‘ವೈದ್ಯಕೀಯ ಕಾಲೇಜು’ ಅನುಷ್ಠಾನದಲ್ಲಿ ಸರ್ಕಾರ ವಿಫಲ

7
ಸಂವಾದ ಕಾರ್ಯಕ್ರಮದಲ್ಲಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ

‘ವೈದ್ಯಕೀಯ ಕಾಲೇಜು’ ಅನುಷ್ಠಾನದಲ್ಲಿ ಸರ್ಕಾರ ವಿಫಲ

Published:
Updated:
Deccan Herald

ಚಿತ್ರದುರ್ಗ: ಜಿಲ್ಲಾ ಕೇಂದ್ರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿ ವರ್ಷಗಳು ಉರುಳುತ್ತಿವೆ. ಹೀಗಿದ್ದರೂ ತ್ವರಿತ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗದೇ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ದೂರಿದರು.

ಐಎಂಎ ಸಭಾಂಗಣದಲ್ಲಿ ಶನಿವಾರ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯಿಂದ ‘ವೈದ್ಯಕೀಯ ಕಾಲೇಜು ಜಾರಿ’ ಕುರಿತು ಹಮ್ಮಿಕೊಂಡಿದ್ದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈ ವಿಷಯವಾಗಿ ಎಲ್ಲರೂ ಹೋರಾಟ ನಡೆಸಬೇಕಾದ ಅಗತ್ಯವಿದೆ. ಆದರೆ, ಅದು ರಾಜಕೀಯವಾಗಿ ಬಳಕೆ ಆಗಬಾರದು. ರಾಜ್ಯದ 5 ಕಡೆಗಳಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ 2012ರಲ್ಲೇ ಅನುಮತಿ ದೊರೆತಿದೆ. ಮೊದಲ ಆಯ್ಕೆಯಲ್ಲಿ ಚಿತ್ರದುರ್ಗ ಇತ್ತು. ಆದರೂ ಈವರೆಗೂ ಕಾಮಗಾರಿಯೇ ಪ್ರಾರಂಭ ಆಗದೇ ಇರುವುದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ’ ಎಂದರು.

‘ಸರ್ಕಾರ ಬದಲಾಗುತ್ತಿದ್ದರೂ ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಇಲ್ಲಿ ವೈದ್ಯಕೀಯ ಕಾಲೇಜು ನಿರ್ಮಿಸಿದರೆ ಜಿಲ್ಲೆಯ ಅನೇಕ ಬಡವರಿಗೆ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ. ವೈದ್ಯರಾಗಲು ಕನಸು ಕಾಣುವ ವಿದ್ಯಾರ್ಥಿಗಳಿಗೂ ಒಂದು ರೀತಿಯಲ್ಲಿ ಅನುಕೂಲವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು.

ವೈದ್ಯ ಡಾ. ಪ್ರಕಾಶ್, ‘ಇಲ್ಲಿನ ಜಿಲ್ಲಾ ಆಸ್ಪತ್ರೆಯೂ ಮೊದಲು 1,962 ಹಾಸಿಗೆ ಸಾಮರ್ಥ್ಯದೊಂದಿಗೆ ಪ್ರಾರಂಭವಾಯಿತು. 2003ರಲ್ಲಿ 650 ಹಾಸಿಗೆಗೆ ಮೇಲ್ದರ್ಜೆಗೇರಿತು. ಈಗ ಜಿಲ್ಲೆಯೂ ಸುಮಾರು 16.5 ಲಕ್ಷ ಜನಸಂಖ್ಯೆ ಹೊಂದಿದೆ. ನಿತ್ಯ ಇದೇ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ಸೂಕ್ತ ಸಲಕರಣೆ, ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದೆ’ ಎಂದರು.

‘ಜಿಲ್ಲೆಯ ಶೇ 80ರಷ್ಟು ಗ್ರಾಮೀಣ ಭಾಗದ ಜನತೆ ಸರ್ಕಾರಿ ಆಸ್ಪತ್ರೆಯನ್ನೇ ಹೆಚ್ಚಾಗಿ ಅವಲಂಭಿಸಿದ್ದಾರೆ. ದಿನಕ್ಕೆ ಒಂದು ಸಾವಿರಕ್ಕಿಂತಲೂ ಅಧಿಕ ರೋಗಿಗಳು ಬರುತ್ತಾರೆ. ಅದರಲ್ಲಿ ಒಳರೋಗಿಗಳು 50 ರಿಂದ 100. ಗರ್ಭಿಣಿಯರ ಸಂಖ್ಯೆ 30 ಆಗಿದೆ. ಸಮಸ್ಯೆಗಳ ನಡುವೆಯೇ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ದರಿಂದ ವೈದ್ಯಕೀಯ ಕಾಲೇಜು ಪ್ರಾರಂಭವಾದರೆ ಇವೆಲ್ಲದಕ್ಕೂ ಸೂಕ್ತ ಪರಿಹಾರ ಸಿಗುವ ಸಾಧ್ಯತೆ ಇದೆ’ ಎಂದು ಹೇಳಿದರು.  

ಹೋರಾಟ ಸಮಿತಿ ಅಧ್ಯಕ್ಷ ಶಫೀವುಲ್ಲಾ, ಅಹಿಂದ ಮುಖಂಡ ಮುರುಘಾ ರಾಜೇಂದ್ರ ಒಡೆಯರ್, ಮಕ್ಕಳ ತಜ್ಞ ಡಾ. ದೇವರಾಜ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವುಯಾದವ್, ವಕೀಲ ಪ್ರತಾಪ್ ಜೋಗಿ, ದಮ್ಮ ಸಂಸ್ಥೆಯ ವಿಶ್ವಸಾಗರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !