ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಚುನಾವಣೆಯಲ್ಲಿ ಬಿರಿಯಾನಿ ಘಮ!

ತಾರಕಕ್ಕೇರಿದ ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ; ಹೆಚ್ಚಿದ ಆಮಿಷ
Last Updated 25 ಡಿಸೆಂಬರ್ 2020, 6:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಡಿ. 27ರಂದು ನಡೆಯಲಿರುವಅಂತಿಮ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರಚಾರ ಭರಾಟೆ ತಾರಕಕ್ಕೇರಿದೆ.

ಗ್ರಾಮ ಪಂಚಾಯಿತಿ ಚುನಾವಣೆಗೆ ರಾಜಕೀಯದಲ್ಲಿ ವಿಶೇಷ ಸ್ಥಾನವಿದೆ. ರಾಜಕೀಯದಲ್ಲಿ ಭವಿಷ್ಯ ಕಾಣಲು ಇದು ಪ್ರಥಮ ಹೆಜ್ಜೆಯಾಗಿರುವುದು ಮುಖ್ಯ ಕಾರಣ. ಕಳೆದ ಪಂಚಾಯಿತಿ ಚುನಾವಣೆಗಳಿಗೆ ಹೋಲಿಕೆ ಮಾಡಿದಲ್ಲಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಈ ಬಾರಿ ಸ್ಪರ್ಧಿಸುವ ಜತೆಗೆ ಪ್ರಚಾರದಲ್ಲೂ ಹೆಚ್ಚು ಕಂಡು ಬರುತ್ತಿದ್ದಾರೆ.

ಮೇಲ್ನೋಟಕ್ಕೆ ತಾಲ್ಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಪ್ರಮುಖವಾಗಿ ಜಿದ್ದಾಜಿದ್ದಿಯಲ್ಲಿದ್ದಾರೆ. 16 ಗ್ರಾಮ ಪಂಚಾಯಿತಿಗಳಿಂದ 323 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈ ಪೈಕಿ 27 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಅಂತಿಮವಾಗಿ 291 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಒಟ್ಟು 689 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದಾರೆ.

ಬೆಳಿಗ್ಗೆ 7ರಿಂದಲೇ ಚುನಾವಣಾ ಪ್ರಚಾರ ಆರಂಭವಾಗುತ್ತಿದೆ. ಹೋಟೆಲ್‌ಗಳಲ್ಲಿ ತಿಂಡಿ ತಿನ್ನಿಸಿಕೊಂಡು ಮನೆ, ಮನೆಗೆ ಪ್ರಚಾರ ಮಾಡಲಾಗುತ್ತಿದೆ. ತಡರಾತ್ರಿವರೆಗೂ ಮತಯಾಚನೆ ಮಾಡಲಾಗುತ್ತಿದೆ. ಪ್ರತಿ ಮನೆಗೆ 4-5 ಬಾರಿ ಹೋಗಿ ಮತ ಕೇಳಲಾಗುತ್ತಿದೆ. ಗಂಡು ಮಕ್ಕಳು ಕರಪತ್ರ ನೀಡಿ ಮನವಿ ಮಾಡಿದರೆ, ಹೆಣ್ಣು ಮಕ್ಕಳು ಹಣೆಗೆ ಕುಂಕುಮ ಹಚ್ಚಿ ‘ಈ ಸಾರಿ ನಮ್ಮನ್ನು ಕೈಬಿಡಬೇಡಿ’ ಎಂದು ಮಂದಹಾಸ ಬೀರುತ್ತಿದ್ದಾರೆ.

ಬಿರಿಯಾನಿ ಘಮ: ಅನೇಕ ಕಡೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಚಿಕನ್ ಬಿರಿಯಾನಿ ಮೊರೆ ಹೋಗಿದ್ದಾರೆ. 40- 50 ಕೆ.ಜಿ ಬಿರಿಯಾನಿ ಮಾಡಿಸಿ ಮನೆ, ಮನೆಗೆ ಪ್ಯಾಕೆಟ್ ಮಾಡಿ ಕಳಿಸಲಾಗುತ್ತಿದೆ. ಕೆಲವೆಡೆ ನಿರ್ದಿಷ್ಟ ಸ್ಥಳದಲ್ಲಿ ಮಾಡಿಸಿ ಊಟಕ್ಕೆ ಬರುವಂತೆ ಆಹ್ವಾನಿಸಲಾಗುತ್ತಿದೆ. ಎಷ್ಟು ಮಂದಿ ಬಂದರು, ಬಿರಿಯಾನಿ ಪಡೆದುಕೊಂಡರು ಎನ್ನುವುದರ ಮೇಲೆಯೂ ಮತ ಬೀಳುವ ಲೆಕ್ಕ ಹಾಕಲಾಗುತ್ತಿದೆ. ಊರಿನಲ್ಲಿ ಒಬ್ಬ ಅಭ್ಯರ್ಥಿ ಬಿರಿಯಾನಿ ಸೇವೆ ಮಾಡಿದರೆ ಸಾಕು ಉಳಿದವರು ಅನಿವಾರ್ಯವಾಗಿ ಇದನ್ನು ಮಾಡಲೇಬೇಕಿದೆ ಎಂದು ಚಿಕನ್ ಅಂಗಡಿ ಮಾಲೀಕರೊಬ್ಬರು ಹೇಳಿದರು.

ಕೆಲವೆಡೆ ಪ್ರತಿ ಮನೆಗೆ ಒಂದು ಫಾರಂ ಕೋಳಿ ನೀಡಲಾಗಿದೆ. ಇನ್ನೂ ಕೆಲವೆಡೆ ಹೋಟೆಲ್‌ಗಳಲ್ಲಿ ಅಭ್ಯರ್ಥಿಗಳು ನಿತ್ಯ ಟೋಕನ್ ವ್ಯವಸ್ಥೆ ಮಾಡಿದ್ದಾರೆ. ಮತದಾನಕ್ಕೆ ಮೂರು ದಿನ ಬಾಕಿ ಇದ್ದು ಕೊನೆ ದಿನಗಳಲ್ಲಿ ಇನ್ಯಾವ ತಂತ್ರಗಳನ್ನು ಬಳಸಿ ಅಭ್ಯರ್ಥಿಗಳು ಮತದಾರರನ್ನು ಮನವೊಲಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT