ಚಿತ್ರದುರ್ಗ: ಶತಮಾನದ ಹಿತಿಹಾಸ ಹೊಂದಿರುವ ರಾಜ್ಯ ಸರ್ಕಾರಿ ನೌಕರರ ಸಂಘ ರಾಜ್ಯದ ಸಂಘಟನೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ. ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸಂಘದಿಂದ ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ. ನೌಕರರ ಮಕ್ಕಳು ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕದ ವತಿಯಿಂದ ಸೋಮವಾರ ತರಾಸು ರಂಗಮಂದಿರದಲ್ಲಿ ನಡೆದ ಸರ್ವ ಸದಸ್ಯರ ಸಭೆ, ವ್ಯಕ್ತಿತ್ವ ವಿಕಸನ ಕಾರ್ಯಗಾರ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭೆಯ ಹಿಂದಿರುವಂತಹ ಪೋಷಕರು ತಮ್ಮ ಜೀವನದ ತೊಡಕುಗಳನ್ನು ನಿಭಾಯಿಸಿಕೊಂಡು ಉತ್ತಮವಾದ ಜೀವನ ಕಟ್ಟಿಕೊಟ್ಟಿದ್ದಾರೆ. ಅವರನ್ನು ಯಾವುದೋ ವೃದ್ಧಾಶ್ರಮಕ್ಕೆ ದೂಡದೆ, ಉತ್ತಮ ಸಂಸ್ಕಾರವಂತರಾಗಿ, ತಂದೆ-ತಾಯಿಯನ್ನು, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು. ಮುಂದಿನ ದಿನಗಳಲ್ಲಿ ಯಾರ ಮೇಲೆಯೂ ಅವಲಂಬಿತರಾಗದೆ, ಸ್ವಾಭಿಮಾನ ಬದುಕುವ ವಾತಾವರಣ ರೂಪಗೊಳ್ಳಬೇಕು’ ಎಂದರು.
‘ಸಂಘಟನೆಯ ಮೂಲಕ ನೌಕರರ ಸಮಸ್ಯೆಗಳನ್ನು ಸಂಪೂರ್ಣವಾಗಿ ಬಗೆಹರಿಸಲು ಸಾಧ್ಯವಿಲ್ಲವಾದರೂ, ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಅದರಂತೆಯೇ ಸಂಘದ ಮೂಲಕ ಸರ್ಕಾರಕ್ಕೆ ಶಿಫಾರಸು ಮಾಡಿ 7ನೇ ವೇತನ ಆಯೋಗ ಜಾರಿಗೆ ತರುವ ಮೂಲಕ ಇಲ್ಲಿಯವರೆಗೆ ಒಟ್ಟು 25 ಸರ್ಕಾರಿ ಆದೇಶಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ ‘ ಸರ್ಕಾರಿ ನೌಕರರು ಮತ್ತೊಬ್ಬರಿಗೆ ಮಾದರಿಯಾಗಿರಬೇಕು. ನಮ್ಮ ನಡೆ, ನುಡಿಗಳಿಂದ ನಮ್ಮ ವ್ಯಕ್ತಿತ್ವ ಇಮ್ಮಡಿಗೊಳ್ಳಲು ಸಾಧ್ಯ. ನಮ್ಮ ಸಮಾಜ ಮತ್ತು ಮಕ್ಕಳು ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಅರಿವನ್ನು ನಾವು ಹೊಂದಿರಬೇಕು. ಒಬ್ಬ ಸರ್ಕಾರಿ ನೌಕರನು ನಡೆ ನುಡಿಗಳಲ್ಲಿ ಮಾದರಿಯಾಗುವಂತಿರಬೇಕು’ ಎಂದರು.
ಸಂಘದ ರಾಜ್ಯ ಖಜಾಂಚಿ ಸಿದ್ದರಾಮಣ್ಣ, ಹಿರಿಯ ಉಪಾಧ್ಯಕ್ಷ ಎಸ್.ಬಸವರಾಜ್, ಕಾರ್ಯದರ್ಶಿ ನೆಲ್ಕುದ್ರಿ ಸದಾನಂದ, ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ , ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಕ್ಷೇತ್ರ ಸಮನ್ವಯಾಧಿಕಾರಿ ಈ.ಸಂಪತ್ ಕುಮಾರ್, ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಅಭಿನವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.