ಶನಿವಾರ, ಫೆಬ್ರವರಿ 4, 2023
28 °C
ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನಾ ಕೈಂಕರ್ಯ ಆರಂಭ

ಚಿತ್ರದುರ್ಗ: ಆಂಜನೇಯ ಮೂರ್ತಿಯ ಅದ್ಧೂರಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಇಲ್ಲಿನ ಹೌಸಿಂಗ್‌ ಬೋರ್ಡ್‌ ಕಾಲೊನಿಯ ಸಂಕಷ್ಟಹರ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿರುವ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸ ಸ್ಥಾಪನೆ ಕೈಂಕರ್ಯಗಳು ಶನಿವಾರ ಆರಂಭವಾದವು. ಆಂಜನೇಯಸ್ವಾಮಿ ಮೂರ್ತಿಯ ಮೆರವಣಿಗೆ ನಗರದಲ್ಲಿ ಭವ್ಯವಾಗಿ ನಡೆಯಿತು.

ವಿಶೇಷವಾದ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಪ್ರತಿಷ್ಠಾಪಿಸಲಾಗುತ್ತಿದೆ. ಶನಿವಾರ ಆರಂಭವಾದ ಧಾರ್ಮಿಕ ಕೈಂಕರ್ಯಗಳು ನ.28ರವರೆಗೆ ಮುಂದುವರಿಯಲಿವೆ.

ನಗರದ ರಂಗಯ್ಯನ ಬಾಗಿಲು ಬಳಿಯಿರುವ ಬಸವ ಮಂಟಪದಿಂದ ಪಂಚಮುಖ ಆಂಜನೇಯ ಸ್ವಾಮಿ ವಿಗ್ರಹವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಬಿಜೆಪಿ ಮುಖಂಡ ಡಾ.ಸಿದ್ಧಾರ್ಥ್ ಗುಂಡಾರ್ಪಿ ಮೆರವಣಿಗೆಗೆ ಚಾಲನೆ ನೀಡಿದರು. ತರಹೇವಾರಿ ಪುಷ್ಪಗಳಿಂದ ಅಲಂಕೃತ
ಗೊಂಡ ಟ್ರ್ಯಾಕ್ಟರ್‌ನಲ್ಲಿದ್ದ ವಿಗ್ರಹ ಗಮನ ಸೆಳೆಯಿತು. ಪೂರ್ಣಕುಂಭದೊಂದಿಗೆ ಮಹಿಳೆಯರು ಹೆಜ್ಜೆ ಹಾಕಿದರು.

ರಾಜಬೀದಿಯಲ್ಲಿ ಸಾಗಿದ ಮೆರವಣಯ ವೈಭವವನ್ನು ಸಾಂಸ್ಕೃತಿಕ ಕಲಾತಂಡಗಳು ಹೆಚ್ಚಿಸಿದವು. ಚಂಡೆ ಮೇಳ, ವೀರಗಾಸೆ ಕುಣಿತ, ಡೊಳ್ಳು ಕುಣಿತ, ಕೇರಳದ ದೇವರ ವೇಷಗಳು ಸೇರಿ ಮತ್ತಿತರ ಜನಪದ ಕಲಾಮೇಳಗಳು ಮೆರವಣಿಗೆಯಲ್ಲಿ ಮೇಳೈಸಿದ್ದವು. ರಸ್ತೆ ಬದಿಯಲ್ಲಿ ನಿಂತಿದ್ದ ಭಕ್ತರು ಆಂಜನೇಯಸ್ವಾಮಿ ಮೂರ್ತಿಯನ್ನು ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು. ಮೆರವಣಿಗೆಯಲ್ಲಿ ಯುವಕರು ಕುಣಿದು ಸಂಭ್ರಮಿಸಿದರು.

ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯನ್ನು ದೇವಾಲಯದಲ್ಲಿ ಸ್ವಾಗತಿಸಲಾಯಿತು. ಮೆರವಣಿಗೆ ನಂತರ ಆಲಯ ಪ್ರವೇಶ, ಮಹಾಗಣಪತಿ ಪೂಜೆ, ಸ್ವಸ್ತಿಪುಣ್ಯ ವಾಚನ, ದೇವತಾ ನಾಂದಿ, ಸ್ವಾಮಿಗೆ ಜಲದಿವಾಸ, ಧಾನ್ಯದಿವಾಸ, ಪುಷ್ಪ ದಿವಾಸ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು.

ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ನಗರಸಭೆ ಸದಸ್ಯರಾದ ವೆಂಕಟೇಶ್, ಹರೀಶ್, ಬೆನಕನ ಬಳಗದ ಅಧ್ಯಕ್ಷ ಗುರುಮೂರ್ತಿ, ಸ್ಥಳೀಯ ಲೆಕ್ಕಪರಿಶೋಧನಾ ವರ್ತುಲ ಉಪನಿರ್ದೇಶಕ ಸಿ.ಜಿ.ಶ್ರೀನಿವಾಸ್, ಮುಖಂಡರಾದ ಷಣ್ಮುಖಪ್ಪ, ರವಿಕುಮಾರ್, ಎಂ.ವಿ.ಈಶ್ವರಪ್ಪ ಇದ್ದರು.

ಗಣಪತಿ ಪೂಜೆ ಇಂದು

ದೇಗುಲದಲ್ಲಿ ನ.27 ರಂದು ಸಂಜೆ 4 ಗಂಟೆಯಿಂದ ಗಣಪತಿ ಪೂಜೆ, ಉಮಾ ಮಹೇಶ್ವರ ಪೂಜೆ, ಪಂಚಕಳಸ, ವಾಸ್ತು ಪೂಜೆ, ನವಗ್ರಹ ಪೂಜೆ, ಮೃತ್ಯಂಜಯ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಷ್ಟದಿಕ್ಪಾಲಕರು, ಮೃತ್ಯುಂಜಯ ಹೋಮ, ರಾಷೋಘ್ನ ಹೋಮ, ವಾಸ್ತುಬಲಿ, ಪೂರ್ಣಾಹುತಿ ಬಳಿಕ ಮಹಾಮಂಗಳಾರತಿ ನಡೆಯಲಿವೆ.

ನ.28 ಸೋಮವಾರ ಬೆಳಿಗ್ಗೆ ಆಂಜನೇಯಸ್ವಾಮಿ ಪ್ರಾಣಪ್ರತಿಷ್ಠಾಪಣೆ ನಡೆಯಲಿದೆ. ಪಂಚಾಮೃತ ಅಭಿಷೇಕ, ಗಣಹೋಮ, ಶ್ರೀರಾಮ ತಾರಕ ಹೋಮ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ಜರುಗಲಿವೆ. ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ಧರ್ಮಸಭೆ ನಾಳೆ

ನ.28 ಬೆಳಿಗ್ಗೆ 9 ಗಂಟೆಗೆ ಧರ್ಮಸಭೆ ನಡೆಯಲಿದ್ದು, ಜಗಳೂರು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸುವರು. ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಪ್ರಾಧಿಕಾರದ ಆಯುಕ್ತ ಸೋಮಶೇಖರ್, ಪೌರಾಯುಕ್ತ ಹನುಮಂತರಾಜು, ನಗರಸಭೆ ಸದಸ್ಯೆ ಭಾಗ್ಯಮ್ಮ, ಬೆನಕನ ಬಳಗದ ಅಧ್ಯಕ್ಷ ಗುರುಮೂರ್ತಿ, ಮಹಿಳಾ ಘಟಕದ ಅಧ್ಯಕ್ಷೆ ಪಾರ್ವತಮ್ಮ ಮಹಾದೇವಪ್ಪ ಭಾಗವಹಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು