ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ಸಂರಕ್ಷಣೆಗೆ ಸರ್ಕಾರ ಬದ್ಧ: ಮುಖ್ಯಮಂತ್ರಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ
Last Updated 17 ಫೆಬ್ರುವರಿ 2022, 4:14 IST
ಅಕ್ಷರ ಗಾತ್ರ

ಸಿರಿಗೆರೆ (ಚಿತ್ರದುರ್ಗ): ರಾಜ್ಯದಲ್ಲಿ ಜಲ ಸಂಪತ್ತು ಹೇರಳವಾಗಿದೆ. ಆದರೆ, ಅದರ ಸದುಪಯೋಗಕ್ಕೆ ಚಿಂತನೆ ಮಾಡುವ ಅಗತ್ಯವಿದೆ. ಜಲ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು.

ಇಲ್ಲಿನ ತರಳಬಾಳು ಮಠದ ಆವರಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಅಂತಿಮ ದಿನದಂದು ನಡೆದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಸದ್ಧರ್ಮ ಸಿಂಹಾಸನಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ಜಲತಜ್ಞ ರಾಜೇಂದ್ರಸಿಂಗ್‌ ಅವರು ಅರಾವಳಿ ಪ್ರದೇಶದಲ್ಲಿ ಮಾಡಿದ ಕಾರ್ಯವನ್ನು ಕಣ್ತುಂಬಿಕೊಂಡಿದ್ದೇನೆ. ಅವರ ಕಾರ್ಯ ಜಲಸಂರಕ್ಷಣೆಗೆ ಸ್ಫೂರ್ತಿ ನೀಡಿದೆ. ವಾಣಿವಿಲಾಸ ಸಾಗರ ಜಲಾಶಯ ಮಹಾರಾಜರ ಕಾಲದಲ್ಲಿ ನಿರ್ಮಾಣವಾಗಿತ್ತು. ಆದರೆ, ನಾಲ್ಕು ದಶಕದಿಂದ ತುಂಬಿರಲಿಲ್ಲ. ಈ ಜಲಾಶಯ ಭರ್ತಿಯಾದರೆ ಮಧ್ಯಕರ್ನಾಟಕಕ್ಕೆ ನೀರು ಸರಬರಾಜು ಮಾಡಲು ಸಾಧ್ಯವಿದೆ’ ಎಂದು ಹೇಳಿದರು.

‘ಮೂಢನಂಬಿಕೆ ತಿರಸ್ಕರಿಸುತ್ತಾ, ಸಮಾಜದಲ್ಲಿ ತಾತ್ವಿಕ ಚಿಂತನ ನೀಡುತ್ತ, ಪ್ರಚಲಿತ ಸಮಸ್ಯೆಗಳಿಗೆ ಪರಿಹಾರ ಹುಡುಕುವ ತರಳಬಾಳು ಹುಣ್ಣಿಮ ಜನರ ಉತ್ಸವವಾಗಿ ಪರಿವರ್ತನೆ ಹೊಂದಿದೆ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸಮಾಜ ಹಾಗೂ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಅವರ ಕಂಪ್ಯೂಟರ್‌ ಜ್ಞಾನ ಅಪಾರ. ಅವರೊಬ್ಬ ವಿಜ್ಞಾನಿ ಹಾಗೂ ತತ್ವಜ್ಞಾನಿಯೂ ಹೌದು’ ಎಂದು ಕೊಂಡಾಡಿದರು.

‘ವಿಧಾನಸೌಧದಿಂದ ಜನಸೌಧಕ್ಕೆ ಕರೆಸಿದವರು ಸಿರಿಗೆರೆ ಶ್ರೀಗಳು. ಬಜೆಟ್‌ ಮಂಡನೆಗೆ ಗುರುಗಳ ದರ್ಶನ ಸ್ಫೂರ್ತಿ ನೀಡುತ್ತದೆ. ಜನಪರ ಆಡಳಿತ, ಜನೋಪಯೋಗಿ ಕಾರ್ಯ ಮುಂದುವರಿಯಲಿದೆ. ರೈತರು, ದುಡಿಯುವ ವರ್ಗ, ಮಹಿಳೆಯರು ಹಾಗೂ ಯುವಕರನ್ನು ಗಮನದಲ್ಲಿ ಇಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುವುದು’ ಎಂದು ಹೇಳಿದರು.

ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ, ‘ವ್ಯಾಜ್ಯಗಳನ್ನು ಪೀಠದಲ್ಲೇ ಇತ್ಯರ್ಥ ಪಡಿಸುವ ವ್ಯವಸ್ಥೆ ಇರುವುದು ತರಳಬಾಳು ಮಠದಲ್ಲಿ ಮಾತ್ರ. ಸ್ವಾಮೀಜಿ ಅವರು ಜನರ ಸಮಸ್ಯೆಗೆ ಸ್ಪಂದಿಸುತ್ತ ಜನರ ಕಣ್ಣೀರು ಒರೆಸುತ್ತಿದ್ದಾರೆ’ ಎಂದು ಹೇಳಿದರು.

‘2011ರ ಬ್ಯಾಚಿನ ಕೆಪಿಎಸ್‌ಸಿ ನೇಮಕಾತಿಯಲ್ಲಿ ಉಂಟಾಗಿರುವ ತೊಡಕು ಬಗೆಹರಿಸುವ ನಿಟ್ಟಿನಲ್ಲಿ ಸ್ವಾಮೀಜಿ ತೋರಿದ ಕಾಳಜಿ ಅನನ್ಯ. ಸರ್ಕಾರದ ಗಮನ ಸೆಳೆದು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ್ದಾರೆ. ಅವರ ಕಾರ್ಯ ಅನುಕರಣೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ, ‘2018ರಲ್ಲಿ ಸಿರಿಗೆರೆಗೆ ಭೇಟಿ ನೀಡಿದಾಗ ಬಹುತೇಕರು ಅಡ್ಡಹಾಕಿ ಬಿಜೆಪಿಗೆ ಬರುವಂತೆ ಒತ್ತಾಯಿಸಿದ್ದರು. 2019ರಲ್ಲಿ ನಾವು ಬಿಜೆಪಿಗೆ ಬಂದ ಪರಿಣಾಮ ಬಿಜೆಪಿ ಸರ್ಕಾರ ಸುಭದ್ರವಾಯಿತು. ಮಠದ ಭಕ್ತರಾದ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಪಟ್ಟದಲ್ಲಿ ಕೂರಿಸಿದ್ದು ಯಡಿಯೂರಪ್ಪ. ಅವರು ನಿತ್ಯ ಸಲಹೆ ನೀಡುತ್ತ ಬಿಜೆಪಿಯ ಭೀಷ್ಮರಾಗಿ ಕಂಗೊಳಿಸುತ್ತಿದ್ದಾರೆ’ ಎಂದರು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಶಾಸಕ ಎಂ.ಚಂದ್ರಪ್ಪ, ಶಾಸಕ ಎಸ್‌.ವಿ.ರಾಮಚಂದ್ರ,ಶಾಸಕ ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಶಾಸಕ ಡಿ.ಜೆ.ಶಾಂತನಗೌಡ ಇದ್ದರು.

ಶಿಕ್ಷಣದ ಬದಲಾವಣೆಗೆ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹಲವು ರೀತಿಯ ಸಲಹೆ ನೀಡಿದ್ದಾರೆ. ಕೊರೊನಾ ಕಾಲದಲ್ಲಿಯೂ ಶಾಲೆಗಳು ಯಾವುದೇ ತೊಂದರೆ ಇಲ್ಲದೇ ನಡೆದಿವೆ.

ಬಿ.ಸಿ.ನಾಗೇಶ್‌, ಶಿಕ್ಷಣ ಸಚಿವ

ದಲಿತರನ್ನು ಶಿಕ್ಷಣದಿಂದ ದೂರ ಇಡುತ್ತಿದ್ದ ಕಾಲದಲ್ಲಿ ಶಾಲೆಗೆ ಪ್ರವೇಶ ಕಲ್ಪಿಸಿದ್ದು ತರಳಬಾಳು ಮಠ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ದಲಿತರಿಗೆ ಶಿಕ್ಷಣ ನೀಡಿದರು. ಈ ಮಠವನ್ನು ದಲಿತರು ಆರಾಧಿಸಬೇಕು.

ಎ.ನಾರಾಯಣಸ್ವಾಮಿ, ಕೇಂದ್ರ ಸಚಿವ

ರೈತ ಮಕ್ಕಳ ವ್ಯಾಸಂಗಕ್ಕೆ ಗ್ರಾಮೀಣ ಭಾಗದಲ್ಲಿ ಶಾಲೆ ತೆರೆದಿದ್ದು ಮಠ. ಬಸವಣ್ಣನವರ ವಚನಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಸಾಗರದಾಚೆಗೆ ತಲುಪಿಸಿದ್ದಾರೆ.

ಜಿ.ಎಂ.ಸಿದ್ದೇಶ್ವರ, ಸಂಸದ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT