳ್ಳಲು ಅನುವಾಗಿದೆ. ಬೇಸಿಗೆ ಬಿಸಿಲಿಗೆ ಕಾದ ಕೆಂಡದಂತೆ ಆಗಿದ್ದ ಭೂಮಿ, ಮೇಲಿಂದ ಮೇಲೆ ಸುರಿಯುತ್ತಿರುವ ಮಳೆಗೆ ತಣ್ಣಗಾಗುತ್ತಿದೆ. ಬೇಸಿಗೆ ಧಗೆ ಕಡಿಮೆಯಾಗುತ್ತಿದೆ. ಜಲಮೂಲಗಳಿಗೆ ನೀರು ಹರಿದುಬರುತ್ತಿದೆ. ಆದರೆ, ನಗರ, ಪಟ್ಟಣ ಪ್ರದೇಶದಲ್ಲಿ ಮಾತ್ರ ಮಳೆ ಅವಾಂತರ ಸೃಷ್ಟಿಸುತ್ತಿದೆ.

ಚಿತ್ರದುರ್ಗ ಜಿಲ್ಲೆ ಈವರೆಗೆ ಬರಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವುದೇ ಹೆಚ್ಚು. ಮಲೆನಾಡು, ಕರಾವಳಿ ಪ್ರದೇಶದಷ್ಟು ಮಳೆ ಇಲ್ಲಿ ಸುರಿಯುವುದಿಲ್ಲ. ಆದರೂ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸುರಿಯುವ ಮಳೆ ಎದುರಿಸುವ ಶಕ್ತಿ ಇಲ್ಲ. ನಗರ ಮತ್ತು ಪಟ್ಟಣ ಪ್ರದೇಶದ ಹಲವು ಬಡಾವಣೆಯ ಜನರು ಮಳೆಗೆ ಈಗಲೂ ಭಯಪಡುತ್ತಾರೆ. ಮಳೆ ನೀರು ನುಗ್ಗುವ ಭೀತಿ ಇನ್ನೂ ಕಡಿಮೆಯಾಗಿಲ್ಲ. ಧರೆಗೆ ಉರುಳಿದ ಮರ ತೆರವುಗೊಳಿಸುವ ಕಾರ್ಯ, ವಿದ್ಯುತ್‌ ಕಂಬ, ಮಾರ್ಗಗಳ ನಿರ್ವಹಣೆಯೂ ತೃಪ್ತಿದಾಯಕವಾಗಿಲ್ಲ ಎಂಬುದು ನಿತ್ಯ ಸುರಿಯುವ ಮಳೆಯಿಂದ ಸಾಬೀತಾಗುತ್ತಿದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 550 ಮಿ.ಮೀ. ಮಳೆಯಾಗುತ್ತದೆ. ಪೂರ್ವ ಮುಂಗಾರು ಹಾಗೂ ಹಿಂಗಾರು ಸಂದರ್ಭದಲ್ಲಿ ಮಾತ್ರ ಧಾರಾಕಾರ ಮಳೆಯ ಅನುಭವವಾಗುತ್ತದೆ. ಮಳೆ ನೀರು ನಿರ್ವಹಣೆ, ಸಂಗ್ರಹ ವ್ಯವಸ್ಥೆಗೆ ಶತಮಾನಗಳ ಇತಿಹಾಸವಿದೆ. ನಿರ್ವಹಣೆಯ ಕೊರತೆ, ನಗರ ಸ್ಥಳೀಯ ಸಂಸ್ಥೆಯ ನಿರ್ಲಕ್ಷ್ಯ, ಸಾರ್ವಜನಿಕರಲ್ಲಿರುವ ತಾತ್ಸಾರ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ನೀರು ಹರಿದುಹೋಗುವ ವ್ಯವಸ್ಥೆ ಸರಿಯಾಗುತ್ತಿಲ್ಲ. ಸಮಸ್ಯೆ ಎದುರಾದಾಗ ಮಾತ್ರ ಪರಿಹಾರದ ಪ್ರಯತ್ನಗಳು ನಡೆಯುತ್ತವೆ.

ಚಿತ್ರದುರ್ಗ ನಗರದಲ್ಲಿ ಮೇ 3ರಂದು ಸುರಿದ ಬಿರುಗಾಳಿ ಮಳೆಗೆ ಹತ್ತಾರು ಮರಗಳು ಧರೆಗೆ ಉರುಳಿದ್ದವು. ಜಿಲ್ಲಾ ಕ್ರೀಡಾಂಗಣ ರಸ್ತೆಯ ಹಲವು ಮರ, ರೆಂಬೆ–ಕೊಂಬೆ, ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದವು. ತುರುವನೂರು ರಸ್ತೆ, ಜೆಸಿಆರ್‌ ಸೇರಿ ಇತರ ಬಡಾವಣೆಯಲ್ಲಿಯೂ ಮರಗಳು ಉರುಳಿದ್ದವು. ಈ ಮಾರ್ಗಗಳಲ್ಲಿ ವಾಹನ ಹಾಗೂ ಜನಸಂಚಾರ ದುಸ್ತರವಾಗಿತ್ತು. ತ್ವರಿತವಾಗಿ ಸ್ಪಂದಿಸಬೇಕಾದ ನಗರಸಭೆಯ ಸಿಬ್ಬಂದಿ ತೆರವು ಕಾರ್ಯವನ್ನು ವಿಳಂಬ ಮಾಡಿದರು.

ಪೂರ್ವ ಮುಂಗಾರು ಮಳೆ ಆರಂಭವಾಗಿ ಹಲವು ದಿನ ಕಳೆದರೂ ಚರಂಡಿಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಮಾಡಿಲ್ಲ. ಸಣ್ಣ ಮಳೆ ಸುರಿದರೂ ಚರಂಡಿಗಳು ಕಟ್ಟಿಕೊಂಡು ರಸ್ತೆಯ ಮೇಲೆ ನೀರು ಹರಿಯುವುದು ಸಾಮಾನ್ಯವಾಗಿದೆ. ದೊಡ್ಡಪೇಟೆ, ಚಿಕ್ಕಪೇಟೆ ಕಡೆಯಿಂದ ಹರಿದುಬರುವ ನೀರು ಬಿ.ಡಿ. ರಸ್ತೆ ಸೇರುತ್ತಿದೆ. ಇಲ್ಲಿಂದ ಕೆಳಗೆ ಹರಿಯುವ ನೀರು ರಾಷ್ಟ್ರೀಯ ಹೆದ್ದಾರಿ 48ಕ್ಕೆ ನಿರ್ಮಿಸಿದ ಕೆಳಸೇತುವೆಯ ಬಳಿ ಕೆರೆಯಂತೆ ಸೃಷ್ಟಿಯಾಗುತ್ತಿದೆ. ತುರುವನೂರು ರಸ್ತೆಯ ಕೆಳಸೇತುವೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಸರ್ವಿಸ್‌ ರಸ್ತೆಯಲ್ಲಿ ಕೆಸರು ನಿಂತು ಎರಡು ದಿನಗಳ ವರೆಗೆ ದುರ್ನಾತ ಬೀರುತ್ತದೆ.

ಮಳೆ ನೀರು ಹರಿದುಹೋಗಲು ನಗರ ವ್ಯಾಪ್ತಿಯಲ್ಲಿ ರಾಜಕಾಲುವೆಗಳಿವೆ. ಒತ್ತುವರಿಯಿಂದಾಗಿ ಮೂಲ ಸ್ವರೂಪನ್ನು ಕಳೆದುಕೊಂಡ ಇವು ಚರಂಡಿ ರೀತಿಯಲ್ಲಿ ಕಾಣುತ್ತಿವೆ. ಪ್ರತಿ ಮಳೆಗಾಲದಲ್ಲಿ ರಾಜಕಾಲುವೆ ಸಮೀಪದ ಮನೆಯ ನಿವಾಸಿಗಳು ಪ್ರವಾದ ಭೀತಿ ಎದುರಿಸುವಂತಾಗಿದೆ. ಇತ್ತೀಚೆಗೆ ಸುರಿದ ಮಳೆಗೆ ಗುಮಾಸ್ತರ ಕಾಲೊನಿಗೆ ರಾಜಕಾಲುವೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು.

