ಮಂಗಳವಾರ, ಆಗಸ್ಟ್ 16, 2022
29 °C
ಶ್ರೀರಾಂಪುರ ಸುತ್ತಲಿನ ಗ್ರಾಮಗಳಿಗಿಲ್ಲ ಸಮರ್ಪಕ ಸಾರಿಗೆ ಸೌಲಭ್ಯ

ಮುಗಿಯದ ಹೊಸ ಬಸ್ ನಿಲ್ದಾಣ ಕಾಮಗಾರಿ

ರವಿಕುಮಾರ್ ಸಿರಿಗೊಂಡನಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಶ್ರೀರಾಂಪುರ: ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪ್ರಚಾರ ಹಾಗೂ ಮತ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.  ಹೋಬಳಿಯ 9 ಗ್ರಾಮ ಪಂಚಾಯಿತಿಗಳಿಗೆ ಸ್ಪರ್ಧೆಗಿಳಿದಿರುವ ಬಹುತೇಕರಲ್ಲಿ ಮೂಲಸೌಲಭ್ಯಗಳ ಅಭಿವೃದ್ಧಿಗೆ ಸಿದ್ಧ ಯೋಜನೆ ಇಲ್ಲದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಹೊಸದುರ್ಗದ ಕಡೆಯಿಂದ ಶ್ರೀರಾಂಪುರ ಪ್ರವೇಶಿಸುತ್ತಲೇ ಗ್ರಾಮದ ಅವ್ಯವಸ್ಥೆ ಕಣ್ಣಿಗೆ ಬೀಳುತ್ತದೆ. ಬಲಭಾಗಕ್ಕೆ ಉದ್ಘಾಟನೆಗೆ ಕಾಯುತ್ತಿರುವ ಹೊಸ ಬಸ್ ನಿಲ್ದಾಣ, ಅದರ ಮುಂದೆ ಅನಧಿಕೃತ ಗೂಡಂಗಡಿಗಳಿವೆ. ಗ್ರಾಮದ ಒಳಗೆ ಹಲವು ಬಡಾವಣೆಗಳ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕೊಚ್ಚೆಯಿಂದ ತುಂಬಿರುವ ಚರಂಡಿ, ಒತ್ತುವರಿಯಿಂದ ಕಿರಿದಾದ ರಸ್ತೆಗಳು ಕಿರಿಕಿರಿಯುಂಟು ಮಾಡುತ್ತವೆ.

ಶ್ರೀರಾಂಪುರ ಗ್ರಾಮದ ಹೊಸ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿ ಏಳೆಂಟು ವರ್ಷಗಳು ಕಳೆದಿವೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಈಗಾಗಲೇ ಶೌಚಾಲಯದ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ವಾಣಿಜ್ಯ ಮಳಿಗೆಗಳ ಬಾಗಿಲುಗಳು ಹಾಳಾಗಿವೆ. ಕತ್ತಲು ಕವಿಯುತ್ತಿದ್ದಂತೆ ಇದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಡುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ಹೊಸ ಬಸ್ ನಿಲ್ದಾಣದ ಕಾಮಗಾರಿ ಪೂರ್ಣಗೊಂಡಿಲ್ಲ ಎಂಬ ಆರೋಪವಿದೆ.

ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಜಾಗದಲ್ಲಿ ಗೂಡಂಗಡಿಗಳು ತಲೆ ಎತ್ತಿ ಹಲವು ವರ್ಷಗಳು ಕಳೆದಿವೆ. ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಿ ಗ್ರಾಮ ಪಂಚಾಯಿತಿಯಿಂದ ಮಳಿಗೆ ನಿರ್ಮಿಸಲು ಅವಕಾಶವಿದೆ. ಗ್ರಾಮ ಪಂಚಾಯಿತಿಗೆ ನೂತನವಾಗಿ ಆಯ್ಕೆಯಾಗುವ ಸದಸ್ಯರು ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎನ್ನುತ್ತಾರೆ ಸಾರ್ವಜನಿಕರು.

ಸಾರಿಗೆ ಸೌಲಭ್ಯದ ಕೊರತೆ: ಹೊಸದುರ್ಗದಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಡಿಪೊ ಇದೆ. ಆದರೆ, ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸೌಲಭ್ಯ ಕಲ್ಪಿಸಿಕೊಡುವಲ್ಲಿ ವಿಫಲವಾಗಿದೆ. ಶ್ರೀರಾಂಪುರದಿಂದ ಬೆಲಗೂರು, ತಂಡಗ, ಹೊಸಕೆರೆ, ಕುರುಬರಹಳ್ಳಿ, ಮೈಲಾರಪುರ, ನಗರಗೆರೆ ಭಾಗಗಳಿಗೆ ಬಸ್ ಸೌಲಭ್ಯವಿಲ್ಲ. ಕಾಲೇಜು, ಶಾಲೆ, ಬ್ಯಾಂಕ್‌ಗಳಿಗೆ ಹೋಗಿಬರಲು ನಿತ್ಯ ಆಟೊಗಳನ್ನೇ ಅವಲಂಬಿಸಬೇಕಿದೆ. ಶಾಲಾ ದಿನಗಳಲ್ಲಿ ವಿದ್ಯಾರ್ಥಿಗಳು ಆಟೊಗಳಲ್ಲಿ ಕಿಕ್ಕಿರಿದು ತುಂಬಿರುತ್ತಾರೆ.

ಪದವಿ ಕಾಲೇಜಿಗೆ ಬೇಡಿಕೆ

ಶ್ರೀರಾಂಪುರ ಹೋಬಳಿ ವ್ಯಾಪ್ತಿ ಯಲ್ಲಿ 9 ಗ್ರಾಮ ಪಂಚಾ ಯಿತಿಗಳಿದ್ದು, ಶ್ರೀರಾಂಪುರ ಮತ್ತು ಬೆಲಗೂರು ಗ್ರಾಮಗಳಲ್ಲಿ ಪದವಿಪೂರ್ವ ಕಾಲೇಜುಗಳಿವೆ. ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ಪ್ರತಿ ನಿತ್ಯ 25-30 ಕಿ.ಮೀ ದೂರ ಹೋಗಬೇಕಾಗಿದೆ. ಇದರಿಂದ ಗ್ರಾಮೀಣ ಹೆಣ್ಣುಮಕ್ಕಳು ಪದವಿ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.

ಪದವಿ ಕಾಲೇಜು ಸ್ಥಾಪಿಸಿದರೆ ಶ್ರೀರಾಂಪುರ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲ ವಾಗುತ್ತದೆ. ಈ ಬಗ್ಗೆ ಒಂದೂವರೆ ದಶಕದಿಂದ ಸ್ಥಳೀಯರು ಮನವಿ ಮಾಡುತ್ತಿದ್ದಾರೆ. ಪದವಿ ಕಾಲೇಜು ತರುವಂತೆ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳನ್ನು ಜನರು ಒತ್ತಾಯಿಸುತ್ತಿದ್ದಾರೆ.

ಪಿಯು ನಂತರ ಪದವಿ ವ್ಯಾಸಂಗ ಮಾಡುವ ಆಸಕ್ತಿ ಎಲ್ಲರಲ್ಲಿದೆ. ಕಾಲೇಜಿಗೆ ಹೋಗಲು 25 ಕಿ.ಮೀ. ದೂರ ಪ್ರಯಾಣಿಸಬೇಕು. ಶ್ರೀರಾಂಪುರದಲ್ಲಿ ಪದವಿ ಕಾಲೇಜು ಪ್ರಾರಂಭಿಸಿದರೆ ಅನುಕೂಲ.

- ಪುಷ್ಪಲತ, ಶ್ರೀರಾಂಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.