ಚಂದ್ರವಳ್ಳಿಯಿಂದ ಮಲ್ಲಾಪುರ ಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆ ನಗರದ ಮಧ್ಯಭಾಗದಲ್ಲಿ ಹರಿದುಹೋಗುತ್ತದೆ. ಪಿಎನ್‌ಟಿ ಕ್ವಾರ್ಟರ್ಸ್, ಕನಕ ವೃತ್ತದ ಅಲ್ಲಲ್ಲಿ ಇದರ ಗಾತ್ರ ಕಿರಿದಾಗಿ ದಾವಣಗೆರೆ
ರಸ್ತೆಯ ಮೂಲಕ ಹರಿಯುವ ರಾಜಕಾಲುವೆ ಸಣ್ಣ ಮಳೆಗೂ ತುಂಬಿ ಹರಿಯುತ್ತದೆ. ಖಾಜಿ ಮೊಹಲ್ಲಾದ ರಾಜಕಾಲುವೆಯ ಮೇಲೆ ಕಟ್ಟಡಗಳು ಎದ್ದುನಿಂತಿವೆ. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಮನೆಗಳಿಗೆ ನುಗ್ಗುತ್ತಿದೆ. ರಾಜಕಾಲುವೆ ಶುಚಿಗೊಳಿಸಲು ಇನ್ನೂ ಕಾಲಾವಕಾಶವಿದ್ದು, ನಗರಸಭೆ ಗಮನ ಹರಿಸಬಹುದು ಎಂಬ ನಿರೀಕ್ಷೆ ಸ್ಥಳೀಯರದ್ದು.

ಚಿನ್ನಕ್ಕಿಹೊಂಡ, ಕೆಳಗೋಟೆ, ನೆಹರೂ ನಗರ, ಪಿ ಅಂಡ್‌ ಟಿ ಕ್ವಾರ್ಟರ್ಸ್‌ ಸೇರಿ ನಗರದ ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಪ್ರತಿ ವರ್ಷ ಮಳೆ ಆರಂಭವಾದರೆ ಈ ಜನರು ಭಯದಲ್ಲಿಯೇ ದಿನ ದೂಡುತ್ತಾರೆ.

ನಾಗರಿಕರಿಗೆ ಮಳೆ ನೀರಿನ ಆತಂಕ

ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ಮನೆಗಳಿಗೆ ನುಗ್ಗುವ ಮಳೆ ನೀರನ್ನು ತಡೆಯಲು ನಗರಸಭೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ರೈತರಿಗೆ ವರವಾಗಿದ್ದ ರಾಜಕಾಲುವೆಗಳು ನಗರದ ನಾಗರಿಕರಿಗೆ ಶಾಪವಾಗಿ ಪರಿಣಮಿಸಿವೆ.

ಕಾಲುವೆ ಜಾಗದಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡ, ಚರಂಡಿ, ಕಸ ಹಾಗೂ ಕಟ್ಟಡ ತ್ಯಾಜ್ಯಗಳಿಂದ ತುಂಬಿ ಹೋಗಿರುವ ರಾಜಕಾಲುವೆಗಳು ದುಃಸ್ಥಿತಿಗೆ ತಲುಪಿವೆ.

ನಗರದ ಏಳೆಂಟು ರಾಜಕಾಲುವೆಗಳಲ್ಲಿ ಗಾಂಧಿನಗರ, ಅಂಬೇಡ್ಕರ್‌ ನಗರ ಹಾಗೂ ವಾಲ್ಮೀಕಿ ನಗರದ ಮೂಲಕ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ವರೆಗೆ ಹಾದುಹೋಗಿರುವ ಕಾಲುವೆಯನ್ನು ಹೊರತುಪಡಿಸಿದರೆ ಇನ್ನುಳಿದ ಕಾಲುವೆಗಳು ಅವನತಿಯತ್ತ ಸಾಗಿವೆ.

ನಗರದ ಮೇಲ್ಭಾಗದ ವಿಠಲನಗರ, ಜಾಫರ್‌ ಷರೀಫ್‌ ಬಡಾವಣೆ, ತ್ಯಾಗರಾಜನಗರ, ವಾಲ್ಮೀಕಿನಗರ, ರಹೀಂ ನಗರದ ನಾಲ್ಕು ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ ಆಪಿನ ಹುಲ್ಲು, ಗಜ್ಜುಗದ ಬಳ್ಳಿ, ಜಾಲಿ ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದಿವೆ.

ಐದಾರು ಅಡಿ ಕೆಸರು, ಕೊಚ್ಚೆ ತುಂಬಿದ ಕಾಲುವೆಯಲ್ಲಿ ಸದಾ ಬೀರುತ್ತಿರುವ ದುರ್ವಾಸನೆ ನಾಗರಿಕರಲ್ಲಿ ಅಸಹ್ಯ ಹುಟ್ಟಿಸಿದೆ. ಬಿದ್ದ ಮಳೆ ನೀರು ಸರಾಗವಾಗಿ ಹರಿಯಲಿಕ್ಕೂ ಸಾಧ್ಯವಾಗದಷ್ಟು ಅಧ್ವಾನಗೊಂಡಿವೆ.

ಮಳೆಗಾಲದಲ್ಲಿ ಚರಂಡಿ ನೀರಿನ ಜತೆಗೆ ಮಳೆನೀರು ಎಲ್ಲಿ ಮನೆಗೆ ನುಗ್ಗುತ್ತದೋ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಕಾಲುವೆ, ಕಿರುಕಾಲುವೆ ಸಂರಕ್ಷಣೆ -ಅಭಿವೃದ್ಧಿಯ ಕಡೆಗೆ ಕಿಂಚುತ್ತೂ ಕಾಳಜಿ ವಹಿಸದ ನಗರಸಭೆ ಪ್ರತಿ ವರ್ಷ ಸಣ್ಣ ಸಣ್ಣ ಚರಂಡಿಗಳ ಸ್ವಚ್ಛತೆಗೆ ಅಧಿಕ ಹಣ ವ್ಯಯಿಸುತ್ತಿದೆ.

ಅಜ್ಜನಗುಡಿ ಕೆರೆ ಮತ್ತು ಕರೆಕಲ್‍ಕೆರೆ ಈ ಎರಡೂ ಕೆರೆಯ ನೀರು ನಗರದ ರಾಜಕಾಲುವೆಯ ಮೂಲಕ ನಗರಂಗೆರೆ ಕೆರೆಗೆ ಹರಿದು ಹೋಗಬೇಕು. ಆದರೆ ಕಾಲುವೆ ದುಃಸ್ಥಿತಿಯಿಂದ ಈಗ ಸಾಧ್ಯವಾಗುತ್ತಿಲ್ಲ.

ಕಾಲುವೆ ಸ್ವಚ್ಛತೆ ಇಲ್ಲದ ಕಾರಣ ಹಂದಿ-ಸೊಳ್ಳೆಗಳು ಅಧಿಕವಾಗಿವೆ. ಕಾಟಪ್ಪನಹಟ್ಟಿ, ಹಳೆಟೌನ್, ರಹೀಂ ನಗರದ ವಾಸಿಗಳು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ನಗರ ನಿವಾಸಿಗಳಿಗೆ ತಪ್ಪಿಲ್ಲ ಭಯ

ಸುವರ್ಣಾ ಬಸವರಾಜ್‌

ಹಿರಿಯೂರು: ನಗರದ ಮೇಗಳಕೊಟ್ಟಿಗೆಯಿಂದ ಡಿಸಿ ಕಾಲೊನಿ, ಆಶ್ರಯ ಬಡಾವಣೆ ನಿವಾಸಿಗಳಿಗೆ, ನಂಜುಂಡೇಶ್ವರ ಚಿತ್ರಮಂದಿರದ ಪಕ್ಕ ಹಾದು ಹೋಗುವ ಕಟುಗರಹಳ್ಳದ ಎರಡೂ ದಡದಲ್ಲಿನ ನಿವಾಸಿಗಳಿಗೆ ಭಾರಿ ಮಳೆ ಅನಿರೀಕ್ಷಿತ ಸುರಿದಲ್ಲಿ ಬದುಕು ಬೀದಿಗೆ ಬೀಳುವ ಆತಂಕ ತಪ್ಪಿಲ್ಲ.

ಭಾರಿ ಮಳೆಯಿಂದ ಆಗುತ್ತಿರುವ ಅನಾಹುತಗಳಿಂದ ಎಚ್ಚೆತ್ತುಕೊಂಡ ನಗರಸಭೆ, ಮೇಗಳಕೊಟ್ಟಿಗೆಯಿಂದ ನಂಜಯ್ಯನಕೊಟ್ಟಿಗೆ ಹೋಗುವ ರಸ್ತೆವರೆಗೆ ರಾಜಕಾಲುವೆ ನಿರ್ಮಿಸಿತ್ತು.

ರಾಜಕಾಲುವೆಯನ್ನು ನಂಜಯ್ಯನಕೊಟ್ಟಿಗೆಯಲ್ಲಿರುವ ಸ್ಮಶಾನದವರೆಗೆ ಮಾತ್ರ ನಿರ್ಮಿಸಿದ್ದು, ಕೊಟ್ಟಿಗೆಗೆ ಹೋಗುವ ರಸ್ತೆಯಲ್ಲಿನ ಡಕ್‌ ಎತ್ತರವಿಲ್ಲದ ಕಾರಣ ಸಮೀಪದ ಮನೆಯವರಿಗೆ ಆತಂಕ ತಪ್ಪಿಲ್ಲ. ಕಸ ಕಟ್ಟಿಕೊಂಡು ಮಳೆಯ ನೀರು ಮುಂದಕ್ಕೆ ಹೋಗದಿದ್ದಲ್ಲಿ ಡಕ್ ಹಿಂಭಾಗದ ಮನೆಗಳಿಗೆ ನೀರು ನುಗ್ಗುತ್ತದೆ. ತಾಹಾಕಲ್ಯಾಣ ಮಂಟಪದ ಹಿಂಭಾಗ ನಿರ್ಮಿಸಿರುವ ಹೊಸ ಬಡಾವಣೆಗಳವರು ರಾಜಕಾಲುವೆಯನ್ನು ಬಾಕ್ಸ್ ಚರಂಡಿಯಂತೆ ನಿರ್ಮಿಸಿರುವ ಕಾರಣ ಅಪಾಯ ಕಟ್ಟಿಟ್ಟಬುತ್ತಿ.

ಕಟುಗರಹಳ್ಳವನ್ನು ಒತ್ತುವರಿ ಮಾಡಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವು ಮಾಡಿಸುವ ನಗರಸಭೆ ಪ್ರಯತ್ನಕ್ಕೆ 14 ವರ್ಷಗಳಾದರೂ ಯಶಸ್ಸು ಸಿಕ್ಕಿಲ್ಲ. 2008ರಲ್ಲಿ ಸುರಿದ ಮಳೆಗೆ ಕಟುಗರಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿದ್ದರು. ಹತ್ತಾರು ದ್ವಿಚಕ್ರ ವಾಹನಗಳು, ಮನೆಯ ಸಾಮಾನು ಸರಂಜಾಮು ಲೆಕ್ಕವಿಲ್ಲದಷ್ಟು ನೀರುಪಾಲಾಗಿತ್ತು. ನಗರಸಭೆ ಈ ಬಗ್ಗೆ ಮೊದಲೇ ಎಚ್ಚರಿಕೆ ವಹಿಸಿದರೆ ಉತ್ತಮ ಎನ್ನುತ್ತಾರೆ ಅಶೋಕ ರಸ್ತೆಯ ವಹೀದ್.

‘ಮಳೆಗಾಲದ ಆರಂಭಕ್ಕೂ ಮುನ್ನವೇ ರಾಜಕಾಲುವೆಗಳನ್ನು ಶುದ್ಧಗೊಳಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದೇವೆ. ಕಾಲುವೆಯಲ್ಲಿ ಗಿಡ–ಮರಗಳು ಬೆಳೆದಿದ್ದಲ್ಲಿ ಜೆಸಿಬಿ ಬಳಸುತ್ತೇವೆ. ಇಲ್ಲವಾದಲ್ಲಿ ಪೌರಕಾರ್ಮಿಕರಿಂದ ಶುಚಿ ಮಾಡಿಸಲಾಗುತ್ತಿದೆ’ ಎಂದು ಪೌರಾಯುಕ್ತ ಉಮೇಶ್ ತಿಳಿಸಿದರು.

***

ಗುಮಾಸ್ತರ ಕಾಲೊನಿ ತಗ್ಗು ಪ್ರದೇಶದಲ್ಲಿರುವುದರಿಂದ ನೀರು ನುಗ್ಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗಲು ಪರ್ಯಾಯ ಕಾಲುವೆ ನಿರ್ಮಿಸಲಾಗುತ್ತಿದೆ. ರಾಜಕಾಲುವೆ, ಚರಂಡಿ ಶುಚಿಗೊಳಿಸಿ ಮಳೆಗಾಲಕ್ಕೆ ಸಜ್ಜುಗೊಳಿಸಲಾಗಿದೆ.

ಜೆ.ಟಿ. ಹನುಮಂತರಾಜು, ಪೌರಾಯುಕ್ತ, ಚಿತ್ರದುರ್ಗ

ರಾಜಕಾಲುವೆ ಹಂದಿಗಳ ತಾಣವಾಗಿ ಮಾರ್ಪಟ್ಟಿದೆ. ಸೊಳ್ಳೆಗಳ ಕಾಟ ಹೆಚ್ಚಿದ್ದು, ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ. ಮಲೇರಿಯಾ, ಕಾಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ.

ವೆಂಕಟೇಶ್, ರಹೀಂ ನಗರ, ಚಳ್ಳಕೆರೆ

ಹೊಸ ಬಡಾವಣೆಗೆ ಅನುಮತಿ ನೀಡುವಾಗ ನಿಯಮ ಪಾಲನೆಯ ಬಗ್ಗೆ ಗಮನಿಸಬೇಕು. ಅಧಿಕಾರಿಗಳು ಎಂದೂ ಸ್ಥಳ ಪರಿಶೀಲನೆ ಮಾಡುವುದಿಲ್ಲ.

ಬಸವರಾಜಪ್ಪ, ಚಳ್ಳಕೆರೆ

ರಾಜಕಾಲುವೆಗಳಲ್ಲಿ ಗಿಡ–ಮರ ಬೆಳೆಯದಂತೆ ಎಚ್ಚರ ವಹಿಸಬೇಕು. ಕಾಲುವೆ ಒತ್ತುವರಿ ತಡೆಯಬೇಕು. ನಂಜಯ್ಯನಕೊಟ್ಟಿಗೆಗೆ ಹೋಗುವ ರಸ್ತೆಯಲ್ಲಿನ ಡಕ್ ಎತ್ತರಿಸಬೇಕು.

ತಿಪ್ಪೇಸ್ವಾಮಿ, ಆಶ್ರಯ ಬಡಾವಣೆ ನಿವಾಸಿ, ಹಿರಿಯೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.